ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ರೂತಳು
1ನೇ ಅಧ್ಯಾಯ
- Verse 1: ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನೊಬ್ಬನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು.
- Verse 2: ಅವನ ಹೆಸರು ಎಲಿಮೆಲೆಕ್; ಅವನ ಪತ್ನಿಯ ಹೆಸರು ನವೊಮಿ. ಮಹ್ಲೋನ್ ಮತ್ತು ಕಿಲ್ಯೋನ್ ಅವರ ಇಬ್ಬರು ಪುತ್ರರು. ಇವರು ಇಸ್ರಯೇಲ್ ವಂಶದ ಎಫ್ರಾತಕುಲಕ್ಕೆ ಸೇರಿದವರು, ಬೆತ್ಲೆಹೇಮಿನವರು.
- Verse 3: ಇವರು ಮೋವಾಬ್ ನಾಡಿನಲ್ಲಿ ವಾಸಿಸುತ್ತಿದ್ದಾಗ ಎಲಿಮೆಲೆಕನು ಮರಣ ಹೊಂದಿದನು. ವಿಧವೆಯಾದ ನವೊಮಿ ಇಬ್ಬರು ಗಂಡುಮಕ್ಕಳೊಡನೆ ಅಲ್ಲೇ ಉಳಿದಳು.
- Verse 4: ಹುಡುಗರು ಇಬ್ಬರೂ, ಮೋವಾಬ್ಯ ಹುಡುಗಿಯರನ್ನು ವಿವಾಹ ಆದರು. ಒಬ್ಬಳ ಹೆಸರು ಒರ್ಫಾ ಮತ್ತು ಇನ್ನೊಬ್ಬಳು ರೂತ್. ಅವರು ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಾಸಮಾಡಿದ ನಂತರ,
- Verse 5: ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳು ಆದಳು.
- Verse 6: ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ತನ್ನ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆಗಳಾಗಿವೆ ಎಂಬ ಸಮಾಚಾರ ಮೋವಾಬ್ ನಾಡಿನಲ್ಲಿದ್ದ ನವೊಮಿಗೆ ತಿಳಿದು ಬಂದಿತು.
- Verse 7: ಆದ್ದರಿಂದ ಅವಳು ಅಲ್ಲಿಗೆ ಹಿಂದಿರುಗಿ ಹೋಗಲು ಸಿದ್ಧತೆಮಾಡಿ ಜುದೇಯಕ್ಕೆ ಹೊರಟಳು. ಸೊಸೆಯರು ಅವಳ ಜೊತೆಯಲ್ಲೆ ಹೋದರು.
- Verse 8: ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ನವೊಮಿ ಅವರಿಗೆ: “ನೀವು ಇಬ್ಬರೂ ನಿಮ್ಮ ತವರುಮನೆಗಳಿಗೆ ಹಿಂದಿರುಗಿರಿ. ನನಗೂ ಮರಣಹೊಂದಿದ ನನ್ನ ಮಕ್ಕಳಿಗೂ ನೀವು ಒಳಿತು ಮಾಡಿದಿರಿ.
- Verse 9: ಸರ್ವೇಶ್ವರ ನಿಮಗೂ ಹಾಗೆಯೇ ಒಳಿತನ್ನು ಮಾಡಲಿ. ನೀವಿಬ್ಬರೂ ಪುನಃ ಮದುವೆಯಾಗಿ ಸುಖವಾಗಿರುವಂತೆ ಅನುಗ್ರಹಿಸಲಿ!” ಎಂದು ಹರಸಿ ಅವರನ್ನು ಬೀಳ್ಕೊಡುತ್ತಾ ಮುದ್ದಿಟ್ಟಳು.
- Verse 10: ಆದರೆ ಅವರು, “ಇಲ್ಲಮ್ಮಾ, ನಿಮ್ಮನ್ನು ಬಿಟ್ಟು ಹೋಗಲಾರೆವು. ನಾವೂ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸ್ವಜನರ ಬಳಿಗೆ ಬರುತ್ತೇವೆ,” ಎಂದು ಅಳಲಾರಂಭಿಸಿದರು.
- Verse 11: ಆಗ ನವೊಮಿ, “ಮಕ್ಕಳೇ, ನೀವು ಹಿಂತಿರುಗುವುದು ಒಳ್ಳೆಯದು. ನನ್ನ ಸಂಗಡ ಏಕೆ ಬರಬೇಕೆಂದಿರುವಿರಿ? ನೀವು ಪುನಃ ಮದುವೆಯಾಗುವುದಕ್ಕೆ ನನಗೆ ಬೇರೆ ಮಕ್ಕಳಿರುವರೇ?
- Verse 12: ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ ಸಂತಾನಭಾಗ್ಯದ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹಡೆದರೂ
- Verse 13: ಅವರು ಬೆಳೆದು ದೊಡ್ಡವರಾಗುವವರೆಗೂ ಮದುವೆಯಾಗದೆ ಇರುವಿರೋ? ಬೇಡ, ಮಕ್ಕಳೇ, ಸರ್ವೇಶ್ವರ ನನ್ನ ಕೈ ಬಿಟ್ಟಿದ್ದಾರೆ, ನಿಮಗಾಗಿ ನಾನು ಬಹಳ ವಿಷಾದಿಸುತ್ತೇನೆ,” ಎಂದು ಸಮಾಧಾನ ಹೇಳಿದಳು.
- Verse 14: ಅವರು ಇದನ್ನು ಕೇಳಿ ಇನ್ನೂ ಹೆಚ್ಚಾಗಿ ಅತ್ತರು. ಅನಂತರ ಒರ್ಫಾ ಅತ್ತೆಗೆ ಮುತ್ತಿಟ್ಟು ತನ್ನ ಮನೆಗೆ ಹಿಂದಿರುಗಿ ಹೋದಳು. ರೂತಳು ಮಾತ್ರ ಅತ್ತೆಯನ್ನು ಬಿಟ್ಟುಹೋಗಲಿಲ್ಲ.
- Verse 15: ಆಗ ನವೊಮಿ ರೂತಳಿಗೆ: “ನೋಡು, ನಿನ್ನ ಓರಗಿತ್ತಿಯು ತನ್ನ ಜನಾಂಗದವರ ಬಳಿಗೂ ತನ್ನ ಕುಲದೇವರ ಬಳಿಗೂ ಹಿಂದಿರುಗಿ ಹೋಗಿದ್ದಾಳೆ. ನೀನೂ ಅವಳಂತೆಯೇ ಹೋಗಿಬಿಡು,” ಎಂದು ಒತ್ತಾಯಪಡಿಸಿದಳು.
- Verse 16: ಅದಕ್ಕೆ ರೂತಳು: “ನಿಮ್ಮನ್ನು ಬಿಟ್ಟು ಹೋಗುವಂತೆ ಒತ್ತಾಯಪಡಿಸಬೇಡಿ. ನೀವು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುತ್ತೇನೆ. ನೀವು ಎಲ್ಲಿ ವಾಸಿಸಿದರೂ ನಾನು ಅಲ್ಲೇ ವಾಸಿಸುತ್ತೇನೆ.
- Verse 17: ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು; ನೀವು ಸಾಯುವಲ್ಲೇ ನಾನು ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಲ್ಲಿಯೂ ನಾನು ನಿಮ್ಮನ್ನು ಬಿಟ್ಟಿರಲಾರೆ. ಇಲ್ಲದಿದ್ದರೆ ಸರ್ವೇಶ್ವರ ನನಗೆ ತಕ್ಕ ದಂಡನೆಯನ್ನು ವಿಧಿಸಲಿ!” ಎಂದು ಬೇಡಿಕೊಂಡಳು.
- Verse 18: ರೂತಳು ತನ್ನ ಸಂಗಡ ಬರಲು ನಿರ್ಧರಿಸಿದ್ದಾಳೆಂದು ತಿಳಿದು ನವೊಮಿ ಅವಳನ್ನು ಮತ್ತೆ ಒತ್ತಾಯಪಡಿಸಲಿಲ್ಲ.
- Verse 19: ಹಾಗೆಯೇ ಪ್ರಯಾಣವನ್ನು ಮುಂದುವರೆಸಿ ಅವರಿಬ್ಬರೂ ಬೆತ್ಲೆಹೇಮನ್ನು ತಲುಪಿದರು. ಅವರು ಊರಿಗೆ ಹಿಂದಿರುಗಿ ಬಂದ ಸಂಗತಿ ಜನರಲ್ಲಿ ಕುತೂಹಲ ಮೂಡಿಸಿತು. ಊರಿನ ಹೆಂಗಸರು, “ಈಕೆ ನವೊಮಿಯಲ್ಲವೇ?” ಎಂದು ವಿಚಾರಿಸತೊಡಗಿದರು.
- Verse 20: ಅದಕ್ಕೆ ಅವಳು, “ನನ್ನನ್ನು ‘ನವೊಮಿ’ ಎಂದು ಕರೆಯಬೇಡಿ; ‘ಮಾರಾ’ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತ ದೇವರು ನನ್ನನ್ನು ಬಹಳ ದುಃಖಪಡಿಸಿದ್ದಾರೆ.
- Verse 21: ಸಿರಿವಂತಳಾಗಿ ಇಲ್ಲಿಂದ ಹೋದೆ. ಗತಿಹೀನಳನ್ನಾಗಿ ಸರ್ವೇಶ್ವರ ನನ್ನನ್ನು ಹಿಂದಕ್ಕೆ ಕರೆತಂದಿದ್ದಾರೆ. ಹೀಗೆ ಸರ್ವಶಕ್ತ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವಾಗ ನೀವು ನನ್ನನ್ನು ನವೊಮಿ ಎಂದು ಕರೆಯುವುದು ಸರಿಯೇ?’ ಎಂದು ಉತ್ತರಕೊಟ್ಟಳು.
- Verse 22: ಹೀಗೆ ನವೊಮಿ ತನ್ನ ಮೋವಾಬ್ಯ ಸೊಸೆಯಾದ ರೂತಳ ಸಂಗಡ ಬೆತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿ ಪ್ರಾರಂಭವಾಗಿತ್ತು