ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
26ನೇ ಅಧ್ಯಾಯ
- Verse 1: “ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ತಾನು ಬಟ್ಟೆಗಳಿಂದ ಮಾಡಿಸಬೇಕು. ಅವು ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮಾತ್ಕಾರವಾಗಿ ಕಸೂತಿ ಹಾಕಿಸಬೇಕು.
- Verse 2: ಒಂದೊಂದು ತಾನು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿರಬೇಕು.
- Verse 3: ಇಂತಹ ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಬೇಕು.
- Verse 4: ಆ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿಸಬೇಕು.
- Verse 5: ಆ ಕುಣಿಕೆಗಳು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರುಬದರಾಗಿರಬೇಕು.
- Verse 6: ಇದೂ ಅಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.
- Verse 7: ಈ ಗುಡಾರದ ಮೇಲೆ ಹೊರಿಸುವುದಕ್ಕಾಗಿ ಆಡು ಕೂದಲಿನ ಹನ್ನೊಂದು ತಾನು ಬಟ್ಟೆಗಳನ್ನು ಮಾಡಿಸಬೇಕು.
- Verse 8: ಇಂತಹ ಒಂದೊಂದು ಬಟ್ಟೆ ಮೂವತ್ತು ಮೊಳ ಉದ್ದ ಹಾಗೂ ನಾಲ್ಕು ಮೊಳ ಅಗಲವಾಗಿರಬೇಕು. ಎಲ್ಲ ಬಟ್ಟೆಗಳು ಒಂದೇ ಅಳತೆಯಾಗಿರಬೇಕು.
- Verse 9: ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಆರನೇಯ ಬಟ್ಟೆಯನ್ನು ಡೇರೆಯ ಮುಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.
- Verse 10: ಒಂದೊಂದು ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಬೇಕು.
- Verse 11: ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿಸಿ ಒಂದೇ ಡೇರೆಯಾಗುವಂತೆ ಆ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಎಲ್ಲವನ್ನು ಕೂಡಿಸಬೇಕು.
- Verse 12: ಹೊದಿಕೆಯ ಬಟ್ಟೆಗಳಲ್ಲಿ ಅರ್ಧ ಬಟ್ಟೆ ಹೆಚ್ಚಾಗಿರುತ್ತದೆ. ಆ ಹೆಚ್ಚಿನ ಭಾಗವು ಗುಡಾರದ ಹಿಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.
- Verse 13: ಹೊದಿಕೆಯ ಬಟ್ಟೆಗಳ ಉದ್ದದಲ್ಲಿ ಈ ಕಡೆ ಒಂದು ಮೊಳ ಆ ಕಡೆ ಒಂದು ಮೊಳ ಹೆಚ್ಚಾಗಿರುತ್ತದೆ. ಅವು ಒಳಗಿನ ಗುಡಾರವನ್ನು ಮುಚ್ಚುವಂತೆ ಈ ಕಡೆಯೂ ಆ ಕಡೆಯೂ ಇರಬೇಕು.
- Verse 14: ಈ ಹೊದಿಕೆಗೆ ಹೊದಿಸುವುದಕ್ಕಾಗಿ ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನು ಹಾಗು ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿಸಬೇಕು.
- Verse 15: ಗುಡಾರಕ್ಕೆ ಬೇಕಾದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು.
- Verse 16: ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ ಒಂದುವರೆ ಮೊಳ ಅಗಲವಿರಬೇಕು ಮತ್ತು
- Verse 17: ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟು ಎರಡು ನಿಲವು ಪಟ್ಟಿಗಳುಳ್ಳದ್ದಾಗಿರಬೇಕು. ಗುಡಾರದ ಎಲ್ಲ ಚೌಕಟ್ಟುಗಳನ್ನು ಹಾಗೇ ಮಾಡಿಸಬೇಕು.
- Verse 18: ಅದರ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ನಿಲ್ಲಿಸಬೇಕು.
- Verse 19: ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿಸಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಡಬೇಕು. ಒಂದೊಂದು ಚೌಕಟ್ಟಿನಲ್ಲಿರುವ ಎರಡು ಪಟ್ಟಿಗಳಿಗೆ ಒಂದೊಂದು ಗದ್ದಿಗೇ ಕಲ್ಲು ಇರಬೇಕು.
- Verse 20: ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳೂ ಮತ್ತು
- Verse 21: ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇ ಕಲ್ಲುಗಳು ಇರಬೇಕು.
- Verse 22: ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿಸಬೇಕು.
- Verse 23: ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು.
- Verse 24: ಅವು ಬುಡದಿಂದ ತುದಿಯವರೆಗೂ, ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಿರಬೇಕು. ಹಾಗೆ ಎರಡು ಮೂಲೆಗಳಿಗೂ ಮಾಡಿಸಬೇಕು.
- Verse 25: ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇ ಕಲ್ಲುಗಳೂ, ಅಂತೂ ಹದಿನಾರು ಗದ್ದಿಗೇ ಕಲ್ಲುಗಳೂ ಇರುವುವು.
- Verse 26: ಜಾಲೀಮರದಿಂದ ಅಗುಳಿಗಳನ್ನು ಮಾಡಿಸಬೇಕು. ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ
- Verse 27: ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿಸಬೇಕು.
- Verse 28: ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟಬೇಕು.
- Verse 29: ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿಸಬೇಕು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಬೇಕು.
- Verse 30: ನಾನು ಬೆಟ್ಟದಲ್ಲಿ ನಿನಗೆ ತೋರಿಸಿಕೊಟ್ಟ ರೀತಿಯಲ್ಲೇ ಗುಡಾರವನ್ನು ನಿಲ್ಲಿಸಬೇಕು.
- Verse 31: ಹುರಿನಾರಿನ ಬಟ್ಟೆಯಲ್ಲಿ ನೀಲಿ, ಧೂಮ್ರ, ರಕ್ತವರ್ಣಗಳುಳ್ಳ ದಾರದಿಂದ ಕೆರೂಬಿಗಳನ್ನು ಕಲಾತ್ಮಕವಾಗಿ ಕಸೂತಿಹಾಕಿ ಒಂದು ತೆರೆಯ ಚಿತ್ರವನ್ನು ಮಾಡಿಸಬೇಕು.
- Verse 32: ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿಸಿ, ಚಿನ್ನದ ತಗಡುಗಳನ್ನು ಹೊದಿಸಿ, ನಾಲ್ಕು ಬೆಳ್ಳಿಯ ಗದ್ದಿಗೇ ಕಲ್ಲುಗಳ ಮೇಲೆ ನಿಲ್ಲಿಸಿ ಚಿನ್ನದ ಕೊಂಡಿಗಳಿಂದ ಆ ತೆರೆಯನ್ನು ಆ ನಾಲ್ಕು ಕಂಬಗಳಿಗೆ ಸಿಕ್ಕಿಸಬೇಕು.
- Verse 33: ಆ ತೆರೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ತೆರೆಯು ಪವಿತ್ರಸ್ಥಾನವೆಂಬುದನ್ನೂ ಮಹಾಪವಿತ್ರಸ್ಥಾನವೆಂಬುದನ್ನೂ ಬೇರೆ ಬೇರೆ ಮಾಡುವುದು.
- Verse 34: ಮಹಾಪವಿತ್ರಸ್ಥಾನದಲ್ಲಿ ಆಜ್ಞಾಶಾಸನಗಳ ಮಂಜೂಷದ ಮೇಲೆ ಕೃಪಾಸನವನ್ನು ತಂದಿಡಬೇಕು.
- Verse 35: ತೆರೆಯ ಹೊರಗಡೆಯಲ್ಲಿ ಮೇಜನ್ನೂ ಮೇಜಿನ ಎದುರಾಗಿ ಗುಡಾರದ ದಕ್ಷಿಣ ದಿಕ್ಕಿನಲ್ಲಿ ದೀಪವೃಕ್ಷವನ್ನೂ ಇಡಬೇಕು; ಮೇಜು ಉತ್ತರ ಕಡೆಯಲ್ಲಿರಬೇಕು.
- Verse 36: ಡೇರೆಯ ಬಾಗಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ, ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ತೆರೆಯನ್ನು ಮಾಡಿಸಬೇಕು.
- Verse 37: ತೆರೆ ತೂಗಿಸುವುದಕ್ಕಾಗಿ ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳ ಕೊಂಡಿಗಳನ್ನು ಚಿನ್ನದಿಂದ ಮಾಡಿಸಿ ಅವುಗಳಿಗೋಸ್ಕರ ಐದು ತಾಮ್ರದ ಗದ್ದಿಗೇ ಕಲ್ಲುಗಳನ್ನು ಎರಕಹೊಯ್ಯಿಸಬೇಕು.