ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
23ನೇ ಅಧ್ಯಾಯ
- Verse 1: ಒಡೆಯನ ಸಂಗಡ ಊಟಕ್ಕೆ ಕುಳಿತುಕೊಂಡಾಗ ಯಾರ ಮುಂದಿರುವೆ ಎಂಬುದನ್ನು ಮರೆಯಬೇಡ.
- Verse 2: ತಡೆಯಲಾಗದ ಹಸಿವು ನಿನಗಿದ್ದರೂ ಕಂಠದಲ್ಲಿ ಕತ್ತಿಯಿರುವಂತೆ ಸಂಯಮದಿಂದಿರು.
- Verse 3: ಒಡೆಯನ ರುಚಿಪದಾರ್ಥಗಳನ್ನು ಬಯಸಬೇಡ. ಅವುಗಳಲ್ಲಿ ಮರೆಮೋಸ ಅಡಗಿರಲು ಸಾಧ್ಯ.
- Verse 4: ದುಡ್ಡಿನಾಸೆಗಾಗಿಯೆ ದುಡಿಯಬೇಡ; ಬುದ್ಧಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಮಾಡಬೇಡ.
- Verse 5: ನಿನ್ನ ದೃಷ್ಟಿ ಅದರ ಮೇಲೆ ಬೀಳುವಷ್ಟರಲ್ಲೆ ಅದು ಮಾಯ, ರೆಕ್ಕೆ ಕಟ್ಟಿಕೊಂಡ ಗರುಡನಂತೆ ಆಗಸದತ್ತ ಅದರ ಓಟ.
- Verse 6: ಜಿಪುಣ ದೃಷ್ಟಿಯವನು ಬಡಿಸುವ ಅನ್ನವನ್ನು ಉಣಬೇಡ; ಅವನ ರುಚಿಪದಾರ್ಥಗಳನ್ನು ಬಯಸಬೇಡ.
- Verse 7: ಅವನು ತನ್ನ ಮನದಲ್ಲೆ ಲೆಕ್ಕಿಸುತ್ತಿರುತ್ತಾನೆ “ಉಣ್ಣು, ಕುಡಿ” ಎಂದರೂ; ಅವನಿಗಿಲ್ಲ ನಿನ್ನ ಮೇಲೆ ಅಕ್ಕರೆ.
- Verse 8: ನೀನು ತಿಂದ ತುತ್ತನ್ನೆ ಕಕ್ಕಿ ಬಿಡುವೆ, ನೀನು ಆಡಿದ ಸವಿಮಾತೆಲ್ಲ ವ್ಯರ್ಥವೆ.
- Verse 9: ಮೂಢನ ಸಂಗಡ ಮಾತನಾಡಬೇಡ; ನಿನ್ನ ಬುದ್ಧಿಮಾತನ್ನು ಅವನು ಮಾನ್ಯಮಾಡ.
- Verse 10: ಪುರಾತನ ಎಲ್ಲೆ ಗುರುತನ್ನು ಒತ್ತರಿಸಬೇಡ; ಅನಾಥರ ಹೊಲಗದ್ದೆಯನ್ನು ಆಕ್ರಮಿಸಬೇಡ.
- Verse 11: ಅವರನ್ನು ಕಾಪಾಡುವ ಸರ್ವೇಶ್ವರ ಬಲಶಾಲಿ, ಆತ ನಿನ್ನೊಡನೆ ವಾದಿಸಬಲ್ಲ ಅವರ ಪರವಾಗಿ.
- Verse 12: ಉಪದೇಶವನ್ನು ಕೇಳುವುದರತ್ತ ಮನಸ್ಸಿಡು; ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು.
- Verse 13: ಮಕ್ಕಳನ್ನು ದಂಡಿಸಿ ತಿದ್ದಲು ಹಿಂಜರಿಯಬೇಕಾಗಿಲ್ಲ; ಬೆತ್ತದ ಏಟಿಗೆ ಅವರು ಸತ್ತುಹೋಗುವುದಿಲ್ಲ.
- Verse 14: ಬೆತ್ತದಿಂದ ಬೇಕಾದರೆ ಹೊಡೆ; ಮಗುವಿನ ಆತ್ಮ ಪಾತಾಳಕ್ಕೆ ಬೀಳದಂತೆ ತಡೆ.
- Verse 15: ಮಗನೇ, ನೀನು ಬುದ್ಧಿವಂತನಾದರೆ ಆನಂದವೇ ಆನಂದ ನನ್ನ ಮನಸ್ಸಿಗೆ.
- Verse 16: ನಿನ್ನ ಬಾಯಿಂದ ಹಿತೋಕ್ತಿಗಳು ಬಂದರೆ ಸಂತೋಷ ನನ್ನ ಅಂತರಾತ್ಮಕ್ಕೆ.
- Verse 17: ಪಾಪಿಗಳನ್ನು ನೋಡಿ ಅಸೂಯೆಪಡಬೇಡ; ಸರ್ವೇಶ್ವರನಲ್ಲಿರಲಿ ನಿರಂತರ ಭಯಭಕ್ತಿ.
- Verse 18: ಆಗ ನಿನ್ನ ಭವಿಷ್ಯ ಶುಭದಾಯಕವಾಗಿರುವುದು, ನಿನ್ನ ನಿರೀಕ್ಷೆ ಸಾರ್ಥಕವಾಗುವುದು.
- Verse 19: ಮಗನೇ ಕೇಳು, ಬುದ್ಧಿವಂತನಾಗಿರು, ನಿನ್ನ ಮನಸ್ಸನ್ನು ಸನ್ಮಾರ್ಗದತ್ತ ಹರಿಸು.
- Verse 20: ಕುಡುಕರೊಡನೆ, ಹೊಟ್ಟೆಬಾಕರೊಡನೆ ಸೇರಬೇಡ; ಮಿತಿಮೀರಿ ಮಾಂಸ ತಿನ್ನುವ ಜನರ ಜೊತೆ ನಿನಗೆ ಬೇಡ.
- Verse 21: ಕುಡುಕನಿಗೂ ಹೊಟ್ಟೆಬಾಕನಿಗೂ ಕಾದಿದೆ ದುರ್ಗತಿ; ಹರಕು ಬಟ್ಟೆಗಳನ್ನು ಹೊದಿಸುವುದು ಅವರ ನಿದ್ರಾಸಕ್ತಿ.
- Verse 22: ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನ ತಾಯಿಯನ್ನು ಅಸಡ್ಡೆಮಾಡದಿರು.
- Verse 23: ಸತ್ಯವನ್ನು, ಅಂದರೆ ಜ್ಞಾನ, ಸುಶಿಕ್ಷೆ, ವಿವೇಕ ಇವನ್ನು ಬೆಲೆಕೊಟ್ಟಾದರೂ ಕೊಂಡುಕೊ, ಮಾರಿಬಿಡಬೇಡ!
- Verse 24: ನೀತಿವಂತನ ತಂದೆಗೆ ಅತಿ ಸಂತೋಷ; ಜ್ಞಾನಿಯನ್ನು ಹೆತ್ತವನಿಗೆ ಅತಿ ಉಲ್ಲಾಸ.
- Verse 25: ಹರ್ಷಗೊಳಿಸು ನಿನ್ನ ತಂದೆತಾಯಿಗಳನ್ನು; ಆನಂದಪಡಿಸು ನಿನ್ನ ಹೆತ್ತವಳನ್ನು.
- Verse 26: ಮಗನೇ, ನಾನು ಹೇಳುವುದು ನಾಟಲಿ ನಿನ್ನ ಮನಸ್ಸಿಗೆ; ನನ್ನ ನಡತೆ ಆದರ್ಶಕವಾಗಿರಲಿ ನಿನ್ನ ಕಣ್ಣುಗಳಿಗೆ.
- Verse 27: ವೇಶ್ಯೆ ಒಂದು ಆಳವಾದ ಬಾವಿ; ವ್ಯಭಿಚಾರಿಣಿ ಇಕ್ಕಟ್ಟಾದ ಗುಳಿ.
- Verse 28: ಆಕೆ ಕಳ್ಳನಂತೆ ಹೊಂಚುಹಾಕುತ್ತಾಳೆ; ಅನೇಕರನ್ನು ದ್ರೋಹಿಗಳನ್ನಾಗಿಸುತ್ತಾಳೆ.
- Verse 29: ಕಿರಿಚಾಟ, ಕೂಗಾಟ, ಕಿತ್ತಾಟ, ಗೋಳಾಟವು ನಿರ್ನಿಮಿತ್ತ ಹುಣ್ಣು, ಕೆಂಪೇರಿದ ಕಣ್ಣು; ಇವುಗಳನ್ನು ಅನುಭವಿಸುವವರು ಯಾರು?
- Verse 30: ಮಿಶ್ರಮದ್ಯಪಾನಗಳಲ್ಲಿ ಆಸಕ್ತನಾಗಿರುವವನೇ, ದ್ರಾಕ್ಷಾರಸ ಕುಡಿಯುತ್ತ ಕಾಲಹರಣ ಮಾಡುವವನೇ.
- Verse 31: ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ, ಗಂಟಲಿನೊಳಗೆ, ಸುಲಭವಾಗಿ, ಇಳಿಯುವ, ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ.
- Verse 32: ಕುಡಿದಾದ ಮೇಲೆ ಅದು ಹಾವಿನಂತೆ ಕಚ್ಚುವುದು; ಹೌದು, ವಿಷಸರ್ಪದಂತೆ ಕಡಿಯುವುದು.
- Verse 33: ನಿನ್ನಾ ಕಣ್ಣು ಇಲ್ಲದ್ದನ್ನೇ ಕಾಣುವುದು; ಮನಸ್ಸು ವಕ್ರವಾದುವುಗಳನ್ನೇ ಹೊರಪಡಿಸುವುದು.
- Verse 34: ನೀನು ಸಮುದ್ರ ಮಧ್ಯದಲ್ಲಿ ಮಲಗಿ ಇರುವವನಂತೆ ಇರುವೆ, ಹಡಗಿನ ಕಂಬದ ತುದಿಯಲ್ಲಿ ನಿದ್ರಿಸುವವನಂತೆ ಇರುವೆ.
- Verse 35: “ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ; ಬಡಿದರೂ ನನಗೆ ತಿಳಿಯಲಿಲ್ಲ; ಎಚ್ಚರವಾಗುವುದು ಯಾವಾಗ? ಮತ್ತೆ ಒಂದು ಸಾರಿ ಕುಡಿಯುವೆನು” ಎಂದುಕೊಳ್ಳುವೆ.