ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
122ನೇ ಅಧ್ಯಾಯ
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I ಆಯಿತೆನಗೆ ಆನಂದ, ಜನರೆನ್ನ ಕರೆದಾಗ II
2 : ನನ್ನ ಕಾಲುಗಳು ಓ ಜೆರುಸಲೇಮೇ I ತಲುಪಿವೆ ನಿನ್ನ ಪುರದ್ವಾರಗಳನೇ II
3 : ನೋಡು, ಜೆರುಸಲೇಮ್ ಪಟ್ಟಣವಿದು I ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು II
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I ದಾವೀದನ ಮನೆತನದವರ ಸಿಂಹಾಸನಗಳು II
6 : ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ I “ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ II
7 : ಶುಭವಿರಲೀ ನಿನ್ನೀ - ಪೌಳಿಗೋಡೆಗಳೊಳಗೆ” II ಸಂರಕ್ಷಣೆ ಇರಲಿ ನಿನ್ನ ಅರಮನೆಗಳೊಳಗೆ” II
8 : ನನ್ನ ಬಂಧುಬಳಗದವರ ನಿಮಿತ್ತ I “ನಿನಗೆ ಶುಭವಿರಲಿ” ಎಂಬುದು ನನ್ನ ಮತ II
9 : ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ I ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ II