పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
144ನೇ ಅಧ್ಯಾಯ
1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ I ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ II
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ I ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ II
3 : ಹೇ ಪ್ರಭೂ, ಮನುಜನು ಎಷ್ಟರವನು, ನೀನವನನು ಲಕ್ಷಿಸಲು I ನರಮಾನವನು ಏತರವನು, ನೀನವನನು ಪರಾಮರಿಸಲು II
4 : ಮಾನವನು ಕೇವಲ ಉಸಿರಿಗೆ ಸಮಾನ I ಮರೆಯಾಗುವ ನೆರಳು ಅವನ ಜೀವನ II
5 : ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು I ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು II
6 : ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು I ನಿನ್ನಂಬುಗಳಿಂದ ಭ್ರಾಂತಗೊಳಿಸವರನು II
7 : ನನ್ನ ಸೆಳೆದುಕೊ ಮಹಾಜಲರಾಶಿಯಿಂದ I ನಿನ್ನ ಕೈಚಾಚಿ ಮೇಲಣಲೋಕದಿಂದ I ನನ್ನನು ಬಿಡಿಸು ಅನ್ಯಜನರ ಕೈಯಿಂದ II
8 : ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
9 : ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು I ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು II
10 : ನೀನೇ ಅರಸುಗಳಿಗೆ ಜಯಪ್ರದನು I ದಾಸ ದಾವೀದನನು ಬಿಡಿಸಿದವನು II
11 : ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ I ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II
12 : ನಮ್ಮ ಗಂಡು ಮಕ್ಕಳಿರಲಿ I ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ II ನಮ್ಮ ಹೆಣ್ಣುಮಕ್ಕಳಿರಲಿ I ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ II
13 : ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು I ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು II
14 : ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ I ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ I ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ II
15 : ಇಂತಹ ಸಮೃದ್ಧಿ ಪಡೆದಿರುವ ಜನರು ಭಾಗ್ಯವಂತರು I ಯಾರಿಗೆ ದೇವರು ಪ್ರಭುವಾಗಿಹನೋ ಅವರು ಧನ್ಯರು II