ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
7ನೇ ಅಧ್ಯಾಯ
- Verse 1: ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮೆಲ್ಯನ ಮಗನೂ ಇಸ್ರಯೇಲಿನ ಅರಸನೂ ಆದ ಪೆಕಹ ಎಂಬವರು ಜೆರುಸಲೇಮಿನ ಮೇಲೆ ದಂಡೆತ್ತಿಬಂದರು. ಆದರೆ ಅದನ್ನು ಜಯಿಸಲು ಅವರಿಂದಾಗಲಿಲ್ಲ.
- Verse 2: ಸಿರಿಯರ ಸೈನಿಕರು ಈಗಾಗಲೇ ಇಸ್ರಯೇಲಿನ ಗಡಿಯೊಳಗಿದ್ದಾರೆ ಎಂಬ ಸುದ್ದಿ ಜುದೇಯದ ಅರಸನಿಗೆ ಮುಟ್ಟಿದ್ದೇ ತಡ, ಅವನೂ ಅವನ ಪ್ರಜೆಗಳೆಲ್ಲರೂ ಹೆದರಿದರು. ಬಿರುಗಾಳಿಗೆ ಸಿಕ್ಕಿದ ಗಿಡಮರಗಳಂತೆ ನಡುಗಿದರು.
- Verse 3: ಆಗ ಸರ್ವೇಶ್ವರಸ್ವಾಮಿ ಯೆಶಾಯನಿಗೆ ಹೀಗೆಂದರು : “ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಆಹಾಜಾರಸನನ್ನು ಕಾಣಲುಹೋಗು. ಅಗಸರ ಹೊಲದ ಮೇಲೆ ಹಾದುಹೋಗುವ ರಾಜಮಾರ್ಗದಲ್ಲಿ ಕೆರೆಯ ಕಾಲುವೆಯ ತುದಿಯ ಬಳಿ ಆತ ನಿನಗೆ ಸಿಕ್ಕುವನು. ಅವನಿಗೆ ಈ ಪ್ರಕಾರ ತಿಳಿಸು :
- Verse 4: ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ.
- Verse 5: ಸಿರಿಯ, ಇಸ್ರಯೇಲ್, ಅರಸನಾದ ಪೆಕಹನೊಂದಿಗೆ ಸೇರಿ ಒಳಸಂಚು ಮಾಡಿದ್ದಾರೆ.
- Verse 6: ‘ಜುದೇಯ ನಾಡಿಗೆ ಮುತ್ತಿಗೆ ಹಾಕಿ, ಅದನ್ನು ಬೆದರಿಸಿ ಆಕ್ರಮಿಸಿಕೊಳ್ಳೋಣ; ತೆಬೇಲನ ಮಗನಿಗೆ ಅಲ್ಲಿಯೇ ಪಟ್ಟಕಟ್ಟೋಣ’ ಎಂದು ದುರಾಲೋಚನೆ ಮಾಡಿಕೊಂಡಿದ್ದಾರೆ.
- Verse 7: “ಆದರೆ ಸ್ವಾಮಿ ಸರ್ವೇಶ್ವರ ಆದ ನಾನು ನಿನಗೆ ಹೇಳುತ್ತೇನೆ: ಈ ಯೋಜನೆ ಕೈಗೂಡುವುದಿಲ್ಲ. ಈ ಒಳಸಂಚು ನೆರವೇರುವುದಿಲ್ಲ.
- Verse 8: ಕಾರಣ, ರಾಜಧಾನಿಯಾದ ದಮಸ್ಕಸ್ಸಿಗಿಂತ ಸಿರಿಯ ಹೆಚ್ಚಲ್ಲ, ರಾಜನಾದ ರೆಚೀನನಿಗಿಂತ ದಮಸ್ಕಸ್ ಹೆಚ್ಚಲ್ಲ. ಇಸ್ರಯೇಲಿನ ಬಗ್ಗೆ ಹೇಳುವುದಾದರೆ, ಅದು ಅರವತ್ತೈದು ವರ್ಷದೊಳಗೆ ನುಚ್ಚುನೂರಾಗುವುದು, ಅಖಂಡ ರಾಷ್ಟ್ರವಾಗಿ ಉಳಿಯದು.
- Verse 9: ಅಂತೆಯೇ, ರಾಜಧಾನಿಯಾದ ಸಮಾರ್ಯಕ್ಕಿಂತ ಇಸ್ರಯೇಲ್ ಹೆಚ್ಚಲ್ಲ. ರಾಜನಾದ ಪೆಕಹನಿಗಿಂತ ಸಮಾರ್ಯ ಹೆಚ್ಚಲ್ಲ. ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ.”
- Verse 10: ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:
- Verse 11: “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು.” ಎಂದರು.
- Verse 12: ಅದಕ್ಕೆ ಆಹಾಜನು, “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು.
- Verse 13: ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ?
- Verse 14: ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.
- Verse 15: ಆತನು ‘ಕೆಟ್ಟದ್ದು ಬೇಡ, ಒಳ್ಳೆಯದು ಬೇಕು’ ಎನ್ನುವಷ್ಟು ಬಲ್ಲವನಾಗುವಾಗ ಮೊಸರನ್ನೂ ಜೇನುತುಪ್ಪವನ್ನೂ ತಿನ್ನುವನು.
- Verse 16: ಆ ಮಗು ‘ಕೆಟ್ಟದ್ದು ಬೇಡ, ಒಳ್ಳೆಯದು ಬೇಕು’ ಎನ್ನುವಷ್ಟು ಬಲ್ಲವನಾಗುವುದರೊಳಗೆ, ನೀನು ಯಾವ ಇಬ್ಬರು ಅರಸರುಗಳಿಗೆ ಹೆದರಿ ನಡುಗುತ್ತಿರುವಿಯೋ ಆ ಅರಸರುಗಳ ದೇಶ ನಿರ್ಜನವಾಗುವುದು.
- Verse 17: ಸರ್ವೇಶ್ವರ ನಿನ್ನ ಮೇಲೂ ನಿನ್ನ ಪ್ರಜೆಯ ಮೇಲೂ ನಿನ್ನ ತಂದೆಯ ಮನೆತನದ ಮೇಲೂ ಭೀಕರ ದಿನಗಳನ್ನು ಬರಮಾಡುವರು. ಇಸ್ರಯೇಲ್ ರಾಜ್ಯ ಜುದೇಯ ನಾಡಿನಿಂದ ಬೇರ್ಪಟ್ಟ ದಿನ ಮೊದಲುಗೊಂಡು ಇದುವರೆಗೂ ಅಂಥ ದಿನಗಳು ಬಂದಿರಲಿಲ್ಲ. ಅಸ್ಸೀರಿಯದ ಅರಸನೇ ಆ ದುರ್ದಿನಗಳ ಪ್ರತೀಕ.
- Verse 18: ಆ ದಿನ ಬಂದಾಗ ಈಜಿಪ್ಟಿನಿಂದ ನೊಣಗಳನ್ನೋ ಎಂಬಂತೆ, ಅಸ್ಸೀರಿಯ ನಾಡಿನಿಂದ ದುಂಬಿಗಳನ್ನೋ ಎಂಬಂತೆ, ಸ್ವಾಮಿ ಸಿಳ್ಳುಹಾಕಿ ಶತ್ರುಗಳನ್ನು ಬರಮಾಡುವರು.
- Verse 19: ಅವರೆಲ್ಲ ಬಂದು ಕಡಿದಾದ ಕಣಿವೆಗಳಲ್ಲಿಯೂ ಬಂಡೆಗಳ ಸಂದುಗೊಂದುಗಳಲ್ಲಿಯೂ ಮುಳ್ಳುಪೊದೆಗಳಲ್ಲಿಯೂ ಗೋಮಾಳಗಳಲ್ಲಿಯೂ ಹುಳುಹುಪ್ಪಟೆಗಳಂತೆ ಮುತ್ತಿಕೊಳ್ಳುವರು.
- Verse 20: ಆ ದಿನದಂದು ಯೂಫ್ರೆಟಿಸ್ ನದಿಯಾಚೆ ಇರುವ ಅಸ್ಸೀರಿಯದ ರಾಜನೆಂಬ ಹಜಾಮನ ಕತ್ತಿಯಿಂದ ಸರ್ವೇಶ್ವರ ನಿನ್ನ ತಲೆಯನ್ನೂ ಗಡ್ಡವನ್ನೂ ಕಾಲುಗೂದಲನ್ನೂ ಬೋಳಿಸುವರು.
- Verse 21: ಅಂದು ಒಬ್ಬ ರೈತನು ಒಂದು ಕಡಸನ್ನು ಎರಡು ಮೇಕೆಗಳನ್ನು ಮಾತ್ರ ಉಳಿಸಿಕೊಳ್ಳಬಲ್ಲವನಾದರೂ ಬಾಯಿ ಮೊಸರಾಗುವಷ್ಟು ಅಧಿಕವಾದ ಹಾಲನ್ನು ಕರೆಯುವನು.
- Verse 22: ಹೌದು, ನಾಡಿನಲ್ಲಿ ಅಳಿದುಳಿದವರೆಲ್ಲರು ಹಾಲು ಜೇನನ್ನೇ ಉಣ್ಣುವರು.
- Verse 23: ಆ ದಿನದಂದು ಸಾವಿರ ಬೆಳ್ಳಿನಾಣ್ಯಗಳಷ್ಟು ಬೆಲೆಬಾಳುವ ಸಹಸ್ರ ದ್ರಾಕ್ಷಿಬಳ್ಳಿಗಳು ಬೆಳೆಯುವಂಥ ಪ್ರತಿಯೊಂದು ಪ್ರದೇಶದಲ್ಲೂ ಮುಳ್ಳುಪೊದೆಗಳು ಬೆಳೆದುಕೊಳ್ಳುವುವು.
- Verse 24: ಅಲ್ಲಿ ಜನರು ಬಿಲ್ಲುಬಾಣಗಳನ್ನು ಹಿಡಿದು ಬೇಟೆಯಾಡುವರು. ನಾಡೆಲ್ಲ ಮುಳ್ಳುಪೊದೆಯಾಗಿ ಇರುವುದು.
- Verse 25: ಸಾಗುವಳಿಯಾಗುತ್ತಿದ್ದ ಗುಡ್ಡಗಳಲ್ಲಿ ಯಾರೂ ಬರಲು ಅಂಜುವಷ್ಟು ಮುಳ್ಳುಕೊಂಪೆಗಳು ತುಂಬಿರುವುವು; ಅವು ದನಕರುಗಳು ಮೇದು ಕುರಿಮೇಕೆಗಳು ತುಳಿದಾಡುವ ಮಾಳಗಳಾಗುವುವು.”