P. O. C ബൈബിള്
ಹಳೆಯ ಒಡಂಬಡಿಕೆ
ಯೆಶಾಯ
21ನೇ ಅಧ್ಯಾಯ
- Verse 1: ಕಡಲಡವಿಯ ಕುರಿತು ದೈವೋಕ್ತಿ : ದಕ್ಷಿಣ ಸೀಮೆಯ ನಾಡನ್ನು ಕಸದಂತೆ ಗುಡಿಸುವ ಸುಂಟರಗಾಳಿಯ ಹಾಗೆ, ಅರಣ್ಯದ ಕಡೆಯ ಭಯಂಕರ ನಾಡಿನಿಂದ ಗಂಡಾಂತರ ಬರಲಿದೆ.
- Verse 2: ಘೋರ ದರ್ಶನವೊಂದು ನನಗೆ ಕಂಡುಬಂತು: ದ್ರೋಹಿ ದ್ರೋಹವೆಸಗುತ್ತಿದ್ದಾನೆ. ಕೊಳ್ಳೆಗಾರ ಕೊಳ್ಳೆಹೊಡೆಯುತ್ತಿದ್ದಾನೆ. ಏಲಾಮೇ ಮುನ್ನುಗ್ಗು ! ಮೇದ್ಯವೇ, ಮುತ್ತಿಗೆ ಹಾಕು ! ಬಾಬಿಲೋನಿನಿಂದ ನಿನಗೊದಗಿದ ಗೋಳಾಟವನ್ನು ನಿಲ್ಲಿಸುತ್ತೇನೆ.
- Verse 3: ನಾನು ಕಂಡ ಈ ಭೀಕರ ದರ್ಶನದಿಂದ ನನಗೆ ಸೊಂಟ ಮುರಿದಂತಾಗಿದೆ. ಹೆರಿಗೆಯಂಥ ಬೇನೆಯುಂಟಾಗಿದೆ. ಕಿವಿ ಕಿತ್ತುಹೋಗುವಂತಿದೆ. ಕಣ್ಣು ಕರುಡಾಗುವಂತಿದೆ.
- Verse 4: ಹೃದಯ ಬಡಿದುಕೊಳ್ಳುತ್ತಿದೆ. ಭಯದಿಂದ ಮೈ ನಡುಗುತ್ತಿದೆ. ನಾ ಬಯಸಿದ ಸಂಜೆಯೇ ನನಗೆ ಅಂಜಿಕೆ ತರಬೇಕೆ?
- Verse 5: ಔತಣ ಸಿದ್ಧವಾಗಿದೆ, ಚಾಪೆ ಹಾಸಿದ್ದಾರೆ. ಅತಿಥಿಗಳು ಭೋಜನ ಮಾಡುತ್ತಾ ಕುಡಿಯುತ್ತಾ ಇದ್ದಾರೆ. ಇದೋ, ಇದ್ದಕ್ಕಿದ್ದಂತೆ ಕೂಗೊಂದು ಕೇಳಿಬರುತ್ತಿದೆ : “ಪ್ರಭುಗಳೇ, ಎದ್ದೇಳಿ, ಗುರಾಣಿಗಳನ್ನು ಅಣಿಗೊಳಿಸಿರಿ.”
- Verse 6: ಆಗ (ಸರ್ವೇಶ್ವರ ಸ್ವಾಮಿ) ನನಗೆ ಹೀಗೆಂದರು : “ಹೋಗು, ಪಹರೆಯೊಬ್ಬನನ್ನು ಇಡು. ಅವನು ಕಂಡದ್ದನ್ನು ವರದಿಮಾಡಲಿ.
- Verse 7: ಜೋಡಿಜೋಡಿಯಾಗಿ ಬರುವ ಸವಾರರ ಪಂಕ್ತಿಯನ್ನೂ ಕತ್ತೆಗಳ ಹಾಗೂ ಒಂಟೆಗಳ ಸಾಲನ್ನೂ ನೋಡಿದಾಗ, ಎಚ್ಚರಿಕೆಯಿಂದ ಗಮನಿಸಲಿ !”
- Verse 8: ಬಳಿಕ ಪಹರೆಯವನು ಸಿಂಹಧ್ವನಿಯಿಂದ : “ಸ್ವಾಮಿ, ಹಗಲೆಲ್ಲಾ ಕಾವಲು ಗೋಪುರದಲ್ಲಿ ನಿಂತಿದ್ದೇನೆ. ರಾತ್ರಿಯಲ್ಲೂ ಕಾವಲುಗೈದಿದ್ದೇನೆ.
- Verse 9: ಇಗೋ, ಸವಾರರು ಜೋಡಿಜೋಡಿಯಾಗಿ ಬರುತಿಹರು,” ಎಂದು ಕೂಗಿ ಹೇಳುತ್ತಿದ್ದಾನೆ. ಅನಂತರ ಅವನು, “ಬಾಬಿಲೋನ್ ಬಿದ್ದುಹೋಯಿತು. ಅದರ ಪೂಜಾ ವಿಗ್ರಹಗಳೆಲ್ಲ ಒಡೆದು ಬೀದಿಪಾಲಾಗಿವೆ,” ಎಂದನು.
- Verse 10: ನನ್ನ ಪ್ರಜೆಯೇ, ನನ್ನ ಕಣಜದ ದವಸವೇ, ಬಡಿತಕ್ಕೆ ಈಡಾದ ಜನರೇ, ಇಸ್ರಯೇಲರ ದೇವರಾದ ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯಿಂದ ನಾನು ಕೇಳಿದ್ದನ್ನೇ ತಿಳಿಸುತ್ತಿದ್ದೇನೆ.
- Verse 11: ‘ದೂಮ’ ಕುರಿತ ದೈವೋಕ್ತಿ : “ಪಹರೆಯವನೇ, ರಾತ್ರಿ ಕಳೆಯುವುದು ಯಾವಾಗ? ಪಹರೆಯವನೇ, ಕತ್ತಲು ಕಳೆಯುವುದು ಯಾವಾಗ?” ಎಂಬ ಕೂಗು ಸೇಯಾರಿನಿಂದ ನನಗೆ ಕೇಳಿಬಂತು.
- Verse 12: ಅದಕ್ಕೆ ಪಹರೆಯವನು, “ಹಗಲು ಬರುತ್ತಿದೆ ಮತ್ತೆ ರಾತ್ರಿಯೂ ಬರುತ್ತದೆ. ಬೇಕಾದರೆ ಆಮೇಲೆ ಬಂದು ವಿಚಾರಿಸಿರಿ,” ಎಂದನು.
- Verse 13: ಅರೇಬಿಯ ವಿಷಯವಾದ ದೈವೋಕ್ತಿ : ದೇದಾದಿನ ಜನರೇ, ಒಂಟೆ ಸವಾರರೇ, ಅರೇಬಿಯದ ಮರುಭೂಮಿಯಲ್ಲಿ ಬೀಡು ಬಿಡುವವರೇ,
- Verse 14: “ಬಾಯಾರಿದವರಿಗೆ ನೀರನ್ನು ಕೊಡಿ. ತೇಮಾ ನಾಡಿನ ನಿವಾಸಿಗಳೇ, ವಲಸೆ ಬಂದವರಿಗೆ ಉಣಲು ಕೊಡಿ.
- Verse 15: ಅವರೆಲ್ಲರು ಖಡ್ಗದಿಂದ, ಹಿರಿದ ಕತ್ತಿಯಿಂದ, ಹೂಡಿದ ಬಿಲ್ಲಿನಿಂದ, ಯುದ್ಧದ ಬಾಧೆಯಿಂದ ತಪ್ಪಿಸಿಕೊಂಡು ಓಡಿಬಂದಿರುವರು.”
- Verse 16: ಸರ್ವೇಶ್ವರ ನನಗೆ ಹೀಗೆಂದರು : “ಗುಲಾಮಗಿರಿಯ ವಾಯಿದೆಯ ಪ್ರಕಾರ, ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವ ಗತಿಸಿಹೋಗುವುದು.
- Verse 17: ಅಲ್ಲಿನ ಬಿಲ್ಲುಗಾರರಲ್ಲಿ ಉಳಿದವರಾಗಲೀ, ಕೇದಾರಿನ ರಣವೀರರಾಗಲೀ, ವಿರಳರಾಗುವರು. ಇಸ್ರಯೇಲರ ದೇವರಾದ ಸರ್ವೇಶ್ವರ ಸ್ವಾಮಿ ನಾನೇ ಇದನ್ನು ನುಡಿದಿದ್ದೇನೆ.”