வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
32ನೇ ಅಧ್ಯಾಯ
1 : ಯಾರ ಪಾಪ ಪರಿಹಾರವಾಗಿದೆಯೋ I ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು II
2 : ಯಾರಪರಾಧವನು ಪ್ರಭು ಎಣಿಸಿಲ್ಲವೋ I ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು II
3 : ಪಾಪ ನಿವೇದನೆ ಮಾಡದೆ ನಾ ಮೌನದಿಂದಿರಲು I ದಿನವೆಲ್ಲ ನರಳಿ ಸವೆದುಹೋದವು ನನ್ನೆಲುಬುಗಳು II
4 : ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ ಭಾರವಾಗಿತ್ತು ಹಗಲಿರುಳು I ಬೇಸಿಗೆಯ ನೀರಿನಂತೆ ಬತ್ತಿಹೋಗಿತ್ತು ನನ್ನ ಶರೀರದ ತಿರುಳು II
5 : ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು I ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು II “ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು I ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು II
6 : ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ I ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ II
7 : ನೀನೆ ನನಗೆ ಮರೆಯು, ಆಪತ್ತಿನಲಾಸರೆಯು I ನನ್ನನು ಆವರಿಸುವ ಉದ್ಧಾರಕ ನಾದವು II
8 : ಪ್ರಭು ಇಂತೆಂದನು : “ಕಲಿಸುವೆನು, ನಾ ನಿನಗೆ ತಿಳಿಸುವೆನು ಸನ್ಮಾರ್ಗವನು I ಕಟಾಕ್ಷಿಸಿ ನಿನ್ನನು, ಈವೆನು ಸದಾಲೋಚನೆಯನು II
9 : ‘ಬುದ್ಧಿಹೀನರಾಗದಿರಿ ಕತ್ತೆ, ಕುದುರೆಗಳಂತೆ I ಸ್ವಾಧೀನವಾಗವವು ಕಟ್ಟುಕಡಿವಾಣವಿಲ್ಲದೆ’ II
10 : ‘ದುಷ್ಟರ ಕಷ್ಟನಷ್ಟಗಳು ಅನೇಕ I ಪ್ರಭುವನು ನಂಬಿದವರ ಸುತ್ತ ಮರುಕ’ ” II
11 : ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ I ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ ವಿಷಯದಲಿ II