P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
60ನೇ ಅಧ್ಯಾಯ
- Verse 1: ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ I ಕೋಪದಿಂದೆಮ್ಮನು ತಳ್ಳಿ ಕೆಡವಿಬಿಟ್ಟೆ I ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ II
- Verse 2: ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ I ಅದರೊಡಕನು ಸರಿಮಾಡು ತಡವರಿಸದೆ II
- Verse 3: ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ I ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ II
- Verse 4: ಪರಾಜಯ ಪತಾಕೆಯ ಹರಿಸಿದೆ ನಿನಗಂಜಿ ನಡೆದವರಿಗೆ I ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ II
- Verse 5: ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು I ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು II
- Verse 6: ಗರ್ಭಗುಡಿಯಿಂದಲೇ ದೇವನಿಂತೆಂದನು; “ಜಯಶೀಲ ನಾನು, ಹಂಚುವೆನು ಶೆಖೆಮನು I ಅಳೆದು ಕೊಡುವೆನು ಸುಖೋತೆಂಬ ಬಯಲನು II
- Verse 7: ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ I ಎಫ್ರಯಿಮ್ ಗೋತ್ರವು ಶಿರಸ್ತ್ರಾಣವು ನನಗೆ I ಜೂದ ಕುಲವು ರಾಜದಂಡವು ನನ್ನ ಕೈಗೆ II
- Verse 8: ಮೋವಾಬ್ ಪ್ರಾಂತ್ಯವು ನನ್ನ ಸ್ನಾನ ಪಾತ್ರೆಯು I ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ ಎಡೆಯು I ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು!” II
- Verse 9: ಕೋಟೆಯ ನಗರಕೆ ನನ್ನನು ಕರೆದೊಯ್ಯುವರಾರು? I ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು? II
- Verse 10: ದೇವಾ ನೀ, ನಮ್ಮನು ಕೈ ಬಿಟ್ಟಿರುವುದು ಸರಿಯೋ? I ನಮ್ಮ ಸೈನ್ಯ ಸಮೇತ ನೀ ಬರದೆಹೋದೆಯೋ? II
- Verse 11: ಶತ್ರು ವಿರುದ್ಧ ಸಹಾಯಮಾಡಯ್ಯಾ I ಮಾನವ ನೆರವು ನಮಗೆ ವ್ಯರ್ಥವಯ್ಯಾ II
- Verse 12: ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ I ವೈರಿಗಳನು ತುಳಿದುಬಿಡುವನಾತ ಖರೆಯಾಗಿ II