పరిశుద్ధ గ్రంథము
ಹಳೆಯ ಒಡಂಬಡಿಕೆ
2 ಅರಸುಗಳು
8ನೇ ಅಧ್ಯಾಯ
1 : ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಸರ್ವೇಶ್ವರಸ್ವಾಮಿ ಈ ನಾಡಿಗೆ ಏಳು ವರ್ಷಗಳ ಬರಗಾಲವನ್ನು ಕಳುಹಿಸಲಿದ್ದಾರೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು,” ಎಂದು ಭವಿಷ್ಯ ಹೇಳಿದನು.
2 : ಆಕೆ ದೈವಪುರುಷನ ಅಪ್ಪಣೆಯಂತೆ ತನ್ನ ಮನೆಯವರೊಡನೆ ಸ್ವಂತನಾಡನ್ನು ಬಿಟ್ಟುಹೋಗಿ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದಳು.
3 : ಏಳು ವರ್ಷಗಳಾದನಂತರ ಆಕೆ ಅಲ್ಲಿಂದ ಸ್ವಂತ ನಾಡಿಗೆ ಬಂದು, ಪರರ ಕೈವಶವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡಲು ಅರಸನ ಬಳಿಗೆ ಬಂದಳು.
4 : ಆ ಸಮಯದಲ್ಲೇ ಅರಸನು, ದೈವಪುರುಷನ ಸೇವಕನಾದ ಗೇಹಜಿಗೆ, “ಎಲೀಷನು ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನನಗೆ ವಿವರಿಸು,” ಎಂದು ಆಜ್ಞಾಪಿಸಿದ್ದನು.
5 : ಎಲೀಷನು ಸತ್ತ ಹುಡುಗನಿಗೆ ಜೀವದಾನಮಾಡಿದ ಸಂಗತಿಯನ್ನು ಗೇಹಜಿಯು ವಿವರಿಸುತ್ತಿರುವಾಗಲೇ, ಜೀವದಾನಹೊಂದಿದ ಹುಡುಗನ ತಾಯಿ ತನ್ನ ಹೊಲಮನೆಗಳಿಗಾಗಿ ಮೊರೆಯಿಡಲು ಅರಸನ ಬಳಿಗೆ ಬಂದಳು. ಕೂಡಲೆ ಗೇಹಜಿಯು, “ಅರಸರೇ, ನನ್ನ ಒಡೆಯರೇ, ಎಲೀಷನು ಬದುಕಿಸಿದ ಹುಡುಗನು ಇವನೇ; ಈಕೆ ಇವನ ತಾಯಿ,” ಎಂದು ಹೇಳಿದನು.
6 : ಅರಸನು ಈ ಸಂಗತಿಯ ವಿಷಯವಾಗಿ ಆ ಸ್ತ್ರೀಯನ್ನೇ ವಿಚಾರಿಸಿದನು. ಆಕೆ ಅದರಂತೆಯೇ ಹೇಳಿದಳು. ಆಗ ಅರಸನು ಒಬ್ಬ ಕಂಚುಕಿಯನ್ನು ಕರೆದು, “ಹೋಗಿ ಈಕೆಯ ಹೊಲಮನೆಗಳನ್ನೂ ಈಕೆ ಈ ನಾಡನ್ನು ಬಿಟ್ಟಂದಿನಿಂದ ಇಂದಿನವರೆಗೂ ಈಕೆಗೆ ಸಲ್ಲತಕ್ಕ ಹೊಲದ ಆದಾಯವನ್ನೂ ಕೊಡಿಸು,” ಎಂದು ಆಜ್ಞಾಪಿಸಿ ಅವನನ್ನು ಆಕೆಯ ಜೊತೆಯಲ್ಲೇ ಕಳುಹಿಸಿದನು.
7 : ಒಮ್ಮೆ ಎಲೀಷನು ದಮಸ್ಕಕ್ಕೆ ಹೋದನು. ಆಗ ಸಿರಿಯಾದ ಅರಸನಾದ ಬೆನ್ಹದದನು ಅಸ್ವಸ್ಥನಾಗಿದ್ದನು. ದೈವಪುರುಷ ಬಂದಿದ್ದಾನೆಂಬ ಸುದ್ದಿಯನ್ನು ಕೇಳಿ,
8 : ಅವನು ಹಜಾಯೇಲನನ್ನು ಕರೆದು, “ನೀನು ಕಾಣಿಕೆಯನ್ನು ತೆಗೆದುಕೊಂಡು ದೈವಪುರುಷನ ಬಳಿಗೆ ಹೋಗಿ ನನಗೆ ಗುಣ ಆಗುವುದೋ ಇಲ್ಲವೋ ಎಂಬುದನ್ನು ಅವನ ಮುಖಾಂತರ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸು,” ಎಂದು ಆಜ್ಞಾಪಿಸಿದನು.
9 : ಹಜಾಯೇಲನು ದಮಸ್ಕದ ಶ್ರೇಷ್ಠವಸ್ತುಗಳಲ್ಲಿ, ನಾಲ್ವತ್ತು ಒಂಟೆಗಳು ಹೊರುವಷ್ಟನ್ನು ತೆಗೆದುಕೊಂಡು, ಎಲೀಷನ ಬಳಿಗೆ ಹೋಗಿ ಅವನ ಮುಂದೆ ನಿಂತು, “ನಿಮ್ಮ ಕುಮಾರ, ಸಿರಿಯಾದವರ ಅರಸನಾದ ಬೆನ್ಹದದರು, ತಮಗೆ ಗುಣವಾಗುವುದೋ ಇಲ್ಲವೋ ಎಂಬುದನ್ನು ವಿಚಾರಿಸುವುದಕ್ಕಾಗಿ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದು ಹೇಳಿದನು.
10 : ಆಗ ದೈವಪುರುಷನಾದ ಎಲೀಷನು, “ಖಂಡಿತವಾಗಿ ಗುಣವಾಗುವುದು ಎಂಬುದಾಗಿ ಬೆನ್ಹದದನಿಗೆ ಹೇಳು; ಆದರೂ ಅವನು ಸತ್ತುಹೋಗುವುದು ನಿಶ್ಚಯವೆಂದು ಸರ್ವೇಶ್ವರ ನನಗೆ ತಿಳಿಸಿದ್ದಾರೆ,”
11 : ಎಂದು ಹೇಳಿ ಬಿಗಿ ಮುಖದಿಂದ, ಸ್ಥಿರದೃಷ್ಟಿಯಿಂದ ಹಜಾಯೇಲನನ್ನೇ ದಿಟ್ಟಿಸಿ ನೋಡಿ ಅಳತೊಡಗಿದನು.
12 : ಹಜಾಯೇಲನು, “ನನ್ನೊಡೆಯಾ, ಏಕೆ ಅಳುತ್ತೀರಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಯೇಲರಿಗೆ ಎಷ್ಟು ಕೇಡು ಮಾಡುವೆಯೆಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಣೆಗಳಿಗೆ ಬೆಂಕಿ ಹೊತ್ತಿಸುವೆ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವೆ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವೆ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವೆ,” ಎಂದು ಉತ್ತರಕೊಟ್ಟನು.
13 : ಹಜಾಯೇಲನು ಎಲೀಷನನ್ನು, “ನಿಮ್ಮ ಸೇವಕನಾದ ನಾನು ನಾಯಿಯಂತಿರುತ್ತೇನಷ್ಟೆ; ನನ್ನಿಂದ ಇಂಥ ಮಹಾಕಾರ್ಯವಾಗುವುದು ಹೇಗೆ?” ಎಂದು ಕೇಳಿದನು. ಅವನು, “ನೀನು ಸಿರಿಯಾದವರ ರಾಜನಾಗುವೆಯೆಂದು ಸರ್ವೇಶ್ವರ ನನಗೆ ತಿಳಿಸಿದ್ದಾರೆ,” ಎಂದನು.
14 : ಹಜಾಯೇಲನು ಎಲೀಷನನ್ನು ಬಿಟ್ಟು ತನ್ನ ಯಜಮಾನನ ಬಳಿಗೆ ಹೋದಾಗ ಅವನು, “ಎಲೀಷ ಏನು ಹೇಳಿದರು?” ಎಂದು ಕೇಳಿದನು. ಅದಕ್ಕೆ ಇವನು, “ನಿಮಗೆ ಖಂಡಿತವಾಗಿ ಗುಣವಾಗುವುದೆಂದು ಹೇಳಿದರು,” ಎಂಬುದಾಗಿ ಉತ್ತರಕೊಟ್ಟನು.
15 : ಮರುದಿನ ಬೆಳಿಗ್ಗೆ ಇವನು ಒಂದು ಹೊದಿಕೆಯನ್ನು ನೀರಿನಲ್ಲಿ ತೋಯಿಸಿ ಅರಸನ ಮುಖದ ಮೇಲೆ ಹಾಕಿದನು; ಅವನು ಸತ್ತನು. ಹಜಾಯೇಲನು ಅವನ ಸ್ಥಾನದಲ್ಲಿ ಅರಸನಾದನು.
16 : ಅಹಾಬನ ಮಗನೂ ಇಸ್ರಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಜುದೇಯದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು.
17 : ಇವನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು.
18 : ಇವನು ಅಹಾಬನ ಮಗಳನ್ನು ಮದುವೆಮಾಡಿಕೊಂಡದ್ದರಿಂದ ಅಹಾಬನ ಕುಟುಂಬದವರಾದ ಇಸ್ರಯೇಲ್ ಅರಸರ ಹೆಜ್ಜೆಯಲ್ಲೇ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
19 : ಆದರೂ ಸರ್ವೇಶ್ವರ ಜುದೇಯದ ರಾಜ್ಯವನ್ನು ನಾಶಮಾಡಲಿಲ್ಲ. “ನಿನ್ನನ್ನು ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂಬುದಾಗಿ ತಮ್ಮ ದಾಸ ದಾವೀದನಿಗೆ ಮಾಡಿದ ಪ್ರಮಾಣವನ್ನು ಸ್ಮರಿಸಿ ಅದನ್ನು ಉಳಿಸಿದರು.
20 : ಇವನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರುದ್ಧ ದಂಗೆ ಎದ್ದು ಸ್ವತಂತ್ರರಾಗಿ ತಮಗೆ ಒಬ್ಬ ಅರಸನನ್ನು ನೇಮಿಸಿಕೊಂಡರು.
21 : ಆಗ ಯೆಹೋರಾಮನು ತನ್ನ ಎಲ್ಲಾ ರಥಬಲಸಹಿತವಾಗಿ ಜೋರ್ಡನ್ ಹೊಳೆಯನ್ನು ದಾಟಿ ಚಾಯೀರಿಗೆ ಹೋದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಂಡರು. ಅವನು ರಾತ್ರಿಯಲ್ಲೆದ್ದು ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು. ಅವನ ಸೈನ್ಯದವರೂ ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
22 : ಹೀಗೆ ಎದೋಮ್ಯರು ಯೆಹೂದ್ಯರಿಗೆ ವಿರುದ್ಧ ದಂಗೆ ಎದ್ದರು. ಅವರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿರುತ್ತಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು.
23 : ಯೆಹೋರಾಮನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಜುದೇಯದ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
24 : ಅವನು ನಿಧನನಾಗಿ ಪಿತೃಗಳ ಬಳಿ ಸೇರಲು ಅವನ ಶವವನ್ನು ದಾವೀದನಗರದೊಳಗೆ ಕುಟುಂಬ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಅಹಜ್ಯನು ಅರಸನಾದನು.
25 : ಅಹಾಬನ ಮಗನೂ ಇಸ್ರಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಜುದೇಯದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.
26 : ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೆರಡು ವರ್ಷದ ವಯಸ್ಸಿನವನಾಗಿದ್ದನು. ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಇಸ್ರಯೇಲರ ಅರಸನಾದ ಒಮ್ರಿಯನ ಮೊಮ್ಮಗಳಾದ ಅತಲ್ಯ ಎಂಬಾಕೆ ಇವನ ತಾಯಿ.
27 : ಇವನಿಗೂ ಅಹಾಬನ ಕುಟುಂಬದವರಿಗೂ ಬೀಗತನ ಇದ್ದುದರಿಂದ ಇವನು ಅವರ ಹೆಜ್ಜೆಯಲ್ಲೇ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
28 : ಇದಲ್ಲದೆ, ಇವನು ಸಿರಿಯಾದವರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುವುದಕ್ಕಾಗಿ ಅಹಾಬನ ಮಗ ಯೋರಾಮನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಹೋದನು.
29 : ಸಿರಿಯಾದವರು ಯೋರಾಮನನ್ನು ಗಾಯಪಡಿಸಿದರು. ಯುದ್ಧದಲ್ಲಾದ ಗಾಯಗಳನ್ನು ಮಾಗಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.