P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
25ನೇ ಅಧ್ಯಾಯ
- Verse 1: ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು. ಜುದೇಯದ ಅರಸ ಹಿಜ್ಕೀಯನ ಲೇಖಕರು ಸಂಗ್ರಹಿಸಿದ ನುಡಿಗಳು:
- Verse 2: ವಿಷಯಗಳನ್ನು ರಹಸ್ಯವಾಗಿಡುವ ದೇವರಿಗೆ ಮಹಿಮೆ; ವಿಷಯಗಳನ್ನು ವಿಮರ್ಶಿಸುವ ರಾಜರಿಗೆ ಹಿರಿಮೆ.
- Verse 3: ಆಕಾಶವು ಉನ್ನತ, ಭೂಮಿಯು ಅಗಾಧ, ಅಂತೆಯೇ ರಾಜರ ಮನಸ್ಸು ಅಗೋಚರ.
- Verse 4: ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ದಕ್ಕುವುದು ಚೊಕ್ಕ ಒಡವೆ.
- Verse 5: ಅಂತೆಯೆ ರಾಜನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ರಾಜ್ಯಭಾರ ನೀತಿಯಾಧಾರದಿಂದ ಸುಸ್ಥಿರ.
- Verse 6: ರಾಜನ ಸನ್ನಿಧಾನದಲ್ಲಿ ನಿನ್ನನ್ನೇ ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನದಲ್ಲಿ ನಿಂತುಕೊಳ್ಳಬೇಡ.
- Verse 7: ಘನವಂತರ ಮುಂದೆ ಕೆಳಗಣ ಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತ “ಇನ್ನೂ ಮೇಲಕ್ಕೆ ಬಾ” ಎಂದು ಕರೆಸಿಕೊಳ್ಳುವುದು ಲೇಸು.
- Verse 8: ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಓಡಬೇಡ; ಕಡೆಗೆ ಅವನು ನಿನ್ನ ಮಾನಕಳೆದಾಗ ಏನು ಮಾಡುವೆ, ಯೋಚಿಸು.
- Verse 9: ವ್ಯಾಜ್ಯವನ್ನು ನೆರೆಯವನ ಸಂಗಡವೆ ಚರ್ಚಿಸಿ ತೀರ್ಮಾನಿಸಿಕೊ; ನೆರೆಹೊರೆಯವರ ಗುಟ್ಟನ್ನು ಬಯಲು ಮಾಡಬೇಡ.
- Verse 10: ಬಯಲು ಮಾಡಿದರೆ ಕೇಳುವವನು ನಿನ್ನನ್ನೆ ಅವಮಾನಗೊಳಿಸಾನು, ನಿನಗೆ ಬರುವ ಅಪಕೀರ್ತಿ ಅಳಿಯದೆ ಉಳಿದೀತು.
- Verse 11: ಸಮಯೋಚಿತ ಮಾತು ಬೆಳ್ಳಿ ತಟ್ಟೆಯಲ್ಲಿ ಖಚಿತವಾದ ಬಂಗಾರದ ಹಣ್ಣು.
- Verse 12: ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು.
- Verse 13: ಸುಗ್ಗಿಯ ಕಾಲದಲ್ಲಿ ಹಿಮದ ತಂಪು ಹೇಗೋ ಹಾಗೆ ಕಳುಹಿಸುವ ಒಡೆಯನಿಗೆ ಪ್ರಾಮಾಣಿಕ ದೂತನೂ ಹಾಗೆ.
- Verse 14: ಗಾಳಿಯಿದೆ, ಮೋಡವಿದೆ, ಆದರೆ ಮಳೆಯಿಲ್ಲ; ಕೊಡದೆಯೆ ತಾನೊಬ್ಬ ದಾನಿಯೆಂದು ಕೊಚ್ಚಿಕೊಳ್ಳುವವನೂ ಹಾಗೆಯೆ.
- Verse 15: ಸಹನಶೀಲತೆಯಿಂದ ಅರಸನನ್ನೂ ಒಲಿಸಿಕೊಳ್ಳಬಹುದು; ಮೃದುವಾದ ನಾಲಿಗೆ ಎಲುಬನ್ನೂ ಮುರಿಯಬಲ್ಲದು.
- Verse 16: ಜೇನು ಸಿಕ್ಕಿದರೆ ಅಳತೆಯಿಂದ ತಿನ್ನು, ಮಿತಿಮೀರಿದರೆ ವಾಂತಿಯಾದೀತು.
- Verse 17: ಪದೇ ಪದೇ ನೆರೆಯವನ ಮನೆಗೆ ಹೋಗಬೇಡ, ಬೇಸರಗೊಂಡು ನಿನ್ನನ್ನು ಹಗೆಮಾಡಾನು.
- Verse 18: ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಕೊಡತಿಗೆ, ಕತ್ತಿಗೆ, ಹರಿತವಾದ ಬಾಣಕ್ಕೆ ಸಮಾನನು.
- Verse 19: ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು ಕುಂಟಕಾಲನ್ನು ನಂಬಿದಂತಾಗುವುದು.
- Verse 20: ಮನಗುಂದಿದವನಿಗೆ ಸಂಗೀತ ಹಾಡುವುದೆಂದರೆ ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆ, ಉರಿಗಾಯಕ್ಕೆ ಉಪ್ಪು ಹಚ್ಚಿದಂತೆ.
- Verse 21: ಹಗೆಯವನು ಹಸಿದಿದ್ದರೆ ಅನ್ನ ನೀಡು, ಬಾಯಾರಿದ್ದರೆ ಕುಡಿಯಲು ಕೊಡು.
- Verse 22: ಹೀಗೆ ಅವನ ತಲೆಯ ಮೇಲೆ ಉರಿಕೆಂಡ ಸುರಿವೆ; ಸರ್ವೇಶ್ವರನಿಂದಲೂ ಪ್ರತಿಫಲ ಪಡೆಯುವೆ.
- Verse 23: ಮಳೆ ಬರುವುದು ಪಡುವಣ ಗಾಳಿಯಿಂದ; ಮುಖಕ್ಕೆ ಸಿಟ್ಟು ಬರುವುದು ಚಾಡಿ ನಾಲಿಗೆಯಿಂದ.
- Verse 24: ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಿಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
- Verse 25: ದೂರನಾಡಿನಿಂದ ಬಂದ ಶುಭವರದಿ, ದಣಿದ ಪ್ರಾಣಕ್ಕೆ ತಣ್ಣೀರ ತೃಪ್ತಿ.
- Verse 26: ದುಷ್ಟರಿಗೆ ಬಿಟ್ಟುಕೊಡುವ ನೀತಿವಂತ ಕೆಸರಿನ ಬುಗ್ಗೆಗೆ, ಕೊಳಕು ಚಿಲುಮೆಗೆ ಸಮಾನ.
- Verse 27: ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಗೌರವದ ಮೇಲೆ ಗೌರವ ಬಯಸುವುದು ಸರಿಯಲ್ಲ.
- Verse 28: ಆತ್ಮಸ್ವಾಧೀನವಲ್ಲದ ಮನುಷ್ಯ ಗೋಡೆಬಿದ್ದು ಕಾವಲಿಲ್ಲದ ಹಾಳೂರು.