ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
51ನೇ ಅಧ್ಯಾಯ
1 : ಕೃಪಾಳು, ದೇವಾ, ಕರುಣಿಸೆನ್ನನು I ಕರುಣಾನಿಧಿ, ಅಳಿಸೆನ್ನ ದೋಷವನು II
2 : ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು I ದೋಷಪರಿಹರಿಸಿ ಶುದ್ಧಗೊಳಿಸೆನ್ನನು II
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ I ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ II
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ I ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ II ನಿನ್ನ ನಿರ್ಣಯವು ನ್ಯಾಯಯುತ I ನೀ ನೀಡುವ ತೀರ್ಪು ನಿರ್ಲಿಪ್ತ II
5 : ನಾ ಜನಿಸಿದೆ ಪಾಪಪಂಕದಲೆ I ದ್ರೋಹಿ ನಾ ಮಾತೃಗರ್ಭದಿಂದಲೆ II
6 : ಅಂತರಂಗ ಶುದ್ಧಿಯನು ನೀ ಬಯಸುತಿ I ಅಂತರ್ಯ ಜ್ಞಾನವನು ಉದಯಗೊಳಿಸುತಿ II
7 : ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ ಶುದ್ಧನಾಗುವೆ I ನೀ ತೊಳೆದೆಯಾದರೆ, ಹಿಮಕ್ಕಿಂತ ನಾ ಬೆಳ್ಳಗಾಗುವೆ II
8 : ಹರ್ಷಾನಂದವನು ಮೊಳಗಿಸೆನ್ನೊಳು I ಪುಳಕಗೊಳ್ಳುವುವು ನೀ ಮುರಿದೆಲುಬುಗಳು II
9 : ನನ್ನ ಪಾಪದೋಷಕೆ ವಿಮುಖನಾಗು I ಸರ್ವದ್ರೋಹಗಳನು ಅಳಿಸಿಹಾಕು II
10 : ಶುದ್ಧ ಹೃದಯವನು ದೇವಾ, ನಿರ್ಮಿಸು I ಅಂತರಂಗವನು ಚೇತನಗೊಳಿಸು II
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ I ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ II
12 : ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು I ವಿಧೇಯನಾಗಿ ನಡೆವ ಸಿದ್ಧಮನಸ್ಸನು ನೀಡು II
13 : ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ I ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ II
14 : ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ I ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ II
15 : ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು I ಸಾರುವುದೆನ್ನ ಬಾಯಿ ನಿನ್ನ ನುಡಿಗಳನು II
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ I ದಹನ ಬಲಿಯಿತ್ತರು ನಿನಗೆ ಬೇಕಿಲ್ಲ II
17 : ಮುರಿದ ಮನವೇ ದೇವನೊಲಿವ ಯಜ್ಞವು I ನೊಂದು ಬೆಂದ ಮನವನಾತ ಒಲ್ಲೆಯೆನನು II
18 : ಸಿಯೋನಿಗೆ ದೇವಾ, ಶುಭವನು ಕರುಣಿಸು I ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II
19 : ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II