P. O. C ബൈബിള്
ಹೊಸ ಒಡಂಬಡಿಕೆ
ಲೂಕ
24ನೇ ಅಧ್ಯಾಯ
- Verse 1: ಭಾನುವಾರ ಮುಂಜಾನೆ ಆ ಮಹಿಳೆಯರು ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಯ ಬಳಿಗೆ ಬಂದರು.
- Verse 2: ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿ ಬಿದ್ದಿತ್ತು.
- Verse 3: ಒಳಕ್ಕೆ ಪ್ರವೇಶಿಸಿ ನೋಡಿದಾಗ ಪ್ರಭು ಯೇಸುವಿನ ಪಾರ್ಥಿವ ಶರೀರ ಕಾಣಲಿಲ್ಲ.
- Verse 4: ಅವರು ತಬ್ಬಿಬ್ಬಾಗಿ ಅಲ್ಲೇ ನಿಂತರು. ಆಗ ತೇಜೋಮಯವಾದ ಉಡುಪನ್ನು ಧರಿಸಿದ್ದ ಇಬ್ಬರು ವ್ಯಕ್ತಿಗಳು ಫಕ್ಕನೆ ಅಲ್ಲೇ ಕಾಣಿಸಿಕೊಂಡರು.
- Verse 5: ಮಹಿಳೆಯರು ಭಯಭ್ರಾಂತರಾದರು. ಅವರ ದೃಷ್ಟಿ ನೆಲನಾಟಿತು. ಆಗ ಆ ವ್ಯಕ್ತಿಗಳು, “ಸಜೀವವಾಗಿರುವವರನ್ನು ಸತ್ತವರ ಮಧ್ಯೆ ಹುಡುಕುವುದೇನು? ಅವರು ಇಲ್ಲಿಲ್ಲ; ಪುನರುತ್ಥಾನ ಹೊಂದಿದ್ದಾರೆ.
- Verse 6: ಗಲಿಲೇಯದಲ್ಲಿದ್ದಾಗಲೇ ಅವರು ನಿಮಗೆ,
- Verse 7: ‘ನರಪುತ್ರನು ಪಾಪಿಮಾನವರ ಕೈವಶವಾಗಿ, ಶಿಲುಬೆಯ ಮರಣಕ್ಕೀಡಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ,’ ಎಂದು ತಿಳಿಸಿದ್ದನ್ನು ಮರೆತುಬಿಟ್ಟಿರೋ?” ಎಂದರು.
- Verse 8: ಆಗ ಆ ಮಹಿಳೆಯರಿಗೆ ಯೇಸುಸ್ವಾಮಿಯ ಈ ಮಾತುಗಳು ಜ್ಞಾಪಕಕ್ಕೆ ಬಂದವು.
- Verse 9: ಅವರು ಸಮಾಧಿಯಿಂದ ಹಿಂದಿರುಗಿಹೋಗಿ ನಡೆದುದೆಲ್ಲವನ್ನು ಹನ್ನೊಂದು ಮಂದಿ ಶಿಷ್ಯರಿಗೂ ಮತ್ತಿತರರಿಗೂ ತಿಳಿಸಿದರು.
- Verse 10: ಆ ಮಹಿಳೆಯರ ಹೆಸರುಗಳು: ಮಗ್ದಲದ ಮರಿಯಳು, ಯೊವಾನ್ನಳು ಮತ್ತು ಯಕೋಬನ ತಾಯಿಯಾದ ಮರಿಯಳು. ಇವರಲ್ಲದೆ, ಇವರ ಸಂಗಡ ಇದ್ದ ಇತರ ಮಹಿಳೆಯರೂ ಪ್ರೇಷಿತರಿಗೆ ಈ ಸುದ್ದಿಯನ್ನು ತಿಳಿಸಿದರು.
- Verse 11: ಪ್ರೇಷಿತರಾದರೋ ಇದೆಲ್ಲ ಕಟ್ಟುಕತೆಯೆಂದು ಭಾವಿಸಿ ನಂಬದೆಹೋದರು.
- Verse 12: ಆದರೆ ಪೇತ್ರನು ಎದ್ದು ಸಮಾಧಿಯ ಬಳಿಗೆ ಧಾವಿಸಿದನು. ಸಮಾಧಿಯೊಳಕ್ಕೆ ಬಗ್ಗಿನೋಡಿದಾಗ, ಶವಕ್ಕೆ ಸುತ್ತಿದ್ದ ನಾರುಮಡಿ ವಸ್ತ್ರಗಳು ಮಾತ್ರ ಅಲ್ಲಿ ಬಿದ್ದಿರುವುದನ್ನು ಕಂಡನು. ಇವೆಲ್ಲಾ ಎಷ್ಟೋ ಆಶ್ಚರ್ಯಕರವಾಗಿದೆ ಎಂದುಕೊಂಡು ಹಿಂದಿರುಗಿದನು.
- Verse 13: ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೊಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು.
- Verse 14: ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು.
- Verse 15: ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು.
- Verse 16: ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು.
- Verse 17: “ನೀವು ತರ್ಕಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು.
- Verse 18: ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು.
- Verse 19: “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು.
- Verse 20: ನಮ್ಮ ಮುಖ್ಯಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.
- Verse 21: ಇಸ್ರಯೇಲನ್ನು ಬಿಡುಗಡೆಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟುಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರು ದಿನಗಳು ಆಗಿವೆ.
- Verse 22: ಆದರೂ ನಮ್ಮಲ್ಲಿ ಕೆಲವುಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು.
- Verse 23: ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು.
- Verse 24: ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.
- Verse 25: ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು!
- Verse 26: ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ಧಿಯನ್ನು ಪಡೆಯಬೇಕಿತ್ತು ಅಲ್ಲವೇ?” ಎಂದರು.
- Verse 27: ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.
- Verse 28: ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು.
- Verse 29: ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು.
- Verse 30: ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು.
- Verse 31: ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು.
- Verse 32: ಶಿಷ್ಯರು ಒಬ್ಬರಿಗೊಬ್ಚರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೆ?” ಎಂದುಕೊಂಡರು.
- Verse 33: ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು.
- Verse 34: “ಪ್ರಭು ಜೀವಂತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು.
- Verse 35: ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.
- Verse 36: ಅವರು ವರದಿಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, ‘ನಿಮಗೆ ಶಾಂತಿ,’ ಎಂದರು.
- Verse 37: ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು.
- Verse 38: ಆಗ ಯೇಸು, “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ?
- Verse 39: ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ,” ಎಂದರು. (
- Verse 40: ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು).
- Verse 41: ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?’ ಎಂದು ಕೇಳಿದರು.
- Verse 42: ಹುರಿದ ಮೀನಿನ ತುಂಡು ಒಂದನ್ನು ಶಿಷ್ಯರು ಕೊಟ್ಟರು.
- Verse 43: ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು.
- Verse 44: ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥಗಳಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು.
- Verse 45: ಆಮೇಲೆ, ಪವಿತ್ರಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು.
- Verse 46: ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು;
- Verse 47: ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು.
- Verse 48: ಇದಕ್ಕೆಲ್ಲಾ ನೀವೇ ಸಾಕ್ಷಿಗಳು.
- Verse 49: ನನ್ನ ಪಿತ ವಾಗ್ದಾನ ಮಾಡಿದ ವ್ಯಕ್ತಿಯನ್ನು ನಾನೇ ನಿಮಗೆ ಕಳುಹಿಸಿಕೊಡುವೆನು. ಸ್ವರ್ಗದಿಂದ ಬರುವ ಶಕ್ತಿಯಿಂದ ನೀವು ಭೂಷಿತರಾಗುವ ತನಕ ಈ ಪಟ್ಟಣದಲ್ಲೇ ಕಾದಿರಿ,” ಎಂದು ಹೇಳಿದರು.
- Verse 50: ಕಟ್ಟಕಡೆಗೆ ಯೇಸುಸ್ವಾಮಿ ಶಿಷ್ಯರನ್ನು ಬೆಥಾನಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು. ಅಲ್ಲಿ ತಮ್ಮ ಕರಗಳನ್ನೆತ್ತಿ ಆಶೀರ್ವದಿಸಿದರು.
- Verse 51: ಆಶೀರ್ವದಿಸುತ್ತಿದ್ದ ಹಾಗೆಯೇ ಅವರನ್ನು ಬೀಳ್ಕೊಟ್ಟರು. (ಮತ್ತು ಸ್ವರ್ಗಕ್ಕೆ ಒಯ್ಯಲ್ಪಟ್ಟರು).
- Verse 52: ಶಿಷ್ಯರು (ಅವರನ್ನು ಆರಾಧಿಸಿ) ಅತ್ಯಾನಂದದಿಂದ ಜೆರುಸಲೇಮಿಗೆ ಹಿಂದಿರುಗಿದರು.
- Verse 53: ಮಹಾದೇವಾಲಯದಲ್ಲಿ ದೇವರನ್ನು ಸತತವಾಗಿ ಸ್ತುತಿಮಾಡಿಕೊಂಡಿದ್ದರು.