ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
11ನೇ ಅಧ್ಯಾಯ
- Verse 1: ಆಗ ನಾಮಾಥ್ಯನಾದ ಚೋಫರನು ಹೀಗೆಂದ:
- Verse 2: “ಇಷ್ಟೆಲ್ಲ ಮಾತುಗಳಿಗೆ ತಕ್ಕ ಉತ್ತರ ಬೇಡವೆ? ಮಾತಿನಮಲ್ಲನು ನೀತಿವಂತ ಎನಿಸಿಕೊಳ್ಳುವನೆ?
- Verse 3: ನಿನ್ನ ವಾಕ್ ಚಮತ್ಕಾರಕ್ಕೆ ಜನ ಬಾಯಿಮುಚ್ಚಿಕೊಳ್ಳಬೇಕೆ? ನಿನ್ನ ಕುಚೋದ್ಯಕ್ಕೆ ನಿನಗಾಗಬೇಡವೆ ನಾಚಿಕೆ?
- Verse 4: ನೀನು ಹೇಳುವುದೇ ಸತ್ಯವೆಂದು ವಾದಿಸುತ್ತಿರುವೆ ದೇವರ ದೃಷ್ಟಿಯಲ್ಲಿ ನೀನು ಪರಿಶುದ್ಧನು ಎನ್ನುತ್ತಿರುವೆ.
- Verse 5: ಆದರೆ ದೇವರೇ ಬಾಯ್ದೆರೆದು ನಿನಗೆ ವಿರುದ್ಧ ಮಾತನಾಡಿದರೆ ಒಳಿತು!
- Verse 6: ಜ್ಞಾನದ ರಹಸ್ಯಗಳನು ದೇವರೇ ನಿನಗೆ ತಿಳಿಸಲಿ ಸುಜ್ಞಾನ ಬಹುಮುಖವಾದುದೆಂದು ಆತನೇ ತೋರಿಸಲಿ ನಿನ್ನ ದೋಷಗಳನ್ನೆಲ್ಲ ಆತ ಲಕ್ಷಿಸಿಲ್ಲ ಎಂಬುದು ನಿನಗೆ ತಿಳಿದಿರಲಿ.
- Verse 7: ನೀನು ಕಂಡುಕೊಳ್ಳಬಲ್ಲೆಯಾ ದೇವರ ಅಂತರಾಳವನ್ನು? ಗ್ರಹಿಸಿಕೊಳ್ಳಬಲ್ಲೆಯಾ ಸರ್ವಶಕ್ತನ ಇತಿಮಿತಿಯನ್ನು?
- Verse 8: ಅದು ಆಕಾಶಕ್ಕಿಂತಲೂ ಎತ್ತರ; ನಿನ್ನಿಂದೇನು ಮಾಡಲು ಸಾಧ್ಯ? ಅದು ಪಾತಾಳಕ್ಕಿಂತಲೂ ಆಳ; ನಿನ್ನಿಂದ ಹೇಗೆ ತಿಳಿಯಲು ಸಾಧ್ಯ?
- Verse 9: ಅದು ಭೂಮಿಗಿಂತಲು ಉದ್ದ ಸಮುದ್ರಕ್ಕಿಂತಲು ಅಗಲ.
- Verse 10: ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?
- Verse 11: ಆತ ದುರುಳರನು ಗುರುತು ಹಚ್ಚುತ್ತಾನೆ ನೆರವಿಲ್ಲದೆ ಅಕ್ರಮವನು ಕಂಡುಹಿಡಿಯುತ್ತಾನೆ.
- Verse 12: ಕಾಡುಕತ್ತೆಮರಿ ನರಜನ್ಮ ತಾಳಿದಾಗ ಪೆದ್ದ ಮಾನವ ಬುದ್ಧಿವಂತನಾದ!
- Verse 13: ಸರಿಪಡಿಸಿಕೋ ನಿನ್ನ ಅಂತರಂಗವನ್ನು ದೇವರತ್ತ ಎತ್ತು ನಿನ್ನ ಕರಗಳನ್ನು.
- Verse 14: ನಿನ್ನ ಕೈಯಿಂದ ದೂರವಿರಲಿ ಅಕ್ರಮ ನಿನ್ನ ಗುಡಾರದಲಿ ನೆಲಸದಿರಲಿ ಅನ್ಯಾಯ.
- Verse 15: ಆಗ ಮಾತ್ರ ನೀನು ತಲೆಯೆತ್ತಬಲ್ಲೆ ಗೌರವದಿಂದ ಸ್ಥಿರಚಿತ್ತನಾಗಿರಬಲ್ಲೆ ನಿರ್ಭಯದಿಂದ.
- Verse 16: ಮರೆತುಬಿಡುವೆ ಆಗ ನಿನ್ನ ಕಷ್ಟದುಃಖವನ್ನು ನಿನ್ನ ನೆನಪಿಗೆ ಅದು ಹರಿದುಹೋದ ನೀರು.
- Verse 17: ಆಗ ನಿನ್ನ ಬಾಳು ನಡುಹಗಲಿಗಿಂತ ಪ್ರಜ್ವಲ ಕತ್ತಲು ಕೂಡ ಪ್ರಾತಃಕಾಲದಂತೆ ಉಜ್ವಲ!
- Verse 18: ನಂಬಿಕೆಯಿಂದಿರುವುದರಿಂದ ಧೈರ್ಯದಿಂದಿರುವೆ ಸುತ್ತಲು ಸುರಕ್ಷಿತನಾಗಿ ನೆಮ್ಮದಿಯಿಂದ ಮಲಗುವೆ.
- Verse 19: ಆಗ ನೀನು ವಿಶ್ರಮಿಸುವೆ ಹೆದರಿಕೆಯಿಲ್ಲದೆ ಅನೇಕರಿಗೆ ಬೇಕಾಗುವುದು ನಿನ್ನ ಮುಖಪ್ರಸನ್ನತೆ.
- Verse 20: ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”