ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
72ನೇ ಅಧ್ಯಾಯ
1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ I ಕಲಿಸು ನಿನ್ನ ನೀತಿಯನು ರಾಜಕುವರನಿಗೆ II
2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ I ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ II
3 : ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ I ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ II
4 : ದೀನದಲಿತರನಾತ ಉದ್ಧರಿಸಲಿ I ಬಡಬಗ್ಗರಿಗೆ ನ್ಯಾಯ ದೊರಕಿಸಲಿ I ಪ್ರಜಾಹಿಂಸಕರನು ಸದೆಬಡಿಯಲಿ II
5 : ಆತನು ಬಾಳಲಿ ಆಚಂದ್ರಾರ್ಕನಾಗಿ I ತಲತಲಾಂತರಕು ಭಯಭಕುತಿಯಿಂದಿರಲಿ II
6 : ಹುಲ್ಲುಕೊಯ್ದ ಹೊಲದ ಮೇಲೆ ಸುರಿವ ವೃಷ್ಟಿಯಂತೆ I ಬರಲಿ ಆತ ಒಣನೆಲವ ತೋಯ್ವ ಹದಮಳೆಯಂತೆ II
7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ I ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ II
8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ I ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ II
9 : ಅರಣ್ಯವಾಸಿಗಳು ಅರಸನಿಗೆ ಅಡ್ಡಬೀಳಲಿ I ಆತನ ಕಡುವೈರಿಗಳು ನೆಲದ ಮಣ್ಣು ಮುಕ್ಕಲಿ II
10 : ಕಪ್ಪಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು I ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು II
11 : ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ I ರಾಷ್ಟ್ರ, ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ II
12 : ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು I ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು II
13 : ದೀನದರಿದ್ರರಿಗೆ ದಯೆಯ ತೋರುವನು I ದಲಿತರ ಪ್ರಾಣವನು ಕಾಪಾಡುವನು II
14 : ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ I ಜುಲುಮೆ ಶೋಷಣೆಗಳ ನೀಗಿಪುದು ಆತನ ಕಾರ್ಯ II
15 : ಅರಸ ಬಾಳಲಿ ಚಿರಕಾಲ; ದೊರಕಲಿ ಆತನಿಗೆ ಶೆಬಾದ ಬಂಗಾರ I ಜರುಗಲಿ ಪ್ರಾರ್ಥನೆ ಸದಾಕಾಲ; ಆಶೀರ್ವಾದ ಸಿಗಲಿ ಅನವರತ II
16 : ಸಮೃದ್ಧಿಯಾಗಲಿ ನಾಡಿನ ದವಸಧಾನ್ಯ ನೆಲಮಲೆಗಳ ಮೇಲೆ I ಸೊಂಪಾಗಲಿ ಅದರ ಹಣ್ಣುಹಂಪಲು ಲೆಬನೋನಿನ ಮರಗಳಂತೆ I ಹುಲುಸಾಗಲಿ ನಗರ ನಿವಾಸಿಗಳ ಸಂಖ್ಯೆ ಬಯಲಿನ ಹುಲ್ಲಿನಂತೆ II
17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ I ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ I ಆತನಾಶೀರ್ವಾದ ಕೋರಲಿ ಸರ್ವರು ತಮಗೆ I ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ II
18 : ಸುತ್ಯರ್ಹನು ಸ್ವಾಮಿದೇವನು, ಇಸ್ರಯೇಲರ ದೇವನು I ಆತನೋರ್ವನೇ ಮಹತ್ಕಾರ್ಯಗಳನು ಎಸಗುವಂತವನು II
19 : ಮಹಿಮಾಯುಕ್ತ ಆತನ ನಾಮಕೆ ಸದಾಕಾಲವು ಸ್ತುತಿ I ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ I ಇತಿ, ಜೆಸ್ಸೆಯನ ಕುವರ ದಾವೀದನ ಪ್ರಾರ್ಥನೆಗಳ ಸಮಾಪ್ತಿ II
20 : ಮಹಿಮಾಯುಕ್ತ ಆತನ ನಾಮಕೆ ಸದಾಕಾಲವು ಸ್ತುತಿ I ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ I ಇತಿ, ಜೆಸ್ಸೆಯನ ಕುವರ ದಾವೀದನ ಪ್ರಾರ್ಥನೆಗಳ ಸಮಾಪ್ತಿ II