పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
99ನೇ ಅಧ್ಯಾಯ
1 : ವಹಿಸಿಹನು ಪ್ರಭು ರಾಜ್ಯಾಧಿಕಾರವನು : ನಡುಗುತಿಹುದು ಜನಾಂಗವು I ಕೆರೂಬಿಯರ ಮಧ್ಯೆ ಆಸೀನನಾಗಿಹನು : ಕಂಪಿಸುತಿಹುದು ಜಗವು II
2 : ಸಿಯೋನಿನಲಿ ಪ್ರಭು ಶ್ರೇಷ್ಠನು I ರಾಷ್ಟ್ರಗಳಲ್ಲೆಲ್ಲಾ ಉತ್ಕೃಷ್ಠನು II
3 : ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು I ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು II
4 : ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ I ನ್ಯಾಯನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ I ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ II
5 : ಪರಮ ಪಾವನನು ನಮ್ಮೀ ಸ್ವಾಮಿ ದೇವನು I ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು II
6 : ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು I ಸಮುವೇಲನು ಸಹ ಆತನ ಶರಣರಲಿ ಒಬ್ಬನು I ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು II
7 : ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು I ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು II
8 : ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ I ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ II
9 : ಘನಪಡಿಸಿರೆಮ್ಮ ಸ್ವಾಮಿ ದೇವನನು I ಶ್ರೀಪರ್ವತದಲಿ ವಂದಿಸಿ ಆತನನು I ಪರಮಪವಿತ್ರನು ಆ ನಮ್ಮ ದೇವನು II