வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
107ನೇ ಅಧ್ಯಾಯ
1 : ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು I ಆತನ ಪ್ರೀತಿ ಶಾಶ್ವತ, ಆತನು ಒಳ್ಳೆಯವನು II
2 : ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು I ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು II
3 : ಅಂತೆಯೇ ವಂದಿಸಲಿ ಬಂದವರು ಚತುರ್ದಿಕ್ಕುಗಳಿಂದ I ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ ದೇಶಗಳಿಂದ II
4 : ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II
5 : ನರಳಿದರು ಹಸಿವೆ ಬಾಯಾರಿಕೆಯಿಂದ I ಸೊರಗಿದರು ಮನೋಯಾತನೆಯಿಂದ II
6 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
7 : ಸರಿಯಾದ ದಾರಿಯಲಿ ನಡೆಸಿದನವರನು I ಸೇರಮಾಡಿದನು ಜನವಾಸಿಸುವ ಊರನು II
8 : ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗೆ ಆತನೆಸಗಿದ ಅತಿಶಯಗಳನು II
9 : ಬಾಯಾರಿದವರ ಆಸೆಯನ್ನಾತ ಪೂರೈಸಿದನು I ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು II
10 : ದೇವರಾಜ್ಞೆಯನು ವಿರೋಧಿಸಿದ ಕಾರಣ I ಪರಾತ್ಪರನಾಜ್ಞೆಯನು ಹೀಗಳೆದ ಕಾರಣ II
11 : ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ I ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ II
12 : ಕರಗಿತ್ತವರ ಹೃದಯ ಕಡುಕಷ್ಟದಿಂದ I ಎಡವಿ ಬಿದ್ದಿದ್ದರು ಅಸಹಾಯತೆಯಿಂದ II
13 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
14 : ಕತ್ತಲು, ಕಗ್ಗತ್ತಲಿಂದವರನು ಹೊರತಂದನು I ಅವರ ಬೇಡಿಬಂಧನಗಳನು ಮುರಿದುಹಾಕಿದನು II
15 : ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
16 : ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II
17 : ರೋಗಿಗಳಾದರವರು ಅನಾಚಾರದ ನಿಮಿತ್ತ I ಬಾಧೆಗೊಳಗಾದರವರು ಪಾಪಕಾರ್ಯಗಳ ನಿಮಿತ್ತ II
18 : ಅಸಹ್ಯಪಟ್ಟರು ಅನ್ನ ಆಹಾರಗಳಿಗೆ I ಹತ್ತಿರವಾದರವರು ಮೃತ್ಯುದ್ವಾರಕೆ II
19 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
20 : ಗುಣಪಡಿಸಿದನವರನು ತನ್ನ ವಾಣಿಯಿಂದ I ತಪ್ಪಿಸಿದನು ಅವರನು ವಿನಾಶಕೂಪದಿಂದ II
21 : ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
22 : ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು I ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು II
23 : ಹಡಗನು ಹತ್ತಿ ಕಡಲನು ದಾಟಿದರು I ಸಾಗರ ಹಾಯ್ದುವ್ಯಾಪಾರ ಗೈದರು II
24 : ಕಂಡರು ಪ್ರಭುವಿನ ಪವಾಡಗಳನು I ಸಮುದ್ರದೊಳಾತನ ಅದ್ಭುತಗಳನು II
25 : ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I ತರಂಗಗಳು ಭೊರ್ಗರೆದವು ಅದರೊಂದಿಗೆ II
26 : ಗಗನಕ್ಕೇರಿದರು, ಅಗಾಧಕ್ಕಿಳಿದರು I ಗಂಡಾಂತರಕೆ ಸಿಲುಕಿ ಕರಗಿಹೋದರು II
27 : ಅಡ್ಡಾಡಿದರು, ಹೊಯ್ದಾಡಿದರು ಕುಡುಕರಂತೆ I ದಿಕ್ಕುತೋರದವರಾದರು ದಕ್ಷತೆ ಸಾಲದೆ II
28 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
29 : ಆ ಬಿರುಗಾಳಿಯನಾತ ಶಾಂತಪಡಿಸಿದ I ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II
30 : ತಂದಿತು ಪ್ರಶಾಂತತೆ ಸಂತಸವನವರಿಗೆ I ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II
31 : ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
32 : ಕೀರ್ತಿಸಲಿ ಆತನನು ನೆರೆದ ಸಭೆಯಲಿ I ಹಾಡಿಹೊಗಳಲಿ ಹಿರಿಯರಾ ಕೂಟದಲಿ II
33 : ನೀಚ ನಿವಾಸಿಗಳ ಕಾರಣದಿಂದ I ನದಿಗಳನೂ ಮರುಭೂಮಿಯಾಗಿಸಿದ II
34 : ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II
35 : ಕೆರೆಯಾಗಿಸಿದಾ ಮರುಭೂಮಿಯನು I ಊಟೆಯಾಗಿಸಿದ ಆ ಒಣನೆಲವನು II
36 : ಹಸಿದವರನು ನೆಲೆಗೊಳಿಸಿದನಲ್ಲಿ I ವಾಸಿಸಲು ನಗರವನು ಕಟ್ಟಿದರಲ್ಲಿ II
37 : ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು I ಕೂಡಿಸಿಕೊಂಡರು ಅಧಿಕವಾದ ಆದಾಯವನು II
38 : ಅಭಿವೃದ್ಧಿಯಾದರು ಆತನಾಶೀರ್ವಾದದಿಂದಲೆ I ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ II
39 : ತದನಂತರ ಕುಗ್ಗಿತವರ ಅಂಕೆ ಸಂಖ್ಯೆ I ಕಷ್ಟಸಂಕಟ, ತಾಪತ್ರಯಗಳ ಮಧ್ಯೆ II
40 : ತೃಣೀಕರಿಸಿದನು ಪ್ರಭು ಅವರಧಿಪತಿಗಳನು I ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು II
41 : ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ I ಹೆಚ್ಚಿಸಿದನವರ ಸಂತತಿಯನು ಕುರಿಮಂದೆ ಹಾಗೆ II
42 : ಇದಕಂಡು ಹಿಗ್ಗುವರು ಸಜ್ಜನರೆಲ್ಲರು I ಬಾಯಿ ಮುಚ್ಚಿಕೊಳ್ಳುವರು ದುರ್ಜನರು II
43 : ಪರ್ಯಾಲೋಚಿಸಲಿವುಗಳನು ಬುದ್ಧಿವಂತರು I ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು II