ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
27ನೇ ಅಧ್ಯಾಯ
1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I ನಾನಾರಿಗೂ ಅಳುಕೆನು II ನನ್ನ ಬಾಳಿಗಾಧಾರ ಪ್ರಭುವೆ I ನಾನಾರಿಗೂ ಅಂಜೆನು II
2 : ಕೇಡು ಮಾಡಬಂದರೆನಗೆ ಕೊಲೆಗಡುಕರು I ಎಡವಿಬಿದ್ದರು, ತಾವೇ ಅಳಿದುಹೋದರು II
3 : ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II
4 : ನಾನೊಂದನು ಕೋರಿದೆ ಪ್ರಭುವಿನಿಂದ I ನಾನದನ್ನೇ ನಿರೀಕ್ಷಿಸಿದೆ ಆತನಿಂದ : I ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II
5 : ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II
6 : ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ ನಡೆವೆನು I ದೇವಾಲಯದೊಳು ಜಯಜಯ ಘೋಷದೊಡನೆ ಬಲಿಗಳನರ್ಪಿಸುವೆನು I ಪ್ರಭುವಿಗೆ ಹಾಡುವೆನು, ವಾದ್ಯ ನುಡಿಸುತ ಕೊಂಡಾಡುವೆನು II
7 : ಪ್ರಭೂ, ನಿನಗೆ ಮೊರೆಯಿಡುವೆನು I ಕರುಣಿಸೆನಗೆ ಸದುತ್ತರವನು II
8 : “ಅರಸೆನ್ನ ಮುಖದರುಶನವನು", ಎಂದೆ ನೀನು I “ಅರಸುವೆನು ಅದನೆ", ಎಂದು ಮರುನುಡಿದೆ ನಾನು II
9 : ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II
10 : ಹೆತ್ತವರು ತೊರೆದುಬಿಟ್ಟರೇನು I ಕರ್ತನು ಪೊರೆಯದಿರನು ನನ್ನನು II
11 : ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು I ಶತ್ರುರಹಿತ ಹಾದಿಯಲಿ ನಡೆಸು ಎನ್ನನು II
12 : ತಳ್ಳಬೇಡೆನ್ನನು ವೈರಿಗಳ ವಶಕ್ಕೆ I ಸುಳ್ಳುಸಾಕ್ಷಿಗಳು, ಕ್ರೂರಿಗಳವರೆನಗೆ II
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
14 : ಪ್ರಭುವನು ಎದುರುನೋಡುತ್ತಿರು ಮನವೇ I ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II