வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
29ನೇ ಅಧ್ಯಾಯ
1 : ಸುರಪುತ್ರರೇ, ಪ್ರಭುವಿನ ಸ್ತುತಿಮಾಡಿರಿ I ಬಲುಮೆ, ಮಹಿಮೆ, ಅವನದೇ ಎಂದು ಸಾರಿರಿ II
2 : ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I ಪೂಜಿಸಿರಿ ಪವಿತ್ರಾಂಬರರಾಗಿ ಆತನನು II
3 : ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II
4 : ಪ್ರಭುವಿನ ಧ್ವನಿ ಶಕ್ತಿಯುತ I ಆತನ ಶಬ್ಧ ವೈಭವಯುತ II
5 : ಆತನ ಗರ್ಜನೆಗೆ ಮುರಿದುಬೀಳುವುವು ದೇವದಾರು ಮರಗಳು I ಹೌದ್ಹೌದು, ಸೀಳಿ ಹೋಳಾಗುವುವು ಲೆಬನೋನಿನ ಮಹಾ ವೃಕ್ಷಗಳು II
6 : ಜಿಗಿಯುವುದು ಲೆಬನೋನ್ ಪರ್ವತ ಎಳೆಗರುವಿನಂತೆ I ನೆಗೆಯುವುದು ಗಿರಿ ಸಿಯೋನ್ ಕಾಡೆಮ್ಮೆಯ ಕರುವಂತೆ II
7 : ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II
8 : ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II
9 : ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು I ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II
10 : ಜಲಪ್ರಳಯದೊಳು ಪ್ರಭು ಆಸೀನನಾಗಿಹನು I ಯುಗಯುಗಾಂತರಕು ಅರಸನಾಗಿ ಆಳುವನು II
11 : ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು I ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು II