P. O. C ബൈബിള്
ಹಳೆಯ ಒಡಂಬಡಿಕೆ
2 ಸಮುವೇಲನು
22ನೇ ಅಧ್ಯಾಯ
- Verse 1: ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು:
- Verse 2: ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲು ಕೋಟೆ, ಆತನೇ ವಿಮೋಚಕ ನನಗೆ
- Verse 3: ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ.
- Verse 4: ಸರ್ವೇಶ್ವರನು ಸ್ತುತ್ಯಾರ್ಹನು ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು
- Verse 5: ಕುತ್ತಿಗೆಗೆ ಬಂದಿದ್ದವು ಸಾವಿನ ಅಲೆಗಳು ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು.
- Verse 6: ಸುತ್ತಿಕೊಂಡಿದ್ದವು ಪಾತಾಳಪಾಶಗಳು ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು.
- Verse 7: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.
- Verse 8: ಆಗ ಕಂಪಿಸಿತು ಭೂಮಿ ಗಡಗಡನೆ ಕದಲಿದವು ಆಗಸದಸ್ತಿವಾರಗಳು ಮಿಲಮಿಲನೆ ಏಕೆನೆ ಸಿಟ್ಟೇರಿತ್ತು ಆತನಿಗೆ.
- Verse 9: ಹೊರಬಂದಿತು ಹೊಗೆ ಆತನ ಮೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ.
- Verse 10: ಆಕಾಶವನೆ ಬಾಗಿಸಿ ಆತನಿಳಿದು ಬರಲು ಸೇರಿತು ಆತನ ಕಾಲಡಿ ಕಾರ್ಮುಗಿಲು.
- Verse 11: ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ ಕಾಣಿಸಿಕೊಂಡನು ವಾಯುರೆಕ್ಕೆಗಳ ವೇಗದಲಿ.
- Verse 12: ಕತ್ತಲನು, ಜಲಮಯ ಮೇಘಗಳನು ಸುತ್ತಲು ಕವಿಸಿಕೊಂಡನು ಛತ್ರಾಂಬರದೊಳು.
- Verse 13: ಉರಿಗೆಂಡಗಳು ಹೊರಟುಬರುತ್ತಿದ್ದವು ಅಷ್ಟು ಪ್ರಜ್ವಲವಾಗಿತ್ತು ಆತನ ಸಾನ್ನಿಧ್ಯವು.
- Verse 14: ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ ಮೊಳಗಿತು ವಾಣಿ ಆ ಪರಮೋನ್ನತನಿಂದ.
- Verse 15: ಚದರಿಸಿದನು ಶತ್ರುಗಳನು ಬಾಣಗಳನೆಸೆದು ತಳಮಳಗೊಳಿಸಿದನವರನು ಸಿಡಿಲನು ಹೊಡೆದು.
- Verse 16: ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.
- Verse 17: ಮೇಲಣಾಲೋಕದಿಂದ ಹಿಡಿದುಕೊಂಡ ಎನ್ನನು ಕೈಚಾಚಿ ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ.
- Verse 18: ನನ್ನ ಬಿಡಿಸಿ ರಕ್ಷಿಸಿದನು ಶತ್ರುಗಳಿಂದ ನನಗಿಂತ ಪುಷ್ಟ, ಬಲಿಷ್ಠ ಹಗೆಗಳಿಂದ.
- Verse 19: ನನ್ನ ಮೇಲೆರಗಿದ್ದರಾ ಹಗೆಗಳು ದುರಂತ ಕಾಲದಲಿ ನನಗುದ್ಧಾರಕನಾದ ಸರ್ವೇಶ್ವರನು, ಆ ವಿಪತ್ಕಾಲದಲಿ.
- Verse 20: ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ ಅಕ್ಕರೆಯಿಂದ ಮೆಚ್ಚಿ ನನಗಾದನು ರಕ್ಷೆ.
- Verse 21: ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕ ಹಾಗೆ.
- Verse 22: ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ.
- Verse 23: ಆತನ ವಿಧಿನಿಯಮಗಳನ್ನು ಕೈಬಿಡದೆ ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣ ಮುಂದೆ.
- Verse 24: ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ.
- Verse 25: ನಾ ನೀತಿವಂತ, ನಿರಪರಾಧಿಯೆಂದರಿತು ನನಗಿತ್ತನಾ ಸರ್ವೇಶ್ವರ ತಕ್ಕ ಪ್ರತಿಫಲವನು.
- Verse 26: ಕರುಣೆಯುಳ್ಳವನಿಗಾತ ಕರುಣಾಮಯಿ ದೋಷರಹಿತನಿಗಾತ ನಿರ್ದೋಷಿ.
- Verse 27: ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು.
- Verse 28: ದೀನದಲಿತರನು ಉದ್ಧರಿಸುವನು ಗರ್ವಿಗಳನು ಗುರುತಿಸಿ ತಗ್ಗಿಸುವನು.
- Verse 29: ಹೇ ಸರ್ವೇಶ್ವರಾ, ನೀನೆನಗೆ ಜ್ಯೋತಿ ಕತ್ತಲನು ನೀಗಿಸಿ, ಬೆಳಕನು ನೀಡುತಿ.
- Verse 30: ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ.
- Verse 31: ದೇವರ ಮಾರ್ಗ ದೋಷರಹಿತ ಸರ್ವೇಶ್ವರನ ವಚನ ಪರಮಪುನೀತ ಆಶ್ರಿತರೆಲ್ಲರಿಗಾತ ರಕ್ಷಣಾಕವಚ.
- Verse 32: ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು?
- Verse 33: ದೇವನೇ ನನಗೆ ಭದ್ರವಾದ ದುರ್ಗ ಆತನಿಂದಲೇ ಸರಾಗ ನನ್ನ ಮಾರ್ಗ.
- Verse 34: ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ.
- Verse 35: ಯುದ್ಧವಿದ್ಯೆಯ ಕಲಿತೆ ಆತನಿಂದಲೆ ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ.
- Verse 36: ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ.
- Verse 37: ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ.
- Verse 38: ಸದೆಬಡಿವೆನು ಶತ್ರುಗಳನು ಬೆನ್ನಟ್ಟಿ ಅವರನು ನಿರ್ಮೂಲ ಮಾಡದೆ ಬರೆ ಹಿಂದಿರುಗಿ.
- Verse 39: ಅವರನು ಹೊಡೆದೆ ಮತ್ತೆ ಏಳದಂತೆ ಅವರನು ಮಾಡಿದೆ ಕಾಲಿಗೆ ಬೀಳುವಂತೆ.
- Verse 40: ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು ತಗ್ಗಿಸಿದೆ ಎದುರಾಳಿಗಳ ನನಗಧೀನ ಮಾಡಿಬಿಟ್ಟು.
- Verse 41: ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು ಆ ಹಗೆಗಳನು ನಿರ್ಮೂಲಮಾಡಿದೆ ನಾ ಗುರಿಯಿಟ್ಟು.
- Verse 42: ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ ಸರ್ವೇಶ್ವರನಿಗೆ ಮೊರೆಯಿಟ್ಟರೂ ಅವರಿಗೆ ದೊರಕಲಿಲ್ಲ ಉತ್ತರ.
- Verse 43: ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.
- Verse 44: ನನ್ನ ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ ನಾನರಿಯದ ಜನರನ್ನೂ ನನಗಧೀನರನ್ನಾಗಿಸಿದೆ.
- Verse 45: ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ.
- Verse 46: ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.
- Verse 47: ಸರ್ವೇಶ್ವರನು ಚೈತನ್ಯಸ್ವರೂಪನು ನನ್ನುದ್ಧಾರಕನವಗೆ ಸ್ತುತಿಸ್ತೋತ್ರವು ನನ್ನಾಶ್ರಯಸಿರಿ ದೇವಗೆ ಜಯಕಾರವು.
- Verse 48: ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ.
- Verse 49: ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ ಎದುರಾಳಿಗೆ ತಪ್ಪಿಸಿ ನನ್ನನುನ್ನತಿಗೇರಿಸಿದೆ ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ.
- Verse 50: ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ.
- Verse 51: ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.
- Verse 52: ಅನುಗ್ರಹಿಸುವನಾತ ಅನಂತಾನಂತ ಕೃಪೆ ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ.