ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹಬಕ್ಕೂಕ
2ನೇ ಅಧ್ಯಾಯ
- Verse 1: “ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲುಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರುನೋಡುವೆನು.”
- Verse 2: ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು.
- Verse 3: ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು.
- Verse 4: ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.
- Verse 5: ಐಶ್ವರ್ಯ ಮೋಸಕರ, ಮದವೇರಿದವನು ಮತ್ತನಾದವನಂತೆ ಅಸ್ಥಿರ. ಅವನ ಅತಿಯಾಸೆ ಪಾತಾಳದಷ್ಟು ವಿಶಾಲ. ಮೃತ್ಯುವಿನಂತೆ ಅವನಿಗೆ ತೃಪ್ತಿಯೇ ಇಲ್ಲ. ಸಕಲ ಜನಾಂಗಗಳನ್ನು ಬಲೆಯೊಳಗೆ ಎಳೆದುಕೊಳ್ಳುತ್ತಾನೆ. ಸಮಸ್ತ ಜನಾಂಗಗಳನ್ನು ರಾಶಿಮಾಡಿಕೊಳ್ಳುತ್ತಾನೆ.
- Verse 6: ಆದರೆ ಹೀಗೆ ಅವನಿಂದ ಆಕರ್ಷಿತರಾದವರೆಲ್ಲ ಅವನ ಸಮಾಚಾರವೆತ್ತಿ ಗೇಲಿಯ ಲಾವಣಿಕಟ್ಟುವರು. “ತನ್ನದಲ್ಲದನ್ನು ಹೆಚ್ಚು ಹೆಚ್ಚಾಗಿ ತುಂಬಿಸಿಕೊಂಡವನಿಗೆ ಧಿಕ್ಕಾರ! ಬಡ್ಡಿಗಾಗಿ ಅಡವಿಟ್ಟ ವಸ್ತುಗಳನ್ನು ರಾಶಿಮಾಡಿಕೊಂಡವನಿಗೆ ಧಿಕ್ಕಾರ! ಎಷ್ಟುಕಾಲ ಹೀಗೆ ಮಾಡಿಯಾನು?’
- Verse 7: ನಿನ್ನ ಸಾಲಗಾರರೇ ತಟ್ಟನೆ ನಿನಗೆದುರಾಗಿ ನಿಲ್ಲುವರು; ಬಾಕಿದಾರರೇ ಎಚ್ಚೆತ್ತು ನಿನಗೆ ಬೆದರಿಕೆ ಹಾಕುವರು. ಕೊಳ್ಳೆಹೊಡೆದು ನಿನ್ನನ್ನು ಲೂಟಿಮಾಡುವರು.
- Verse 8: ನೀನು ಅನೇಕ ಜನಾಂಗಗಳನ್ನು ಕೊಳ್ಳೆಹೊಡೆದಿರುವೆ. ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಈ ಕಾರಣ, ಜನಾಂಗಗಳಲ್ಲಿ ಅಳಿದುಳಿದವರೆಲ್ಲರು ನಿನ್ನನ್ನು ಕೊಳ್ಳೆಹೊಡೆಯುವರು.
- Verse 9: ಕೇಡಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನ್ನ ನಿವಾಸವನ್ನು ಎತ್ತರವಾಗಿ ಕಟ್ಟಿಕೊಂಡೆ. ನಿನ್ನ ಕುಟುಂಬಕ್ಕಾಗಿ ಇತರರ ಆಸ್ತಿಯನ್ನು ಅನ್ಯಾಯವಾಗಿ ದೋಚಿಕೊಂಡೆ, ನಿನ್ನಗೆ ಧಿಕ್ಕಾರ!
- Verse 10: ನಿನ್ನ ಯೋಜನೆಗಳಿಂದ ನಿನ್ನ ಮನೆತನಕ್ಕೆ ಅಪಕೀರ್ತಿ ತಂದುಕೊಂಡಿರುವೆ. ಹಲವಾರು ನಾಡುಗಳನ್ನು ನಿರ್ಮೂಲಮಾಡಿ ನಿನ್ನ ವಂಶಕ್ಕೆ ವಿನಾಶವನ್ನು ಬರಮಾಡಿಕೊಂಡಿರುವೆ.
- Verse 11: ಗೋಡೆಯಲ್ಲಿ ಇರುವ ಕಲ್ಲುಗಳೇ ನಿನಗೆ ವಿರುದ್ಧವಾಗಿ ಕೂಗುವುವು. ಚಾವಣಿಯ ತೊಲೆಗಳು ಸಹ ಅದಕ್ಕೆ ಮಾರ್ದನಿ ಕೂಡಿಸುವುವು.
- Verse 12: ನರಹತ್ಯೆಯಿಂದ ನಗರಗಳನ್ನು ನಿರ್ಮಿಸುವವನಿಗೆ ಧಿಕ್ಕಾರ! ಅನ್ಯಾಯವಾದ ಅಸ್ತಿವಾರದ ಮೇಲೆ ಊರನ್ನು ಕಟ್ಟುವವನಿಗೆ ಧಿಕ್ಕಾರ!
- Verse 13: ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು. ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥವಾಗುವುದು. ಇದೆಲ್ಲ ಸೇನಾಧೀಶ್ವರ ಸರ್ವೇಶ್ವರನ ಚಿತ್ತವಷ್ಟೆ.
- Verse 14: ಸಮುದ್ರವು ನೀರಿನಿಂದ ತುಂಬಿ ಇರುವಂತೆ ಜಗವು ಸರ್ವೇಶ್ವರಸ್ವಾಮಿಯ ಮಹಿಮೆಯ ಜ್ಞಾನದಿಂದ ತುಂಬಿರುವುದು.
- Verse 15: ನಿನ್ನ ರೋಷವನ್ನು ಮಧುಪಾನಕ್ಕೆ ಬೆರಸಿ, ಅದರಿಂದ ನಿನ್ನ ನೆರೆಯವರನ್ನು ಮತ್ತರಾಗಿಸಿ, ಅವರ ಬೆತ್ತಲೆತನವನ್ನು ನೋಡಬೇಕೆಂದಿರುವ ನಿನಗೆ ಧಿಕ್ಕಾರ!
- Verse 16: ನೀನು ಸನ್ಮಾನದಿಂದಲ್ಲ, ಅವಮಾನದಿಂದ ತುಂಬಿರುವೆ; ನೀನೂ ಕುಡಿ; ಕುಡಿದು ನಗ್ನನಾಗು. ಸರ್ವೇಶ್ವರಸ್ವಾಮಿಯ ಬಲಗೈಯಲ್ಲಿರುವ ಕೋಪದ ಕೊಡ ನಿನ್ನ ಪಾಲಿಗೂ ಬರುವುದು. ಅವಮಾನವೇ ನಿನ್ನ ಸನ್ಮಾನವನ್ನು ಆವರಿಸಿಬಿಡುವುದು.
- Verse 17: ನೀನು ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಲೆಬನೋನ್ ಅರಣ್ಯಗಳನ್ನೂ ಕಡಿದುಹಾಕಿರುವೆ. ಈಗ ನಿನ್ನನ್ನೇ ಕಡಿದುಹಾಕಲಾಗುವುದು. ಅದರ ಪ್ರಾಣಿಪಕ್ಷಿಗಳನ್ನು ನಾಶಮಾಡಿರುವೆ. ಈಗ ಅವು ನಿನಗೆ ಭಯಾನಕವಾಗಿರುವುವು.
- Verse 18: ಕೆತ್ತನೆಯ ವಿಗ್ರಹದಿಂದ ಪ್ರಯೋಜನ ಏನು? ಅದು ಕೇವಲ ಮಾನವನ ಕೃತಿ, ಸುಳ್ಳು ಕಣಿಗಾಗಿ ಇಟ್ಟುಕೊಂಡ ಎರಕದ ಗೊಂಬೆ. ಅದನ್ನು ನಿರ್ಮಿಸಿದಾತನಿಗೆ ಅದು ಯಾವ ಅಭಯವನ್ನು ತಾನೇ ತಂದೀತು? ಅದು ಬಾಯ್ದೆರೆಯಲಾಗದ ಮೂಕ ಬೊಂಬೆಯಷ್ಟೆ.
- Verse 19: ಮರದ ತುಂಡಿಗೆ, ‘ಎಚ್ಚೆತ್ತುಕೊ’; ಜಡಕಲ್ಲಿಗೆ, ‘ಎದ್ದೇಳು’ ಎಂದು ಆಜ್ಞಾಪಿಸುವವನು ನಿಜಕ್ಕೂ ಬುದ್ಧಿಹೀನನು. ಬೊಂಬೆಯು ಬೋಧಿಸಬಲ್ಲದೇ? ಬೆಳ್ಳಿಬಂಗಾರವನ್ನು ಅದಕ್ಕೆ ಹೊದಿಸಿರುವುದೇನೋ ನಿಜ. ಆದರೆ ಅದಕ್ಕೆ ಉಸಿರೋ ಇಲ್ಲವೇ ಇಲ್ಲ.
- Verse 20: ಸರ್ವೇಶ್ವರ ಪ್ರಸನ್ನನಾಗಿಹನು ಪವಿತ್ರಾಲಯದಲ್ಲಿ; ಜಗವೆಲ್ಲ ಮೌನತಾಳಲಿ ಆತನ ಸನ್ನಿಧಿಯಲ್ಲಿ.