ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
31ನೇ ಅಧ್ಯಾಯ
- Verse 1: “ಕನ್ಯೆಯನು (ಕಾಮದೃಷ್ಟಿಯಿಂದ) ನೋಡೆನೆಂದು ಮಾಡಿಕೊಂಡಿರುವೆ ನನ್ನ ಕಣ್ಣುಗಳೊಡನೆ ಒಪ್ಪಂದವನು.
- Verse 2: ಎಂಥ ಪಾಲನ್ನು ವಿಧಿಸಬಲ್ಲನು ದೇವರು ಮೇಲಣಲೋಕದಿಂದ? ಎಂಥ ಬಾಧ್ಯತೆಯನು ನೀಡಬಲ್ಲನು ಸರ್ವಶಕ್ತನು ಮಹೋನ್ನತದಿಂದ?
- Verse 3: ದುರ್ಜನರಿಗೆ ವಿಪತ್ತು ಬರಮಾಡುತ್ತಾನಲ್ಲವೆ? ಕೇಡಿಗರಿಗೆ ಉಪದ್ರವ ಕೊಡುತ್ತಾನಲ್ಲವೆ?
- Verse 4: ಆತ ನನ್ನ ನಡತೆಯನ್ನೂ ನೋಡುತ್ತಾನೆ; ನನ್ನ ಹೆಜ್ಜೆಗಳನ್ನೂ ಎಣಿಸುತ್ತಾನಲ್ಲವೆ?
- Verse 5: ನಾನು ಕಪಟ ಮಾರ್ಗದಲಿ ನಡೆದಿದ್ದರೆ ಮೋಸವನ್ನು ಹಿಂಬಾಲಿಸಿ ಓಡಿದ್ದರೆ,
- Verse 6: ತೂಗಿನೋಡಲಿ ನನ್ನನು ನ್ಯಾಯದ ತಕ್ಕಡಿಯಲಿ ಹೀಗೆ ನನ್ನ ಸತ್ಯತೆಯನು ದೇವರು ತಿಳಿದುಕೊಳ್ಳಲಿ.
- Verse 7: ದಾರಿತಪ್ಪಿ ನಾನು ನಡೆದಿದ್ದರೆ ನನ್ನ ಹೃದಯ, ಕಣ್ಗಳನ್ನು ಹಿಂಬಾಲಿಸಿದ್ದರೆ ಕಲ್ಮಷ ನನ್ನ ಕೈಗೆ ಅಂಟಿಕೊಂಡಿದ್ದರೆ,
- Verse 8: ನಾನು ಬಿತ್ತಿದ್ದನ್ನು ಮತ್ತೊಬ್ಬ ಉಣ್ಣಲಿ ನನ್ನ ಬೆಳೆಯು ಬುಡಮೇಲಾಗಲಿ.
- Verse 9: ನನ್ನ ಹೃದಯ ಪರಸ್ತ್ರೀಗೆ ಮಾರುಹೋಗಿದ್ದರೆ ನೆರೆಯವಳ ಬಾಗಿಲ ಬಳಿ ನಾನು ಹೊಂಚುಹಾಕಿದ್ದರೆ,
- Verse 10: ನನ್ನ ಸತಿ ಮತ್ತೊಬ್ಬನಿಗೆ ಧಾನ್ಯಬೀಸುವ ದಾಸಿಯಾಗಲಿ ಅಂಥ ನನ್ನ ಸತಿಯೊಡನೆ ಇತರರು ಸಂಗಮಿಸಲಿ.
- Verse 11: ಏಕೆಂದರೆ ಅಂಥ ನಡತೆ ಕಾಮುಕತನವಾಗುತ್ತಿತ್ತು ನ್ಯಾಯಾಧಿಪತಿಗಳ ದಂಡನೆಗೆ ತಕ್ಕ ಅಪರಾಧವಾಗುತ್ತಿತ್ತು.
- Verse 12: ನರಕ ಕೂಪದವರೆಗೆ ಬೆಂಕಿಯಾಗುತ್ತಿತ್ತು ನನ್ನ ಆದಾಯವನ್ನೆಲ್ಲ ನಿರ್ಮೂಲಮಾಡುತ್ತಿತ್ತು.
- Verse 13: ನನ್ನ ದಾಸದಾಸಿಯರು ನನ್ನ ಮೇಲೆ ತಪ್ಪುಹೊರಿಸಿದ್ದರೆ ನಾನು ಆ ತಪ್ಪನು ಅಸಡ್ಡೆ ಮಾಡಿದವನಾಗಿದ್ದರೆ,
- Verse 14: ದೇವರು ನ್ಯಾಯಸ್ಥಾಪನೆಗೆ ನಿಂತಾಗ ನಾನೇನು ಮಾಡುತ್ತಿದ್ದೆ? ಆತ ವಿಚಾರಣೆಗೆ ಬಂದಾಗ ನಾನೇನು ಉತ್ತರಕೊಡುತ್ತಿದ್ದೆ?
- Verse 15: ತಾಯಗರ್ಭದಲ್ಲಿ ನನ್ನ ನಿರ್ಮಿಸಿದಾತನೆ ಅವರನೂ ನಿರ್ಮಿಸಲಿಲ್ಲವೆ? ತಾಯಗರ್ಭದಲ್ಲಿ ನಮ್ಮನು ರೂಪಿಸಿದಾತ ಅದೇ ದೇವರಲ್ಲವೆ?
- Verse 16: ಬಡವರ ಬಯಕೆಗಳನು ನಾನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನು ನಾನು ಮಂಕಾಗಿಸಿದೆನೋ?
- Verse 17: ಅನಾಥರೊಂದಿಗೆ ಅನ್ನವನು ಹಂಚಿಕೊಳ್ಳದೆ ತುತ್ತನ್ನೆಲ್ಲಾ ನಾನೇ ಒಂಟಿಯಾಗಿ ಉಂಡೆನೆ?
- Verse 18: ಇಲ್ಲ, ಬಾಲ್ಯದಲ್ಲಿ ಅನಾಥನನು ತಂದೆಯೋಪಾದಿಯಲಿ ಸಾಕಿದೆ ಹುಟ್ಟಿದಂದಿನಿಂದ ಅನಾಥನಿಗೆ ದಾರಿತೋರಿಸಿದೆ.
- Verse 19: ಬಟ್ಟೆಯಿಲ್ಲದ ಬಡವನನು ನೋಡಿದಾಗಲೆಲ್ಲಾ ಹೊದಿಕೆಯಿಲ್ಲದೆ ನಡುಗುವುದನು ಕಂಡಾಗಲೆಲ್ಲಾ,
- Verse 20: ಅವರನು ನಾನು ಬೆಚ್ಚಗಾಗಿಸದೆ ಹೋಗಿದ್ದರೆ ನನ್ನ ಕುರಿಉಣ್ಣೆಯಿಂದ, ಅವರು ನನ್ನನು ಹರಸದೇಹೋಗಿದ್ದರೆ ತಮ್ಮ ಅಂತರಾಳದಿಂದ,
- Verse 21: ‘ನ್ಯಾಯಸ್ಥಾನದಲ್ಲಿ ನನಗೆ ಬೆಂಬಲವಿದೆ’ ಎಂದು ತಬ್ಬಲಿಯರ ಮೇಲೆ ನಾನು ಕೈಮಾಡಿದ್ದರೆ.
- Verse 22: ನನ್ನ ಹೆಗಲಿನ ಕೀಲು ತಪ್ಪಿಹೋಗಲಿ ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.
- Verse 23: ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗಿದೆ ಭಯ ಆತನ ಪ್ರಭಾವದ ನಿಮಿತ್ತ ಇಂಥ ಕೃತ್ಯ ನನಗೆ ದುಸ್ಸಾಧ್ಯ.
- Verse 24: ಬಂಗಾರದಲಿ ನಾನು ಭರವಸೆಯಿಟ್ಟಿದ್ದರೆ ಅಪರಂಜಿಯನೇ ನಾನು ನೆಚ್ಚಿಕೊಂಡಿದ್ದರೆ,
- Verse 25: ನನ್ನ ಆಸ್ತಿ ಅಪಾರವೆಂದು ಕೊಚ್ಚಿಕೊಂಡಿದ್ದರೆ ನಾನೇ ಸಂಪಾದಿಸಿದ ಸಂಪತ್ತೆಂದು ಹೆಚ್ಚಳಪಟ್ಟಿದ್ದರೆ,
- Verse 26: ಪ್ರಕಾಶಮಯ ಸೂರ್ಯನನು ನೋಡಿ ಕಾಂತಿಯುತ ಚಂದ್ರನ ಚಲನೆಯನು ದಿಟ್ಟಿಸಿ,
- Verse 27: ನನ್ನ ಹೃದಯ ಅವಕ್ಕೆ ಮಾರುಹೋಗಿದ್ದರೆ ಬಾಯ್ಮೇಲೆ ಕೈಯಿಟ್ಟು ಅವನ್ನು ಆರಾಧಿಸಿದ್ದರೆ,
- Verse 28: ಇದು ಕೂಡ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು ಮೇಲಣ ಲೋಕದ ದೇವರಿಗೆ ದ್ರೋಹವೆಸಗಿದಂತಾಗುತ್ತಿತ್ತು.
- Verse 29: ನನ್ನ ವೈರಿಗೆ ಕೇಡುಬಂದಾಗ ನಾನು ಹಿಗ್ಗಿದೆನೋ? ಅವನ ವಿನಾಶಕ್ಕಾಗಿ ನಾನು ಸಂತೋಷಪಟ್ಟೆನೋ?
- Verse 30: ಇಲ್ಲ, ಅವನು ಸಾಯಲಿ ಎಂದು ನನ್ನ ಬಾಯಿ ಶಪಿಸಿಲ್ಲ ಅಂಥ ಪಾಪಕಟ್ಟಿಕೊಳ್ಳಲು ನನ್ನ ಮನ ಒಪ್ಪಲಿಲ್ಲ.
- Verse 31: ‘ಆತ ಬಡಿಸಿದ ಭೋಜನದಿಂದ ತೃಪ್ತರಾಗದವರು ಎಲ್ಲಾದರೂ ಉಂಟೆ?’ ಎಂದು ನನ್ನ ಗುಡಾರದ ಆಳುಗಳೇ ಹೇಳಿಕೊಳ್ಳುತ್ತಿದ್ದರಲ್ಲವೆ?
- Verse 32: ಪರದೇಶೀಯರು ಹೊರಬೀದಿಯಲ್ಲಿ ತಂಗಬೇಕಾಗಿರಲಿಲ್ಲ ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿತ್ತಲ್ಲಾ.
- Verse 33: ಜನಸಮುದಾಯಕ್ಕೆ ನಾನು ಹೆದರಿದ್ದರೆ ಕುಲೀನರ ತಿರಸ್ಕಾರಕ್ಕೆ ನಾನು ಬೆದರಿದ್ದರೆ,
- Verse 34: ಬಾಗಿಲನ್ನೂ ದಾಟದೆ ಒಳಗೇ ನಾನು ಮೌನವಿದ್ದಿದ್ದರೆ ಜನಸಾಮಾನ್ಯರಂತೆ ಪಾಪವನು ಮನದಲೆ ಬಚ್ಚಿಟ್ಟಿದ್ದರೆ,
- Verse 35: ನನ್ನ ಕರೆಗೆ ಕಿವಿಗೊಡುವನೊಬ್ಬನು ಈಗಿದ್ದರೆ ಲೇಸಾಗಿರುತ್ತಿತ್ತು (ಇಗೋ ನೋಡಿ, ನನ್ನ ಕೈರುಜು; ನನಗುತ್ತರಕೊಡಲಿ ಸರ್ವಶಕ್ತನು;) ಬರೆದುಕೊಡಲಿ ವಿರೋಧಿ ನನ್ನ ಆಪಾದನಾ ಪತ್ರವನು.
- Verse 36: ಆ ಲಿಖಿತವನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದೆ ಅದನ್ನು ಪೇಟವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದೆ.
- Verse 37: ಅಧಿಪತಿಯಂತೆ ಆತನ ಸಾನಿಧ್ಯವನು ಸೇರುತ್ತಿದ್ದೆ ಒಂದೊಂದು ಹೆಜ್ಜೆಯ ಲೆಕ್ಕವನು ಒಪ್ಪಿಸುತ್ತಿದ್ದೆ.
- Verse 38: ನನ್ನ ಭೂಮಿ ನನಗೆ ವಿರುದ್ಧ ಪ್ರತಿಭಟಿಸಿದ್ದರೆ ನೇಗಿಲ ಗೆರೆಗಳೆಲ್ಲ ನನ್ನನು ದೂರಿ ರೋದಿಸಿದ್ದರೆ,
- Verse 39: ಕೂಲಿಕೊಡದೆ ಆ ಭೂಮಿಯ ಫಲವನು ನಾನು ಸವಿದಿದ್ದರೆ ಅದರ ದಣಿಗಳ ಪ್ರಾಣಹಾನಿಗೆ ನಾನು ಕಾರಣನಾಗಿದ್ದರೆ,
- Verse 40: ಅದು ಬೆಳೆಯಲಿ ಮುಳ್ಳುಗಳನ್ನು ಗೋದಿಗೆ ಬದಲಾಗಿ ಹಣಜಿಹುಲ್ಲನು ಜವೆಗೋದಿಗೆ ಪ್ರತಿಯಾಗಿ.” ಇತಿ, ಯೋಬನ ಮಾತುಗಳು ಮುಗಿದವು.