पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
16ನೇ ಅಧ್ಯಾಯ
1 : ನೀಡು ದೇವಾ ರಕ್ಷಣೆಯನು I ನಾ ನಿನಗೆ ಶರಣಾಗತನು II
2 : “ನೀನೇ ನನ್ನೊಡೆಯ"ನೆಂದು ನಾ ನುಡಿದೆ I ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II
3 : ಸಂತರು ನಾಡಿಗೆ ತಿಲಕವು I ಅವರಲ್ಲಿದೆ ಎನಗೆ ಒಲವು II
4 : ಅನ್ಯದೇವರನ್ನು ಬಯಸುವವರನ್ನು ಕಾದಿದೆ ಕಠಿಣ ಕಷ್ಟ I ಅವರಂತೆ ರಕ್ತಪಾನತರ್ಪಣೆ ಮಾಡಲೆನಗಿಲ್ಲ ಇಷ್ಟ I ಆ ದೇವರುಗಳ ನಾಮೋಚ್ಚಾರಣೆ ನನ್ನ ತುಟಿಗೆ ಅನಿಷ್ಟ II
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ II
6 : ನನ್ನ ಪಾಲಿಗೆ ಬಂದುದು ರಮಣೀಯವಾದುದು I ನನಗದೆ ಪರಮಾನಂದದಾಯಕವಾದುದು II
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II
9 : ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II
10 : ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II