పరిశుద్ధ గ్రంథము
ಹಳೆಯ ಒಡಂಬಡಿಕೆ
1 ಸಮುವೇಲನು
5ನೇ ಅಧ್ಯಾಯ
1 : ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ ದಾಗೋನನ ಗುಡಿಗೆ ಒಯ್ದರು.
2 : ಅಲ್ಲಿ ಅದನ್ನು ದಾಗೋನನ ಮಗ್ಗುಲಲ್ಲೇ ಇಟ್ಟರು.
3 : ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ದಾಗೋನ್ ವಿಗ್ರಹ ಸರ್ವೇಶ್ವರನ ಮಂಜೂಷದ ಮುಂದೆ ಬೋರಲುಬಿದ್ದಿರುವುದನ್ನು ಕಂಡು ಅದನ್ನು ಪುನಃ ಅದರ ಸ್ಥಳದಲ್ಲಿಟ್ಟರು.
4 : ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆ ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಸರ್ವೇಶ್ವರನ ಮಂಜೂಷದ ಮುಂದೆ ಬಿದ್ದಿತ್ತು.
5 : (ಇಂದಿನವರೆಗೂ ದಾಗೋನನ ಯಾಜಕರು ಹಾಗು ಅವನ ಬಳಿಗೆ ಬರುವವರೆಲ್ಲರು ಅಷ್ಡೋದಿನ ಗುಡಿಯ ಹೊಸ್ತಿಲನ್ನು ತುಳಿಯದಿರುವುದಕ್ಕೆ ಇದೇ ಕಾರಣ.)
6 : ಸರ್ವೇಶ್ವರನ ಹಸ್ತ ಅಷ್ಡೋದಿನವರಿಗೆ ಬಾಧಕವಾಗಿತ್ತು. ಸರ್ವೇಶ್ವರ ಗಡ್ಡೆರೋಗವನ್ನು ಬರಮಾಡಿ ಅವರ ನಗರವನ್ನೂ ಅದರ ಗ್ರಾಮಗಳನ್ನೂ ಹಾಳುಮಾಡಿದರು.
7 : ಇದನ್ನು ನೋಡಿ ಆ ಅಷ್ಡೋದಿನ ಜನರು, “ಇಸ್ರಯೇಲ್ ದೇವರ ಮಂಜೂಷ ನಮ್ಮಲ್ಲಿರಬಾರದು; ಆತನ ಹಸ್ತ ನಮಗೂ ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ,” ಎಂದು ಹೇಳಿ
8 : ಫಿಲಿಷ್ಟಿಯದ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ವಿಚಾರಿಸಿದರು. ಅವರು ಅದನ್ನು ಗತ್ ಊರಿಗೆ ಕಳುಹಿಸಬೇಕೆಂದು ನಿರ್ಣಯಿಸಿದರು. ಹಾಗೆಯೇ ಇಸ್ರಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.
9 : ಮಂಜೂಷವು ಅಲ್ಲಿ ಹೋದ ಮೇಲೆ ಸರ್ವೇಶ್ವರನ ಹಸ್ತ ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲ ಎದ್ದಿತು. ಸರ್ವೇಶ್ವರ ಆ ಊರಿನ ಚಿಕ್ಕವರಲ್ಲೂ ದೊಡ್ಡವರಲ್ಲೂ ಗಡ್ಡೆಗಳನ್ನು ಬರಮಾಡಿದರು.
10 : ಆದುದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿ, ನಮ್ಮನ್ನೂ ನಮಗೆ ಸೇರಿದವರನ್ನೂ ಕೊಲ್ಲುವುದಕ್ಕಾಗಿಯೇ ಇಸ್ರಯೇಲ್ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ,” ಎಂದು ಕೂಗಾಡಿದರು.
11 : ದೇವರ ಹಸ್ತ ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ರಾಜರೆಲ್ಲರನ್ನು ಕೂಡಿಸಿ, “ಇಸ್ರಯೇಲ್ ದೇವರ ಮಂಜೂಷದಿಂದ ನಮಗೂ ನಮ್ಮ ಜನರಿಗೂ ಮರಣವುಂಟಾಗದ ಹಾಗೆ ಅದನ್ನು ಅದರ ಸ್ಥಳಕ್ಕೆ ಕಳುಹಿಸಿಬಿಡಿ,” ಎಂದು ಕೇಳಿಕೊಂಡರು.
12 : ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟ ಗಗನಕ್ಕೇರಿತ್ತು.