ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಅರಸುಗಳು
3ನೇ ಅಧ್ಯಾಯ
- Verse 1: ಸೊಲೊಮೋನನು ಈಜಿಪ್ಟಿನ ಅರಸ ಫರೋಹನ ಮಗಳನ್ನು ಮದುವೆಮಾಡಿಕೊಂಡು ಅವನ ಅಳಿಯನಾದ. ತನ್ನ ಅರಮನೆಯನ್ನು, ಸರ್ವೇಶ್ವರನ ಮಹಾದೇವಾಲಯವನ್ನು ಹಾಗು ಜೆರುಸಲೇಮಿನ ಸುತ್ತಣ ಗೋಡೆಯನ್ನು ಕಟ್ಟಿಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲೇ ಇರಿಸಿಕೊಂಡನು.
- Verse 2: ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು.
- Verse 3: ಸೊಲೊಮೋನನು ಸರ್ವೇಶ್ವರನನ್ನು ಪ್ರೀತಿಸಿ, ತನ್ನ ತಂದೆ ದಾವೀದನ ವಿಧಿಗಳನ್ನು ಕೈಗೊಳ್ಳುತ್ತಿದ್ದರೂ ಆ ಪೂಜಾಸ್ಥಳಗಳಲ್ಲೇ ಬಲಿಯರ್ಪಿಸುತ್ತಿದ್ದನು; ಅಲ್ಲಿಯೇ ಧೂಪಾರತಿ ಎತ್ತುತ್ತಿದ್ದನು.
- Verse 4: ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರಬಲಿಗಳನ್ನು ಸಮರ್ಪಿಸಿದಾಗ,
- Verse 5: ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
- Verse 6: ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣಗೊಳಿಸಿದ್ದೀರಿ.
- Verse 7: ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
- Verse 8: ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
- Verse 9: ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
- Verse 10: ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
- Verse 11: ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
- Verse 12: ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
- Verse 13: ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ.
- Verse 14: ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು.
- Verse 15: ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.
- Verse 16: ಒಂದು ದಿನ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
- Verse 17: ಅವರಲ್ಲಿ ಒಬ್ಬಳು ಅರಸನಿಗೆ, “ಒಡೆಯಾ, ಕೇಳಿ; ನಾನೂ ಇವಳೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಒಂದು ಮಗವನ್ನು ಹೆತ್ತೆ.
- Verse 18: ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು; ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ.
- Verse 19: ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
- Verse 20: ಮಧ್ಯರಾತ್ರಿಯಲ್ಲಿ ಇವಳೆದ್ದು, ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ, ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಮಗ್ಗುಲಲ್ಲಿ ಇಟ್ಟುಕೊಂಡಳು. ಸತ್ತುಹೋದ ತನ್ನ ಮಗುವನ್ನು ನನ್ನ ಮಗ್ಗುಲಲ್ಲಿಟ್ಟಳು.
- Verse 21: ನಾನು ಬೆಳಿಗ್ಗೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ,” ಎಂದು ಹೇಳಿದಳು.
- Verse 22: ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗ; ಸತ್ತಿರುವವನು ನಿನ್ನ ಮಗ,” ಎಂದು ನುಡಿದಳು. ಮೊದಲನೆಯವಳು ಮತ್ತೆ, “ಇಲ್ಲ ಸತ್ತಿರುವವನು ನಿನ್ನ ಮಗ ಬದುಕಿರುವವನು ನನ್ನ ಮಗ,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
- Verse 23: ಆಗ ಅರಸನು, “ಜೀವದಿಂದಿರುವ ಕೂಸು ನನ್ನದು, ಸತ್ತಿರುವುದು ನಿನ್ನದು,’ ಎಂದು ಒಬ್ಬಳು ಹೇಳುತ್ತಾಳೆ; ಇನ್ನೊಬ್ಬಳು, ‘ಇಲ್ಲ, ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು,’ ಎನ್ನುತ್ತಾಳೆ.
- Verse 24: ನನಗೊಂದು ಕತ್ತಿಯನ್ನು ತಂದುಕೊಡಿ,” ಎಂದು ಸೇವಕರಿಗೆ ಹೇಳಿದನು.
- Verse 25: ಅವರು ತಂದರು. ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು, ಎರಡು ಭಾಗಮಾಡಿ, ಅರ್ಧವನ್ನು ಅವಳಿಗೂ ಅರ್ಧವನ್ನು ಇವಳಿಗೂ ಕೊಡಿ,” ಎಂದು ಅಪ್ಪಣೆಮಾಡಿದನು.
- Verse 26: ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳುಕರಗಿತು; “ನನ್ನೊಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟುಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು.
- Verse 27: ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು.
- Verse 28: ಇಸ್ರಯೇಲರೆಲ್ಲರೂ ಅರಸನ ಈ ತೀರ್ಪನ್ನು ಕೇಳಿದರು. ನ್ಯಾಯನಿರ್ಣಯಿಸುವುದಕ್ಕೆ ಈತನಲ್ಲಿ ದೇವದತ್ತ ಜ್ಞಾನವಿದೆ ಎಂದು ತಿಳಿದು ಅವನ ಬಗ್ಗೆ ಅಪಾರ ಗೌರವ ಉಳ್ಳವರಾದರು.