పరిశుద్ధ గ్రంథము
ಹಳೆಯ ಒಡಂಬಡಿಕೆ
ನೆಹೆಮೀಯ
13ನೇ ಅಧ್ಯಾಯ
- Verse 1: ಆ ಕಾಲದಲ್ಲಿ ಜನರ ಮುಂದೆ ಮೋಶೆಯ ಧರ್ಮಶಾಸ್ತ್ರ ಪಾರಾಯಣವು ನಡೆಯುತ್ತಿತ್ತು. ಅದರಲ್ಲಿ - ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಸೇರಬಾರದಿತ್ತು.
- Verse 2: ಏಕೆಂದರೆ ಅವರು ಇಸ್ರಯೇಲರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ; ಅವರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಅವನನ್ನು ಕರೆಸಿದ್ದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಆಶೀರ್ವಾದವನ್ನೇ ಹೇಳಿಸಿದರು ಎಂಬ ಮಾತು ಬರೆದಿರುವುದಾಗಿ ಗೊತ್ತಾಯಿತು.
- Verse 3: ಇಸ್ರಯೇಲರು ಈ ಧರ್ಮವಿಧಿಯನ್ನು ಕೇಳಿದೊಡನೆ ಎಲ್ಲ ಮಿಶ್ರಜಾತಿ ಅವರನ್ನು ತಮ್ಮ ಮಧ್ಯೆಯಿಂದ ಬೇರ್ಪಡಿಸಿದರು.
- Verse 4: ಇದಕ್ಕಿಂತ ಮೊದಲು ಯಾಜಕ ಎಲ್ಯಾಷೀಬನು ನಮ್ಮ ದೇವಾಲಯದ ಕೊಠಡಿಗಳ ಮೇಲ್ವಿಚಾರಕನಾಗಿ ನೇಮಕಗೊಂಡಿದ್ದನು. ಇವನು ಟೋಬೀಯನ ಬೀಗನಾಗಿದ್ದುದರಿಂದ
- Verse 5: ನೈವೇದ್ಯದ್ರವ್ಯ, ಧೂಪಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳ ದಶಮಾಂಶವನ್ನೂ ಲೇವಿಯರಿಗೆ, ಗಾಯಕರಿಗೆ ಹಾಗು ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ ಯಾಜಕರಿಗಾಗಿ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಅವನಿಗಾಗಿ ಸಿದ್ಧಮಾಡಿಸಿಕೊಟ್ಟಿದ್ದನು.
- Verse 6: ನಾನು ಬಾಬಿಲೋನಿನ ಅರಸ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ಅರಸನ ಬಳಿಗೆ ಹೋಗಿದ್ದೆ. ಆದುದರಿಂದ ಇದೆಲ್ಲಾ ನಡೆಯುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ಕ್ರಮೇಣ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು
- Verse 7: ಮತ್ತೆ ಜೆರುಸಲೇಮಿಗೆ ಬಂದೆ. ಆಗ ಎಲ್ಯಾಷೀಬನು ಟೋಬೀಯನಿಗಾಗಿ ದೇವಾಲಯ ಪ್ರಾಕಾರದೊಳಗೆ ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನೋಡಿದೆ.
- Verse 8: ಈ ದುಷ್ಕೃತ್ಯದ ನಿಮಿತ್ತ ಬಹಳವಾಗಿ ವ್ಯಸನಗೊಂಡು ಟೋಬೀಯನ ಮನೆಯ ಸಾಮಾನುಗಳನ್ನು
- Verse 9: ಆ ಕೊಠಡಿಯಿಂದ ಹೊರಗೆ ಹಾಕಿಸಿ ಕೊಠಡಿಯನ್ನು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಅಲ್ಲಿಡಿಸಿದೆ.
- Verse 10: ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಪಾಲುಗಳು ಅವರಿಗೆ ಸಿಕ್ಕಲಿಲ್ಲವೆಂದೂ ಆರಾಧನೆ ನಡೆಸತಕ್ಕ ಲೇವಿಯರೂ ಗಾಯಕರೂ ತಮ್ಮ ತಮ್ಮ ಆಸ್ತಿಯಿದ್ದಲ್ಲಿಗೆ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.
- Verse 11: ಈ ಕಾರಣ ನಾನು ಅಧಿಕಾರಿಗಳನ್ನು, “ದೇವಾಲಯವನ್ನು ಅಲಕ್ಷ್ಯಮಾಡಿದ್ದೇಕೆ?", ಎಂಬುದಾಗಿ ಪ್ರಶ್ನಿಸಿದೆ; ಬಿಟ್ಟುಹೋದವರನ್ನು ತಿರುಗಿ ಕರೆಸಿ, ಅವರನ್ನು ಅವರವರ ಉದ್ಯೋಗಗಳಲ್ಲಿರಿಸಿದೆ.
- Verse 12: ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.
- Verse 13: ಆಮೇಲೆ ಉಗ್ರಾಣಗಳನ್ನು ನೋಡಿಕೊಳ್ಳುವುದಕ್ಕೆ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಕುಲದವನಾದ ಪೆದಾಯ ಇವರನ್ನೂ ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇಮಿಸಿದೆ. ಇವರೆಲ್ಲರೂ ನಂಬಿಕಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ತಕ್ಕದ್ದನ್ನು ಹಂಚಿಕೊಡುವುದು ಇವರ ಕರ್ತವ್ಯವಾಗಿತ್ತು.
- Verse 14: ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ಸ್ಮರಿಸಿಕೊಳ್ಳಿ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು ನಿಮ್ಮ ನೆನಪಿನಿಂದ ಅಳಿಸಿಬಿಡಬೇಡಿ.
- Verse 15: ಆ ಕಾಲದಲ್ಲಿ, ಜನರು ಸಬ್ಬತ್ದಿನ ಜುದೇಯನಾಡಿನಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನು ಕಂಡೆ; ಅಂತೆಯೇ ಕಣದ ಕಾಳನ್ನು ಕೂಡಿಸಿ ಆ ಕಾಳು, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು, ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಜೆರುಸಲೇಮಿಗೆ ತರುವುದನ್ನು ಗಮನಿಸಿದೆ. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ಅವರನ್ನು ಗದರಿಸಿದೆ.
- Verse 16: ಇದಲ್ಲದೆ, ಈ ನಾಡಿನಲ್ಲಿ ವಾಸಿಸುತ್ತಿದ್ದ ಟೈರಿನವರು ಮೀನು ಮುಂತಾದ ಸರಕುಗಳನ್ನು ತಂದು ಯೆಹೂದ್ಯರಿಗೆ ಸಬ್ಬತ್ದಿನದಲ್ಲಿ ಜೆರುಸಲೇಮಿನಲ್ಲೇ ಮಾರುತ್ತಿದ್ದರು.
- Verse 17: ಆಗ ನಾನು ಯೆಹೂದ ಶ್ರೀಮಂತರಿಗೆ, “ನೀವು ಮಾಡುವುದು ಎಂಥ ದುಷ್ಕೃತ್ಯ! ನೀವು ಸಬ್ಬತ್ದಿನವನ್ನು ಅಶುದ್ಧಮಾಡುತ್ತಿದ್ದೀರಿ.
- Verse 18: ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದಲೆ ನಮ್ಮ ದೇವರು ಎಲ್ಲಾ ಕೇಡನ್ನು ನಮ್ಮ ಮೇಲೂ ನಮ್ಮ ಪಟ್ಟಣದ ಮೇಲೂ ಬರಮಾಡಿದ್ದಾರೆ. ಹೀಗಿರಲಾಗಿ, ನೀವೂ ಸಬ್ಬತ್ದಿನವನ್ನು ಅಶುದ್ಧಮಾಡಿ ಇಸ್ರಯೇಲರ ಮೇಲಿದ್ದ ದೇವಕೋಪವನ್ನು ಹೆಚ್ಚಿಸಬೇಡಿ,” ಎಂದು ಹೇಳಿ ಅವರನ್ನು ಗದರಿಸಿದೆ.
- Verse 19: ಇದಲ್ಲದೆ, “ಸಬ್ಬತ್ದಿನ ಪ್ರಾರಂಭವಾಗುವುದಕ್ಕಿಂತ ಮೊದಲು ಜೆರುಸಲೇಮಿನ ಬಾಗಿಲುಗಳಲ್ಲಿ ಕತ್ತಲಾಗುವಾಗಲೇ ಕದಗಳನ್ನು ಮುಚ್ಚಿಸಬೇಕು; ಸಬ್ಬತ್ದಿನ ಗತಿಸುವುದಕ್ಕಿಂತ ಮುಂಚೆ ಅವುಗಳನ್ನು ತೆರೆಯಬಾರದು,” ಎಂದು ಆಜ್ಞಾಪಿಸಿದೆ. ಯಾವ ಹೊರೆಯೂ ಒಳಗೆ ಬಾರದಂತೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಕಾವಲಿರಿಸಿದೆ.
- Verse 20: ಆದುದರಿಂದ ವರ್ತಕರು ಹಾಗು ಎಲ್ಲ ತರದ ದಿನಸುಗಳನ್ನು ಮಾರುವುದಕ್ಕೆ ಬಂದವರು ಒಂದೆರಡು ಸಾರಿ ಜೆರುಸಲೇಮಿನ ಹೊರಗಡೆಯೇ ಇಳಿದುಕೊಂಡರು.
- Verse 21: ಕಡೆಗೆ ನಾನು ಅವರನ್ನು, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಮತ್ತೆ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು,” ಎಂದು ಗದರಿಸಿದೆ.
- Verse 22: ಅವರು ಅಂದಿನಿಂದ ಸಬ್ಬತ್ದಿನದಂದು ಪುನಃ ಬರಲಿಲ್ಲ. ಆಮೇಲೆ ನಾನು ಲೇವಿಯರಿಗೆ, “ಸಬ್ಬತ್ದಿನವನ್ನು ಪರಿಶುದ್ಧದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು,” ಎಂದು ಆಜ್ಞಾಪಿಸಿದೆ. “ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು ನಿಮ್ಮ ಮಹಾಕೃಪೆಗನುಸಾರ ನನ್ನನ್ನು ಕನಿಕರಿಸಿರಿ.”
- Verse 23: ಅದೇ ಕಾಲದಲ್ಲಿ ಅಷ್ಡೋದ್, ಅಮ್ಮೋನಿಯ ಹಾಗು ಮೋವಾಬ್ ಮಹಿಳೆಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ನಾನು ವಿಚಾರಮಾಡಿದೆ.
- Verse 24: ಅವರ ಮಕ್ಕಳಲ್ಲಿ ಅರ್ಧಮಂದಿ ಜುದೇಯದ ಭಾಷೆಯಲ್ಲಿ ಮಾತಾಡಲರಿಯದೆ ಅಷ್ಡೋದ್ಯ ಮುಂತಾದ ಜನರ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.
- Verse 25: ಕೋಪಗೊಂಡು ಅವರನ್ನು ಶಪಿಸಿದೆ; ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕೀಳಿಸಿದೆ.
- Verse 26: “ಅಂಥ ಮಹಿಳೆಯರ ದೆಸೆ ಇಂದಲೇ ಇಸ್ರಯೇಲ್ ಅರಸ ಸೊಲೊಮೋನನು ದೋಷಿಯಾದ; ಅನೇಕಾನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನಿರಲಿಲ್ಲ; ಅವನು ತನ್ನ ದೇವರಿಗೆ ವಿಶೇಷಪ್ರಿಯನು; ಆದುದರಿಂದಲೇ ದೇವರು ಅವನನ್ನು ಎಲ್ಲ ಇಸ್ರಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ಅನ್ಯದೇಶದ ಮಹಿಳೆಯರು ಅವನನ್ನು ಪಾಪದಲ್ಲಿ ಬೀಳಿಸಿದರು.
- Verse 27: ಹೀಗಿರಲಾಗಿ, ನೀವೂ ಅನ್ಯಮಹಿಳೆಯರನ್ನು ಮದುವೆಮಾಡಿಕೊಂಡು, ಅದೇ ಘೋರವಾದ ದುಷ್ಕೃತ್ಯವನ್ನು ನಡೆಸಿ, ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ,” ಎಂದು ಅವರನ್ನು ಗದರಿಸಿದೆ.”ಅನ್ಯರ ಮಕ್ಕಳಿಗೆ ಹೆಣ್ಣು ಕೊಡಬಾರದು; ನಮಗಾಗಲಿ ನಮ್ಮ ಮಕ್ಕಳಿಗಾಗಲಿ ಅವರಿಂದ ಹೆಣ್ಣು ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಗೊಳ್ಳುವುದಾಗಿ ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣ ಮಾಡಿಸಿದೆ.
- Verse 28: ಮಹಾಯಾಜಕ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾದುದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆ.
- Verse 29: “ನನ್ನ ದೇವರೇ, ಅವರು ಯಾಜಕತ್ವವನ್ನೂ ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರೆ; ಇದನ್ನು ನೆನಪುಮಾಡಿಕೊಳ್ಳಿ.”
- Verse 30: ನಾನು ಈ ಪ್ರಕಾರ ಅನ್ಯವಾದ್ದನ್ನೆಲ್ಲಾ ತೆಗೆಸಿ, ಅವರನ್ನು ಶುದ್ದಪಡಿಸಿದೆ; ಯಾಜಕರಲ್ಲೂ ಪ್ರತಿಯೊಬ್ಬನಿಗಿದ್ದ ಕೆಲಸದ ವಿಷಯವಾಗಿ ಹಾಗು
- Verse 31: ನೇಮಿತಕಾಲಗಳಲ್ಲಿ ಸಲ್ಲತಕ್ಕ ಕಾಷ್ಠದಾನದ ಮತ್ತು ಪ್ರಥಮ ಫಲದ ವಿಷಯವಾಗಿ ಕ್ರಮಗಳನ್ನು ಏರ್ಪಡಿಸಿದೆ; ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೊಳ್ಳಿ.