ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಪರಮಗೀತೆ
2ನೇ ಅಧ್ಯಾಯ
- Verse 1: ನಾನು ಶಾರೋನಿನ ನೆಲಸಂಪಿಗೆ ತಗ್ಗಿನ ತಾವರೆ. ನಲ್ಲ :
- Verse 2: ನನ್ನ ಪ್ರಿಯಳು ಸ್ತ್ರೀಯರಲ್ಲಿ ಶ್ರೇಷ್ಠಳು ಮುಳ್ಳುಪೊದರಿನ ನಡುವೆ ತಾವರೆಯಂತಿಹಳು. ನಲ್ಲೆ :
- Verse 3: ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನಂತಿಹನು. ಕುಳಿತು ಸಂತೋಷಗೊಂಡೆ ನಾನದರ ನೆರಳಿನೊಳು ಸಿಹಿ ನನ್ನ ನಾಲಿಗೆಗೆ ಅದರ ಫಲವು.
- Verse 4: ಬರಮಾಡಿಕೊಂಡನು ನನ್ನನು ಔತಣದ ಮನೆಗೆ ನನ್ನ ಮೇಲೆತ್ತಿದನು ‘ಪ್ರೀತಿ’ ಎಂಬ ತನ್ನ ಪತಾಕೆ.
- Verse 5: ಅಸ್ವಸ್ಥಳಾಗಿರುವೆನು ಅನುರಾಗದಿಂದ ಉಪಚರಿಸಿ ನನ್ನನು ಸೇಬುಹಣ್ಣುಗಳಿಂದ ಚೇತನಗೊಳಿಸಿರಿ ದೀಪದ್ರಾಕ್ಷೆಯಿಂದ.
- Verse 6: ಆತನ ಎಡಗೈ ನನಗೆ ತಲೆದಿಂಬಾಗಿದ್ದರೆ ಆತನ ಬಲಗೈ ನನ್ನನ್ನು ಆಲಂಗಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು!
- Verse 7: ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆ ಆಣೆಯಿಟ್ಟು ವನದ ಹುಲ್ಲೆ ಹರಿಣಿಗಳ ಮೇಲೆ. ನಲ್ಲೆ :
- Verse 8: ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ ಜಿಗಿದು ಬರುತಿಹನು ಗುಡ್ಡಗಳ ಮೇಲೆ.
- Verse 9: ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ.
- Verse 10: ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು : ನಲ್ಲ : ‘ಎದ್ದು ಬಾ, ಪ್ರಿಯತಮೆ, ಬಾ ನನ್ನೊಂದಿಗೆ, ಸುಂದರಿಯೇ.
- Verse 11: ಇಗೋ, ಚಳಿಗಾಲ ಕಳೆಯಿತು ಮಳೆಗಾಲ ಮುಗಿಯಿತು.
- Verse 12: ಧರೆಯಲ್ಲೆಲ್ಲ ಹೂಗಳು ಅರಳಿವೆ ನಲಿದು ಹಾಡುವ ಕಾಲ ಬಂದಿದೆ ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ.
- Verse 13: ಅಂಜೂರದ ಕಾಯಿಗಳು ಹಣ್ಣಾಗಿವೆ ದ್ರಾಕ್ಷಾಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ.’ ನಲ್ಲ : ಎದ್ದು ಬಾ, ನನ್ನ ಪ್ರೇಯಸಿಯೇ ಬಾ ನನ್ನೊಂದಿಗೆ, ಸುಂದರಿಯೇ.
- Verse 14: ಬಂಡೆಯ ಬಿರುಕುಗಳಲ್ಲಿ ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು! ನಿನ್ನ ರೂಪ ಎನಿತೋ ತಂಪು!
- Verse 15: ತೋಟಗಳನು ಹಾಳುಮಾಡುವಾ ನರಿಗಳನ್ನೂ ಮರಿಗಳನ್ನೂ ಹಿಡಿದು ತನ್ನಿ ಹೂಗಳು ಅರಳಿವೆ ನಮ್ಮ ತೋಟಗಳಲಿ. ನಲ್ಲೆ :
- Verse 16: ನನ್ನ ಇನಿಯನು ನನ್ನವನೇ, ನಾನು ಅವನವಳೇ ಮೇಯುತಿದೆ ಅವನ ಮಂದೆ ನೆಲದಾವರೆಗಳ ನಡುವೆ.
- Verse 17: ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಹೊರಟು ಬಾ, ನನ್ನ ಕಾಂತ ಜಿಂಕೆಯಂತಿರು ಪ್ರಾಯದ ಹುಲ್ಲೆಯಂತಿರು ಬೇತೆರ್ ಪರ್ವತದ ಮೇಲಿರು.