पवित्र बाइबिल
ಹೊಸ ಒಡಂಬಡಿಕೆ
ಮತ್ತಾಯ
23ನೇ ಅಧ್ಯಾಯ
- Verse 1: ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು:
- Verse 2: “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ.
- Verse 3: ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ.
- Verse 4: ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು.
- Verse 5: ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ.
- Verse 6: ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ.
- Verse 7: ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ.
- Verse 8: ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು.
- Verse 9: ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ.
- Verse 10: ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು.
- Verse 11: ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು.
- Verse 12: ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.
- Verse 13: “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ.
- Verse 14: ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! (ವಿಧವೆಯರ ಮನೆಮಾರುಗಳನ್ನು ನೀವು ನುಂಗಿಬಿಡುತ್ತೀರಿ. ನಟನೆಗಾಗಿ ಉದ್ದುದ್ದ ಜಪತಪಗಳನ್ನು ಮಾಡುತ್ತೀರಿ, ನೀವು ಅತಿ ಕಠಿಣವಾದ ದಂಡನೆಗೆ ಗುರಿಯಾಗುವಿರಿ).
- Verse 15: ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಕೇವಲ ಒಬ್ಬ ವ್ಯಕ್ತಿಯನ್ನು ಮತಾಂತರಿಸಿಕೊಳ್ಳುವುದಕ್ಕಾಗಿ ಜಲನೆಲಗಳನ್ನು ಸುತ್ತಿ ಬರುತ್ತೀರಿ. ಮತಾಂತರಗೊಂಡ ಬಳಿಕವಾದರೋ ಅವನು ನಿಮಗಿಂತಲೂ ಇಮ್ಮಡಿ ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ.
- Verse 16: “ಕುರುಡ ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅವನು ಅದಕ್ಕೇನೂ ಬದ್ಧನಲ್ಲ. ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೋ, ಅವನು ಅದನ್ನು ನಡೆಸಿಯೇ ತೀರಬೇಕು ಎನ್ನುತ್ತೀರಿ.
- Verse 17: ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ,
- Verse 18: ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನೂ ಬದ್ಧನಲ್ಲ. ಬಲಿಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ.
- Verse 19: ದೃಷ್ಟಿಹೀನರೇ! ಯಾವುದು ಶ್ರೇಷ್ಠ? ಕಾಣಿಕೆಯೋ, ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ?
- Verse 20: ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ.
- Verse 21: ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಮಾತ್ರವಲ್ಲ, ಅದರಲ್ಲಿ ನೆಲೆಸುವ ದೇವರ ಮೇಲೂ ಆಣೆಯಿಡುತ್ತಾನೆ.
- Verse 22: ಹಾಗೆಯೇ, ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೂ ಅದರಲ್ಲಿ ಆಸೀನರಾಗಿರುವವರ ಮೇಲೂ ಆಣೆಯಿಡುತ್ತಾನೆ.
- Verse 23: ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.
- Verse 24: ಅಂಧನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ, ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ.
- Verse 25: ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳ್ಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿಹೋಗಿದೆ.
- Verse 26: ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
- Verse 27: “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ.
- Verse 28: ಬಹಿರಂಗ ನೋಟಕ್ಕೆ ನೀವು ಸತ್ಪುರುಷರು. ಅಂತರಂಗದಲ್ಲಾದರೋ ಕಪಟ ಕಲ್ಮಶಗಳಿಂದ ತುಂಬಿದವರು.
- Verse 29: “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟಿಸುತ್ತೀರಿ.
- Verse 30: ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ.
- Verse 31: ಹೀಗೆ ಪ್ರವಾದಿಗಳನ್ನು ಕೊಲೆಮಾಡಿದವರ ಪೀಳಿಗೆಗೆ ನೀವು ಸೇರಿದವರು ಎಂದು ನೀವೇ ಸಾಕ್ಷಿಕೊಡುತ್ತೀರಿ.
- Verse 32: ಒಳ್ಳೆಯದು, ನಿಮ್ಮ ಪೂರ್ವಜರು ಪ್ರಾರಂಭಿಸಿದ್ದನ್ನು ನೀವು ಹೋಗಿ ಪೂರ್ಣಗೊಳಿಸಿರಿ.
- Verse 33: “ಎಲೈ ಸರ್ಪಗಳೇ, ವಿಷಸರ್ಪಗಳ ಪೀಳಿಗೆಯೇ, ನರಕ ದಂಡನೆಯಿಂದ ನೀವು ಹೇಗೆ ತಾನೆ ಪಾರಾಗುವಿರಿ? ಇಗೋ ಕೇಳಿ: ‘ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಪಂಡಿತರನ್ನೂ ಧರ್ಮಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ.
- Verse 34: ಅವರಲ್ಲಿ ಕೆಲವರನ್ನು ಕೊಲೆಮಾಡುವಿರಿ, ಶಿಲುಬೆಗೆ ಏರಿಸುವಿರಿ, ಮತ್ತೆ ಕೆಲವರನ್ನು ನಿಮ್ಮ ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವಿರಿ. ಊರಿಂದೂರಿಗೆ ಅಟ್ಟಿ ಅವರನ್ನು ಪೀಡಿಸುವಿರಿ.
- Verse 35: ಹೀಗೆ, ಪುನೀತ ಹೇಬೆಲನ ರಕ್ತ ಮೊದಲ್ಗೊಂಡು ಬಲಿಪೀಠಕ್ಕೂ ಗರ್ಭಗುಡಿಗೂ ನಡುವೆ ನೀವು ಕೊಲೆಮಾಡಿದ ಬರಕೀಯನ ಮಗ ಜಕರೀಯನ ರಕ್ತದವರೆಗೆ ಪೃಥ್ವಿಯಲ್ಲಿ ಸುರಿಸಲಾದ ಎಲ್ಲಾ ಸತ್ಪುರುಷರ ರಕ್ತದ ಹೊಣೆ ನಿಮ್ಮದೇ.
- Verse 36: ಹೌದು, ಇದೆಲ್ಲವೂ ಈ ಪೀಳಿಗೆಯ ಮೇಲೆ ಬರುವುದೆಂದು ನಿಮಗೆ ಒತ್ತಿ ಹೇಳುತ್ತೇನೆ.
- Verse 37: “ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆನು. ಆದರೆ ನೀವು ಒಪ್ಪಲಿಲ್ಲ.
- Verse 38: ಇಗೋ, ನಿಮ್ಮ ದೇವಾಲಯ ಬರಿದಾಗುವುದು, ಪಾಳು ಬೀಳುವುದು.
- Verse 39: ಏಕೆಂದರೆ, ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು!’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಮತ್ತೆ ಕಾಣಲಾರಿರಿ ಎಂಬುದು ನಿಶ್ಚಯ.”