ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
24ನೇ ಅಧ್ಯಾಯ
- Verse 1: ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ I ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ II
- Verse 2: ಕಡಲನು ತಳಪಾಯವನಾಗಿಸಿದವನು ಆತನೆ I ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ II
- Verse 3: ಪ್ರಭುವಿನ ಶಿಖರವನು ಏರಬಲ್ಲವನಾರು ? I ಆ ನಿವಾಸದಲಿ ನಿಲ್ಲಲು ಯೋಗ್ಯನಾರು ? II
- Verse 4: ಅಂಥವನಿರಬೇಕು ಶುದ್ಧಹಸ್ತನು, ಸುಮನಸ್ಕನು I ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು II
- Verse 5: ಲಭಿಸುವುದಾತನಿಗೆ ಶುಭ ಪ್ರಭುವಿನಿಂದ I ನೀತಿಯ ಸತ್ಫಲ ರಕ್ಷಕ ದೇವನಿಂದ II
- Verse 6: ಇಂಥವರೆ ದೇವರ ದರ್ಶನಾಭ್ಯರ್ಥಿಗಳು I ಇಂಥವರೆ ಯಕೋಬ ದೇವನ ಭಕ್ತಾದಿಗಳು II
- Verse 7: ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II
- Verse 8: ಯಾರಿವನು ಮಹಿಮಾವಂತ ರಾಜಾಧಿರಾಜನು? I ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು! II
- Verse 9: ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II
- Verse 10: ಯಾರಿವನು ಮಹಿಮಾವಂತ ರಾಜಾಧಿರಾಜನು? I ಇವನೇ ಸೇನಾಧೀಶ್ವರನು, ಮಹಿಮಾರಾಜನು II