ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
26ನೇ ಅಧ್ಯಾಯ
- Verse 1: ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.
- Verse 2: ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
- Verse 3: ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.
- Verse 4: ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.
- Verse 5: ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು.
- Verse 6: ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.
- Verse 7: ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ.
- Verse 8: ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.
- Verse 9: ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು.
- Verse 10: ದಯೆತೋರಿದರೂ ಕಲಿಯನು ದುಷ್ಟನು ಆ ನ್ಯಾಯನೀತಿಯನು ಧರ್ಮಕ್ಷೇತ್ರದೊಳು ಸಹ ಗೈವನು ಅಕ್ರಮವನು ಗೌರವಿಸನು ಸರ್ವೇಶ್ವರನ ಮಹಿಮೆಯನು.
- Verse 11: ಅವರ ಮೇಲೆ ನೀ ಕೈಯೆತ್ತಿದರೂ, ಸರ್ವೇಶ್ವರಾ, ಲಕ್ಷಿಸರವರು ನಿನ್ನನ್ನು. ನಾಚಲಿ ಅವರು ನೋಡಿ ನಿನ್ನ ಸ್ವಜನಾಭಿಮಾನವನು ದಹಿಸಿಬಿಡಲಿ ಅಗ್ನಿಜ್ವಾಲೆಯು ಆ ನಿನ್ನ ವಿರೋಧಿಗಳನು.
- Verse 12: ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ.
- Verse 13: ನಮ್ಮ ದೇವರಾದ ಸರ್ವೇಶ್ವರಾ, ಇಗೋ, ನೋಡು ನಮ್ಮನಾಳಿಹರು ಭೂರಾಜರು ನಿನ್ನ ಬಿಟ್ಟು, ಆದರೇನು, ಹೊಗಳುವೆವು ನಿನ್ನ ನಾಮವನೆ ಮುನ್ನಿಟ್ಟು.
- Verse 14: ಮಡಿದುಹೋದರು ಆ ಒಡೆಯರೆಲ್ಲ ಮರಳಿ ಅವರ ಪ್ರೇತಗಳು ಎದ್ದುಬರುವಂತಿಲ್ಲ. ನೀನವರನು ಬಡಿದು ನಸುಕಿಹಾಕಿರುವೆ ಅವರ ನೆನಪನೆ ಅಳಿಸಿಹಾಕಿರುವೆ.
- Verse 15: ಹೆಚ್ಚಿಸಿರುವೆ ಸರ್ವೇಶ್ವರಾ, ನಿನ್ನ ಜನರನು ಹೌದು, ವೃದ್ಧಿಗೊಳಿಸಿರುವೆ ನಿನ್ನ ಪ್ರಜೆಯನು. ವಿಸ್ತರಿಸಿರುವೆ ನಾಡಿನ ಮೇರೆಗಳನು ಈಪರಿ ಪಡೆದಿರುವೆ ಮಹಿಮೆಯನು.
- Verse 16: ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.
- Verse 17: ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ.
- Verse 18: ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
- Verse 19: ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.
- Verse 20: ನನ್ನ ಜನರೇ, ಹೋಗಿ; ನಿಮ್ಮ ನಿಮ್ಮ ಮನೆಗಳನ್ನು ಸೇರಿ ಬಾಗಿಲು ಮುಚ್ಚಿಕೊಳ್ಳಿ. ದೇವರ ಕೋಪ ತೀರುವತನಕ ಕೊಂಚಕಾಲ ಅವಿತುಕೊಳ್ಳಿ.
- Verse 21: ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.