ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
8ನೇ ಅಧ್ಯಾಯ
- Verse 1: ಕೇಳಿ, ಜ್ಞಾನವೆಂಬಾಕೆ ಕರೆಯುತ್ತಾಳೆ ವಿವೇಕವೆಂಬಾಕೆ ಕೂಗಿ ಕರೆಯುತ್ತಿದ್ದಾಳೆ!
- Verse 2: ಹೆದ್ದಾರಿಯ ಅಕ್ಕಪಕ್ಕದ ದಿಣ್ಣೆಗಳಲ್ಲಿ ಹಾದಿಬೀದಿಗಳ ನಡುವಿನಲ್ಲಿ ನಿಂತಿದ್ದಾಳೆ, ನೋಡಿ
- Verse 3: ನಗರದ ಹೆಬ್ಬಾಗಿಲುಗಳಲ್ಲೂ ಜನಸೇರುವ ಪ್ರವೇಶದ್ವಾರಗಳಲ್ಲೂ ಘೋಷಿಸುತ್ತಾಳೆ ಹೀಗೆಂದು:
- Verse 4: ಮನುಜರೇ, ನಾನು ಕರೆಯುತ್ತಿರುವುದು ನಿಮ್ಮನ್ನೆ ನಾನು ಕೂಗಿ ಕರೆಯುತ್ತಿರುವುದು ಮಾನವ ಕುಲಪುತ್ರರನ್ನೆ.
- Verse 5: ಮೂಢರೇ, ಕಲಿತುಕೊಳ್ಳಿ ಜಾಣತನವನ್ನು ಬುದ್ಧಿಹೀನರೇ, ಗ್ರಹಿಸಿರಿ ಸನ್ಮತಿಯನ್ನು.
- Verse 6: ಕೇಳಿ, ನಾನು ಹೇಳುವ ಮಹತ್ವಪೂರ್ಣವಾದ ವಿಷಯವನ್ನು ನನ್ನ ನಾಲಿಗೆ ನುಡಿಯುವ ಯಥಾರ್ಥವಾದ ಸಂಗತಿಯನ್ನು
- Verse 7: ನನ್ನ ಬಾಯಿಂದ ಬರುತ್ತಿರುವುದು ಸತ್ಯ ನನ್ನ ತುಟಿಗೆ ದುಷ್ಟತನ ಅಸಹ್ಯ.
- Verse 8: ನನ್ನ ಮಾತುಗಳೆಲ್ಲ ನೀತಿಭರಿತ ಅವುಗಳಲ್ಲಿ ಇಲ್ಲ ಕುಟಿಲ, ಕುತಂತ್ರ.
- Verse 9: ತಿಳುವಳಿಕೆ ಉಳ್ಳವನಿಗೆ ಅವೆಲ್ಲ ಸರಳ ಗ್ರಹಿಕೆ ಉಳ್ಳವನಿಗೆ ಅವು ಯಥಾರ್ಥ.
- Verse 10: ಅಂಗೀಕರಿಸಿರಿ ಬೆಳ್ಳಿಗಿಂತ ಶ್ರೇಷ್ಠವಾದ ಬೋಧನೆಯನ್ನು ಅಪರಂಜಿಗಿಂತ ಅಪೂರ್ವವಾದ ಉಪದೇಶವನ್ನು.
- Verse 11: ಜ್ಞಾನವೆಂಬುದು ಹವಳಕ್ಕಿಂತ ಶ್ರೇಷ್ಠ, ಇಷ್ಟವಸ್ತುಗಳಾವುವು ಅದಕ್ಕೆ ಸಾಟಿಯಿಲ್ಲ.
- Verse 12: ಜ್ಞಾನವೆಂಬ ನನಗೆ ಜಾಣ್ಮೆಯೆ ಸಹವಾಸಿ ಯುಕ್ತ ತಿಳುವಳಿಕೆ ನನಗೆ ಸಂಗಾತಿ.
- Verse 13: ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.
- Verse 14: ಸದಾಲೋಚನೆ, ಸುಜ್ಞಾನ, ವಿವೇಕ ನನ್ನಲ್ಲಿವೆ; ಎಂತಲೇ ಶಕ್ತಿಸಾಮರ್ಥ್ಯ ಹೊಂದಿರುವೆ.
- Verse 15: ರಾಜರು ಆಳುವುದು ನನ್ನ ಸಹಾಯದಿಂದ ಅಧಿಪತಿಗಳು ನ್ಯಾಯತೀರ್ಪು ಮಾಡುವುದು ನನ್ನಿಂದ.
- Verse 16: ನನ್ನ ಮೂಲಕ ಭೂಪತಿಗಳು ರಾಜ್ಯ ಆಳುವರು ನಾಯಕರು ಭೂಮಿಯ ಮೇಲೆ ದೊರೆತನ ಮಾಡುವರು.
- Verse 17: ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ ಹಂಬಲಿಸಿ ಹುಡುಕುವವರು ನನ್ನನ್ನು ಕಂಡುಕೊಳ್ಳುತ್ತಾರೆ.
- Verse 18: ನನ್ನಲ್ಲಿವೆ ಶ್ರೀಮಂತಿಕೆ ಮತ್ತು ಘನತೆ ಶಾಶ್ವತ ಸಂಪತ್ತು ಹಾಗೂ ಸಮೃದ್ಧಿ.
- Verse 19: ನಾನು ನೀಡುವ ಫಲ ಬಂಗಾರಕ್ಕಿಂತ ಶ್ರೇಷ್ಠ ನನ್ನಿಂದ ದೊರಕುವ ಆದಾಯ ಅಪ್ಪಟ ಬೆಳ್ಳಿಗಿಂತ ಅಮೂಲ್ಯ.
- Verse 20: ನಾನು ಹಿಡಿದಿರುವ ಹಾದಿ ನೀತಿಯುತ ನಾನು ನಡೆಯುವುದು ನ್ಯಾಯಪಥ.
- Verse 21: ನನ್ನನ್ನು ಪ್ರೀತಿಸುವವರಿಗೆ ದೊರಕಿಸುವೆ ಸಿರಿಸಂಪತ್ತನ್ನು ಬಾಧ್ಯವಾಗಿ ನಾನವರ ಬೊಕ್ಕಸಗಳನ್ನು ತುಂಬಿಸುವೆ ಭರ್ತಿಯಾಗಿ.
- Verse 22: ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.
- Verse 23: ನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೆ ಜಗದುತ್ಪತ್ತಿಗೆ ಮುಂಚೆಯೇ, ಅನಾದಿಕಾಲದಲ್ಲೆ.
- Verse 24: ಜಲನಿಧಿಗಳಾಗಲಿ, ನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೆ ನಾ ಬಂದೆ ಜನ್ಮತಾಳಿ.
- Verse 25: ನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೆ.
- Verse 26: ನಾನು ಜನಿಸಿದೆ ಭೂಮಿಯನ್ನಾಗಲಿ, ಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೆ.
- Verse 27: ನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಾಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆವಾಗ,
- Verse 28: ಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗ,
- Verse 29: ಜಲಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಸಮುದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗ.
- Verse 30: ನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆ.
- Verse 31: ಉಲ್ಲಾಸಿಸುತ್ತಿದ್ದೆ ಆತನ ಭೂಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.
- Verse 32: ಆದ್ದರಿಂದ ಮಕ್ಕಳೇ, ಕಿವಿಗೊಡಿ ನನಗೀಗ ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೆಂಬುದು ನಿಜ.
- Verse 33: ಉಪದೇಶವನ್ನು ಕೇಳಿ ಬುದ್ಧಿವಂತರಾಗಿರಿ ಅದನ್ನು ನೀವು ನಿರಾಕರಿಸಬೇಡಿ.
- Verse 34: ನನ್ನ ಬಾಗಿಲಬಳಿ ಪ್ರತಿದಿನ ಕಾಯುತ್ತಾ ನನ್ನ ಹೊಸಲಿನತ್ತ ನಿರೀಕ್ಷಿಸಿ ನೋಡುತ್ತಾ ನನ್ನ ಮಾತನ್ನು ಆಲಿಸುವವನು ಭಾಗ್ಯವಂತ.
- Verse 35: ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಳ್ಳುವನು ಸರ್ವೇಶ್ವರನ ಕೃಪಾಕಟಾಕ್ಷಕ್ಕೆ ಪಾತ್ರನಾಗುವನು.
- Verse 36: ನನಗೆ ತಪ್ಪುಮಾಡುವವನು ತನ್ನಾತ್ಮಕ್ಕೇ ಕೇಡುಮಾಡುತ್ತಾನೆ ನನ್ನನ್ನು ಹಗೆಮಾಡುವವರೆಲ್ಲರು ಮೃತ್ಯುವನ್ನು ಪ್ರೀತಿಸುತ್ತಾರೆ.