ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಅರಸುಗಳು
21ನೇ ಅಧ್ಯಾಯ
- Verse 1: ಅನಂತರ ಸಂಭವಿಸಿದ ಘಟನೆಗಳು ಇವು; ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷೀತೋಟವಿತ್ತು.
- Verse 2: ಅಹಾಬನು ಆ ನಾಬೋತನಿಗೆ, “ನಿನ್ನ ದ್ರಾಕ್ಷೀತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು.
- Verse 3: ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು.
- Verse 4: ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು.
- Verse 5: ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟಮಾಡುವುದಿಲ್ಲ? ನಿಮಗೆ ಯಾವ ಚಿಂತೆ?” ಎಂದು ಕೇಳಿದಳು.
- Verse 6: ಅವನು, “ನಾನು ಜೆಸ್ರೀಲಿನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷೀತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ,” ಎಂದು ಉತ್ತರಕೊಟ್ಟನು.
- Verse 7: ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು.
- Verse 8: ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
- Verse 9: ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ: ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ;
- Verse 10: ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು.
- Verse 11: ಅವನ ಊರಿನ ಹಿರಿಯರೂ ಪ್ರಧಾನಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು.
- Verse 12: ಉಪವಾಸವನ್ನು ಪ್ರಕಟಿಸಿದರು, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು;
- Verse 13: ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
- Verse 14: ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು.
- Verse 15: ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು.
- Verse 16: ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.
- Verse 17: ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು.
- Verse 18: “ನೀನು ಹೋಗಿ ಸಮಾರಿಯಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ;
- Verse 19: ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.”
- Verse 20: ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡುಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ.
- Verse 21: ಸರ್ವೇಶ್ವರ ನಿನ್ನನ್ನು ಕುರಿತು, ‘ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದುಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು.
- Verse 22: ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು,’ ಎನ್ನುತ್ತಾರೆ.
- Verse 23: ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ‘ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು;
- Verse 24: ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ,” ಎಂದನು.
- Verse 25: ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
- Verse 26: ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು.
- Verse 27: ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದುಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು.
- Verse 28: ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ,
- Verse 29: “ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡಿಸುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.