पवित्र बाइबिल
ಹಳೆಯ ಒಡಂಬಡಿಕೆ
2 ಸಮುವೇಲನು
3ನೇ ಅಧ್ಯಾಯ
1 : ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಬಹುದಿನಗಳವರೆಗೆ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶ ದುರ್ಬಲವಾಗುತ್ತಾ ಬಂದಿತು.
2 : ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಆರು: ಚೊಚ್ಚಲ ಮಗ ಅಮ್ನೋನನು; ಇವನು ಜೆಸ್ರೀಲಿನವಳಾದ ಅಹೀನೋವಮಳ ಮಗ.
3 : ಎರಡನೆಯವನು ಕಿಲಾಬನು; ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳ ಮಗ. ಮೂರನೆಯವನು ಅಬ್ಷಾಲೋಮನು; ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಪುತ್ರ.
4 : ನಾಲ್ಕನೆಯವನು ಅದೋನೀಯನು; ಇವನು ಹಗ್ಗೀತಳ ಮಗ.
5 : ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು; ಆರನೆಯವನು ಇತ್ರಾಮನು. ಇವನು ದಾವೀದನ ಹೆಂಡತಿ ಆದ ಎಗ್ಲಳ ಮಗ. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರು.
6 : ಸೌಲನ ಸೇನೆಗೂ ದಾವೀದನ ಸೇನೆಗೂ ಯುದ್ಧ ನಡೆಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಪ್ರಬಲನಾಗಿದ್ದನು.
7 : ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯನ್ನು ಕೂಡಿದ್ದೇಕೆ?” ಎಂದು ಕೇಳಿದನು.
8 : ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈವರೆಗೆ ನಾನು ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಬಂಧುಮಿತ್ರರಿಗೂ ಪ್ರಾಮಾಣಿಕನಾಗಿ ನಡೆದುಕೊಂಡೆನಲ್ಲವೇ? ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲ. ಆದರೂ ಈಗ ಈ ಹೆಂಗಸಿನ ಕಾರಣ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
9 : ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದವರೆಗಿರುವ ಎಲ್ಲ ಇಸ್ರಯೇಲರಲ್ಲೂ ಯೆಹೂದ್ಯರಲ್ಲೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸುವುದಾಗಿ ಸರ್ವೇಶ್ವರನಾದ ದೇವರು ದಾವೀದನಿಗೆ ವಾಗ್ದಾನ ಮಾಡಿದ್ದಾರೆ.
10 : ಆ ವಾಗ್ದಾನವನ್ನು ನಾನು ನೆರವೇರಿಸದೆ ಹೋದರೆ ಅವರು ನನಗೆ ಏನುಬೇಕಾದರೂ ಮಾಡಲಿ,” ಎಂದನು.
11 : ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
12 : ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ, “ಈ ನಾಡು ಯಾರದು? ನೀನು ನನ್ನೊಡನೆ ಒಪ್ಪಂದ ಮಾಡಿಕೊಂಡರೆ ಇಸ್ರಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವೆನು. ಹಾಗು ನನ್ನ ಬೆಂಬಲ ನಿನಗಿರುವುದು,” ಎಂದು ಹೇಳಿಸಿದನು.
13 : ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಪ್ಪಂದಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಕಾರ್ಯವನ್ನು ಮಾಡಬೇಕು; ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ ನೀನು ನನ್ನ ಮುಖವನ್ನು ನೋಡಕೂಡದು,” ಎಂದು ಉತ್ತರಕೊಟ್ಟನು.
14 : ಇದಲ್ಲದೆ, ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ನಾನು ನೂರುಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದುಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು,” ಎಂಬುದಾಗಿ ಆಜ್ಞಾಪಿಸಿದನು.
15 : ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆದು ತರಿಸಿದನು.
16 : ಆಗ ಪಲ್ಟೀಯೇಲನು ಅಳುತ್ತಾ ಬಹುರೀಮಿನವರೆಗೆ ಆಕೆಯ ಹಿಂದೆ ಬಂದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗು, ನಡೆ,” ಎಂದು ಹೇಳಲು ಅವನು ಹಿಂದಿರುಗಿಹೋದನು.
17 : ಅಬ್ನೇರನು ಇಸ್ರಯೆಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಬಹುದಿನದಿಂದ ಅಪೇಕ್ಷಿಸಿದಿರಿ. ಈಗ ಅವಕಾಶ ಒದಗಿದೆ.
18 : ಸರ್ವೇಶ್ವರ ದಾವೀದನ ವಿಷಯವಾಗಿ, “ನನ್ನ ದಾಸ ದಾವೀದನ ಮುಖಾಂತರ ನನ್ನ ಪ್ರಜೆಗಳಾದ ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸುವೆನು,” ಎಂದು ನುಡಿದಿದ್ದಾರಲ್ಲವೇ? ಎಂದು ಹೇಳಿಸಿದನು.
19 : ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು, ಇಸ್ರಯೇಲರು ಹಾಗು ಬೆನ್ಯಾಮೀನ್ಯರು ಎಲ್ಲರು ಒಪ್ಪಿ ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕಾಗಿ ಹೆಬ್ರೋನಿಗೆ ಹೊರಟನು.
20 : ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣಮಾಡಿಸಿದನು.
21 : ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಯೇಲರನ್ನೆಲ್ಲಾ ಕೂಡಿಸಿ ನನ್ನ ಒಡೆಯರಾದ ಅರಸರ ಬಳಿಗೆ ಕರೆದುಕೊಂಡು ಬರುವೆನು; ಅವರು ನಿಮ್ಮ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನ ಮಾಡಬಹುದು,” ಎಂದು ಹೇಳಿದನು. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟನು.
22 : ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಯೋಧರು ಮತ್ತು ಯೋವಾಬನು ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂದಿರುಗಿ ಬಂದರು. ಅವರು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
23 : ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು, ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ ತಿಳಿದುಕೊಂಡನು.
24 : ಅರಸನ ಬಳಿಗೆ ಹೋಗಿ, “ನೀವು ಮಾಡಿದ್ದೇನು? ಅಬ್ನೇರನು ನಿಮ್ಮ ಬಳಿಗೆ ಬಂದಿದ್ದನಂತೆ; ನೀವು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟದ್ದೇಕೆ?
25 : ನೇರನ ಮಗನಾದ ಅಬ್ನೇರನ ಸಂಗತಿ ನಿಮಗೆ ಗೊತ್ತಿಲ್ಲವೇ? ಅವನು ನಿಮ್ಮನ್ನು ವಂಚಿಸುವುದಕ್ಕೂ ನಿಮ್ಮ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀವು ಏನು ಮಾಡುತ್ತೀರೆಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೆ,” ಎಂದು ಹೇಳಿದನು.
26 : ಅನಂತರ ದಾವೀದನನ್ನು ಬಿಟ್ಟು ಹೊರಗೆ ಹೋಗಿ ಅಬ್ನೇರನನ್ನು ಕರೆದುತರುವಂತೆ ದೂತರನ್ನು ಅಟ್ಟಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡುಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
27 : ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ಗುಪ್ತಸಂಭಾಷಣೆಗಾಗಿಯೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ, ತನ್ನ ತಮ್ಮನಾದ ಅಸಾಹೇಲನನ್ನು ವಧಿಸಿದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದುಕೊಂದನು.
28 : ತುಸುಹೊತ್ತಾದ ಮೇಲೆ ಈ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ವಧೆಯಲ್ಲಿ ನಾನೂ ನನ್ನ ರಾಜ್ಯವೂ ಸರ್ವೇಶ್ವರನ ಮುಂದೆ ಸದಾ ನಿರ್ದೋಷಿಗಳು.
29 : ಈ ಅಪರಾಧ ಯೋವಾಬನ ಮೇಲೂ ಅವನ ಸಂತಾನದವರೆಲ್ಲರ ಮೇಲೂ ಇರಲಿ ಅವನ ಮನೆಯಲ್ಲಿ ಮೇಹಸ್ರಾವವುಳ್ಳವರು, ಕುಷ್ಠರೋಗಿಗಳು, ಕುಂಟರು, ಕತ್ತಿಯಿಂದ ಹತರಾಗುವವರು ಹಾಗು ಭಿಕ್ಷೆಬೇಡುವವರು ಇದ್ದೇ ಇರಲಿ,” ಎಂದನು
30 : ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ವಧಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
31 : ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣೀತಟ್ಟುಗಳನ್ನು ಉಟ್ಟುಕೊಂಡು, ಸಂತಾಪಸೂಚಿಸುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ,” ಎಂದು ಆಜ್ಞಾಪಿಸಿದನು. ತಾನೂ ಚಟ್ಟದ ಹಿಂದೆ ಹೋದನು.
32 : ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು; ಜನರೆಲ್ಲರೂ ಅತ್ತರು.
33 : ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ, ಮೂರ್ಖರಿಗಾಗುವಂತೆ ನಿನಗೆ ದುರ್ಮರಣವಾಯಿತೇ!
34 : ನಿನ್ನ ಕೈ ಕಂಕಣಬದ್ಧವಾಗಿರಲಿಲ್ಲ, ನಿನ್ನ ಕಾಲಿಗೆ ಬೇಡಿ ಬಿದ್ದಿರಲಿಲ್ಲ, ದುಷ್ಟರಿಂದಲೋ ಎಂಬಂತೆ ನೀನು ಹತನಾದೆಯಲ್ಲಾ!” ಎಂದು ಶೋಕಗೀತೆಯನ್ನು ಹಾಡಿದನು. ಜನರು ಮತ್ತೆ ಕಣ್ಣೀರು ಸುರಿಸಿದರು.
35 : ಸೂರ್ಯಾಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಳುಗುವ ಮೊದಲು ನಾನು ರೊಟ್ಟಿಯನ್ನಾಗಲಿ ಬೇರೆ ಯಾವ ಆಹಾರವನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದು ಮಾಡಲಿ,” ಎಂದು ಆಣೆಯಿಟ್ಟು ಹೇಳಿದನು.
36 : ಜನರು ಇದನ್ನು ಕಂಡು ಮೆಚ್ಚಿದರು; ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.
37 : ನೇರನ ಮಗನಾದ ಅಬ್ನೇರನ ವಧೆಯಲ್ಲಿ ಅರಸನ ಕೈವಾಡವಿಲ್ಲ ಎಂಬುದು ಅವನ ಎಲ್ಲಾ ಜನರಿಗೂ ಇಸ್ರಯೇಲರಿಗೂ ಅದೇ ದಿವಸ ಗೊತ್ತಾಯಿತು.
38 : ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಯೇಲರಲ್ಲಿ ಹತನಾದವನು ಒಬ್ಬ ಶ್ರೇಷ್ಠನಾಯಕ ಹಾಗು ಮಹಾಪುರುಷ ಆಗಿದ್ದನೆಂಬುದು ನಿಮಗೆ ಗೊತ್ತಿದೆ.
39 : ನಾನು ರಾಜಾಭಿಷೇಕ ಹೊಂದಿದ್ದರೂ ಈಗ ಏನೂ ಮಾಡಲು ಅಶಕ್ತನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು. ಸರ್ವೇಶ್ವರನೇ ಕೆಡುಕರಿಗೆ ಮುಯ್ಯಿತೀರಿಸಲಿ,” ಎಂದು ಹೇಳಿದನು.