पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
28ನೇ ಅಧ್ಯಾಯ
1 : ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II
2 : ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II
3 : ದುರುಳರೊಡನೆ ದೂಡಬೇಡ, ದುರ್ಜನರೊಡನೆ ವಿಸರ್ಜಿಸಬೇಡೆನ್ನನು I ಪರರಿಗವರು ನುಡಿವರು ಶಾಂತಿಯನು ಉದರದಲ್ಲಿಡುವರು ಕ್ರೋಧವನು II
4 : ಕೇಡಿಗರು ಪರರಿಗೆ ಮಾಡಿದುದ ತಾವೇ ಉಣ್ಣಮಾಡು I ಅವರ ದುಷ್ಟಕಾರ್ಯಗಳಿಗೆ ತಕ್ಕುದಾದ ಶಿಕ್ಷೆ ನೀಡು II
5 : ಅರಿಯರವರು ಪ್ರಭುವಿನ ಕಾರ್ಯಗಳನು, ಆತನ ಕೈಕೆಲಸಗಳನು I ಈ ಕಾರಣ ಕೆಡವಿಬಿಡುವನು ಪ್ರಭು, ಮರಳಿ ಏಳಬಿಡನವರನು II
6 : ಪ್ರಭುವಿಗೆನ್ನ ಕೃತಜ್ಞತಾ ವಂದನೆ I ಆಲಿಸಿದನವನು ನನ್ನ ವಿಜ್ಞಾಪನೆ II
7 : ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II
8 : ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II
9 : ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II