ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಲೂಕ
23ನೇ ಅಧ್ಯಾಯ
- Verse 1: ಬಳಿಕ ಸಭೆಸೇರಿದ್ದವರೆಲ್ಲರೂ ಎದ್ದು ಯೇಸುಸ್ವಾಮಿಯನ್ನು ಪಿಲಾತನ ಬಳಿಗೆ ಕರೆದುತಂದರು.
- Verse 2: ಅಲ್ಲಿ ಆತನ ಮುಂದೆ, “ಇವನು ರೋಮ್ ಚಕ್ರವರ್ತಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ. ತಾನೇ ‘ಕ್ರಿಸ್ತ, ಒಬ್ಬ ಅರಸ,’ ಎಂದು ಹೇಳಿಕೊಳ್ಳುತ್ತಾನೆ. ಹೀಗೆ ನಮ್ಮ ಜನತೆ ದಂಗೆಯೇಳುವಂತೆ ಪ್ರಚೋದಿಸುತ್ತಾನೆ. ಇದನ್ನೆಲ್ಲಾ ನಾವು ಕಂಡುಹಿಡಿದಿದ್ದೇವೆ,” ಎಂದು ದೂರತೊಡಗಿದರು.
- Verse 3: ಆಗ ಪಿಲಾತನು, “ನೀನು ಯೆಹೂದ್ಯರ ಅರಸನೋ?” ಎಂದು ಯೇಸುವನ್ನು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು.
- Verse 4: ಪಿಲಾತನು ಮುಖ್ಯಯಾಜಕರನ್ನೂ ಜನರ ಗುಂಪನ್ನೂ ನೋಡಿ, “ಈ ಮನುಷ್ಯರಲ್ಲಿ ಶಿಕ್ಷಾರ್ಹದೋಷ ಯಾವುದೂ ನನಗೆ ಕಾಣುವುದಿಲ್ಲ,” ಎಂದನು.
- Verse 5: ಆದರೆ ಅವರು, “ಇವನು ಜುದೇಯ ನಾಡಿನಲ್ಲೆಲ್ಲಾ ಬೋಧನೆಮಾಡುತ್ತಾ ಕ್ರಾಂತಿಗೆ ಕರೆಗೊಡುತ್ತಾನೆ; ಗಲಿಲೇಯದಲ್ಲಿ ಪ್ರಾರಂಭಿಸಿ ಇಲ್ಲಿಯವರೆಗೂ ಬಂದಿದ್ದಾನೆ,” ಎಂದು ಒತ್ತಾಯಪೂರ್ವಕವಾಗಿ ಆರೋಪಿಸಿದರು.
- Verse 6: ಇದನ್ನು ಕೇಳಿದಾಕ್ಷಣವೇ ಪಿಲಾತನು, “ಇವನು ಗಲಿಲೇಯದವನೋ?” ಎಂದು ವಿಚಾರಿಸಿದನು.
- Verse 7: ಯೇಸುಸ್ವಾಮಿ ಹೆರೋದನ ಆಧಿಪತ್ಯಕ್ಕೆ ಒಳಪಟ್ಟವರೆಂದು ತಿಳಿದುಕೊಂಡು ಅವರನ್ನು ಆತನ ಬಳಿಗೆ ಕಳುಹಿಸಿದನು. ಹೆರೋದನು ಅದೇ ಸಮಯಕ್ಕೆ ಜೆರುಸಲೇಮಿಗೆ ಬಂದಿದ್ದನು.
- Verse 8: ಯೇಸುಸ್ವಾಮಿಯನ್ನು ಕಂಡೊಡನೆ ಹೆರೋದನಿಗೆ ತುಂಬ ಸಂತೋಷವಾಯಿತು. ಆತನು ಅವರನ್ನು ಕಾಣಲು ಬಹಳ ದಿನಗಳಿಂದ ಕಾತರನಾಗಿದ್ದನು. ಏಕೆಂದರೆ ಅವರ ವಿಷಯವಾಗಿ ಈಗಾಗಲೇ ಎಷ್ಟೋ ಕೇಳಿದ್ದನು. ಅವರು ಯಾವುದಾದರೊಂದು ಪವಾಡಕಾರ್ಯ ಮಾಡುವುದನ್ನು ನೋಡಬೇಕೆಂಬ ಅಪೇಕ್ಷೆ ಆತನಿಗಿತ್ತು.
- Verse 9: ಆದುದರಿಂದ ಆತನು ಯೇಸುವನ್ನು ಅನೇಕ ವಿಧವಾಗಿ ಪ್ರಶ್ನಿಸಿದನು. ಆದರೆ ಅವರು ಒಂದಕ್ಕೂ ಉತ್ತರಕೊಡಲಿಲ್ಲ.
- Verse 10: ಇತ್ತ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಮುಂದೆಬಂದು ಅವರ ಮೇಲೆ ಪ್ರಬಲವಾಗಿ ದೋಷಾರೋಪಣೆ ಮಾಡತೊಡಗಿದರು.
- Verse 11: ಕಡೆಗೆ ಹೆರೋದನು ತನ್ನ ಸೈನಿಕರೊಡನೆ ಸೇರಿ ಯೇಸುವನ್ನು ಅಣಕಿಸಿ ಅವಮಾನಪಡಿಸಿದನು. ರಾಜವಸ್ತ್ರವನ್ನು ವೇಷಭೂಷಣವಾಗಿ ಅವರಿಗೆ ತೊಡಿಸಿ ಪಿಲಾತನ ಬಳಿಗೆ ಮರಳಿ ಕಳುಹಿಸಿಕೊಟ್ಟನು.
- Verse 12: ಅದುವರೆಗೂ ಪರಸ್ಪರ ವೈರಿಗಳಾಗಿದ್ದ ಹೆರೋದನು ಮತ್ತು ಪಿಲಾತನು ಅಂದೇ ಮಿತ್ರರಾದರು.
- Verse 13: ಪಿಲಾತನು ಮುಖ್ಯಯಾಜಕರನ್ನೂ ಮುಖಂಡರನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ,
- Verse 14: “ಜನರು ದಂಗೆಯೇಳುವಂತೆ ಈ ಮನುಷ್ಯ ಪ್ರೇರೇಪಿಸುತ್ತಾನೆಂದು ಇವನನ್ನು ನನ್ನ ಬಳಿಗೆ ಕರೆತಂದಿರಲ್ಲವೇ? ಇಗೋ, ನಿಮ್ಮ ಎದುರಿಗೇ ವಿಚಾರಣೆ ಮಾಡಿದ್ದೇನೆ; ಇವನಲ್ಲಿ ನೀವು ಆರೋಪಿಸುವಂಥ ದೋಷಗಳೊಂದೂ ನಮಗೆ ಕಾಣಲಿಲ್ಲ;
- Verse 15: ಹೆರೋದ ಅರಸನಿಗೂ ಕಾಣಲಿಲ್ಲ; ಎಂದೇ ಇವನನ್ನು ಮರಳಿ ನನ್ನ ಬಳಿಗೆ ಕಳುಹಿಸಿಬಿಟ್ಟಿದ್ದಾರೆ. ಮರಣದಂಡನೆಗೆ ಗುರಿಯಾಗಿಸುವ ಯಾವುದನ್ನೂ ಇವನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
- Verse 16: ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
- Verse 17: (ಪಾಸ್ಕಹಬ್ಬದ ಸಂದರ್ಭದಲ್ಲಿ ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಪಿಲಾತನು ಬಿಡುಗಡೆ ಮಾಡಬೇಕಾಗಿತ್ತು).
- Verse 18: ಆದರೆ ಅವರೆಲ್ಲರೂ, “ಇವನನ್ನು ಮುಗಿಸಿಬಿಡಿ, ಬರಬ್ಬನನ್ನು ನಮಗೆ ಬಿಡುಗಡೆಮಾಡಿ,” ಎಂದು ಒಕ್ಕೊರಲಿನಿಂದ ಬೊಬ್ಬೆಹಾಕಿದರು.
- Verse 19: ನಗರದಲ್ಲಿ ದಂಗೆ ಎಬ್ಬಿಸಿದ ಹಾಗೂ ಕೊಲೆಮಾಡಿದ ಕಾರಣ ಸೆರೆಯಲ್ಲಿ ಹಾಕಲಾಗಿದ್ದ ಬರಬ್ಬನೇ ಅವನು.
- Verse 20: ಪಿಲಾತನು ಯೇಸುಸ್ವಾಮಿಯನ್ನು ಬಿಡುಗಡೆ ಮಾಡಬಯಸಿ ಮತ್ತೊಮ್ಮೆ ಜನರೊಡನೆ ಮಾತನಾಡಿ ನೋಡಿದನು.
- Verse 21: ಅವರಾದರೋ, “ಇವನನ್ನು ಶಿಲುಬೆಗೇರಿಸಿ, ಇವನನ್ನು ಶಿಲುಬೆಗೇರಿಸಿ,” ಎಂದು ಆರ್ಭಟಿಸತೊಡಗಿದರು.
- Verse 22: ಮೂರನೆಯ ಸಾರಿ ಪಿಲಾತನು, “ಏಕೆ? ಇವನೇನು ಕೇಡುಮಾಡಿದ್ದಾನೆ? ಇವನನ್ನು ಮರಣದಂಡನೆಗೆ ಗುರಿಪಡಿಸುವಂಥ ಅಪರಾಧ ಯಾವುದೂ ನನಗೆ ಕಂಡುಬರುವುದಿಲ್ಲ. ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
- Verse 23: ಆದರೂ ಅವರು ಅಧಿಕಾಧಿಕವಾಗಿ ಆರ್ಭಟಿಸುತ್ತಾ ಯೇಸುವನ್ನು ಶಿಲುಬೆಗೆ ಏರಿಸಲೇ ಬೇಕೆಂದು ಕೂಗಾಡಿದರು. ಕಟ್ಟಕಡೆಗೆ ಕೂಗಾಟಕ್ಕೇ ಗೆಲುವಾಯಿತು!
- Verse 24: ಆ ಜನರ ಕೋರಿಕೆಯಂತೆಯೇ ಆಗಲೆಂದು ಪಿಲಾತನು ತೀರ್ಮಾನಿಸಿದನು.
- Verse 25: ಅವರು ಕೇಳಿಕೊಂಡ ಪ್ರಕಾರ ಕೊಲೆಕಲಹಗಳ ನಿಮಿತ್ತ ಸೆರೆಯಲ್ಲಿದ್ದ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನಾದರೋ ಅವರ ಇಚ್ಛಾನುಸಾರಕ್ಕೆ ಬಿಟ್ಟುಬಿಟ್ಟನು.
- Verse 26: ಸೈನಿಕರು ಯೇಸುಸ್ವಾಮಿಯನ್ನು ಕರೆದೊಯ್ಯುವಾಗ ಸಿರೇನ್ ಪಟ್ಟಣದ ಸಿಮೋನ ಎಂಬಾತ ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಅವನನ್ನು ಹಿಡಿದು ಶಿಲುಬೆಯನ್ನು ಹೊತ್ತು ಯೇಸುವಿನ ಹಿಂದೆ ಬರುವಂತೆ ಮಾಡಿದರು.
- Verse 27: ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು.
- Verse 28: ಯೇಸು ಅವರ ಕಡೆ ತಿರುಗಿ, “ಜೆರುಸಲೇಮಿನ ಕುವರಿಯರೇ, ನನಗಾಗಿ ಅಳಬೇಡಿ; ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದುಃಖಿಸಿರಿ.
- Verse 29: ಕಾಲವೊಂದು ಬರುವುದು; ಆಗ ಜನರು, ‘ಬಂಜೆಯರೇ ಭಾಗ್ಯವಂತರು! ಹೆರದವಳೇ, ಹಾಲೂಡಿಸದವಳೇ ಧನ್ಯಳು!’ ಎನ್ನುವರು.
- Verse 30: ಅದೇ ಸಮಯದಲ್ಲಿ ‘ಪರ್ವತಗಳೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ, ನಮ್ಮನ್ನು ನುಂಗಿಬಿಡಿ,’ ಎಂದು ಕೂಗಿಕೊಳ್ಳುವರು.
- Verse 31: ಹಸಿಮರಕ್ಕೇ ಇಷ್ಟೆಲ್ಲಾ ಮಾಡಿದರೆ ಒಣಮರಕ್ಕಾಗುವ ಗತಿಯಾದರೂ ಏನು!” ಎಂದರು.
- Verse 32: ಯೇಸುವಿನ ಸಂಗಡ ಕೊಲ್ಲುವುದಕ್ಕಾಗಿ ಇಬ್ಬರು ಅಪರಾಧಿಗಳನ್ನೂ ಕೊಂಡೊಯ್ಯುತ್ತಿದ್ದರು.
- Verse 33: ‘ಕಪಾಲ’ ಎಂಬ ಸ್ಥಳಕ್ಕೆ ಬಂದು ಸೇರಿದ ಮೇಲೆ ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದರು. ಆ ಇಬ್ಬರು ಅಪರಾಧಿಗಳಲ್ಲಿ ಒಬ್ಬನನ್ನು ಅವರ ಬಲಗಡೆಯಲ್ಲೂ ಮತ್ತೊಬ್ಬನನ್ನು ಎಡಗಡೆಯಲ್ಲೂ ಶಿಲುಬೆಗೇರಿಸಿದರು.
- Verse 34: ಆಗ ಯೇಸು, “ಪಿತನೇ, ಇವರನ್ನು ಕ್ಷಮಿಸಿ; ತಾವೇನು ಮಾಡುತ್ತಿರುವರೆಂದು ಇವರು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಬಟ್ಟೆಗಳನ್ನು ಚೀಟುಹಾಕಿ ಹಂಚಿಕೊಂಡರು.
- Verse 35: ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, “ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು.
- Verse 36: ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ,
- Verse 37: “ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ,” ಎಂದು ಅಣಕಿಸುತ್ತಿದ್ದರು.
- Verse 38: ಯೇಸುವಿನ ಶಿಲುಬೆಯ ಮೇಲ್ಗಡೆ, “ಇವನು ಯೆಹೂದ್ಯರ ಅರಸ” ಎಂಬ ಲಿಖಿತವಿತ್ತು.
- Verse 39: ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತ, ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು,” ಎಂದು ಹಂಗಿಸಿದನು.
- Verse 40: ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, “ನಿನಗೆ ದೇವರ ಭಯಬೇಡವೇ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ;
- Verse 41: ನಮಗೇನೋ ಶಿಕ್ಷೆ ನ್ಯಾಯವಾಗಿದೆ, ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!” ಎಂದನು.
- Verse 42: ಬಳಿಕ ಅವನು, “ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ,” ಎಂದು ಬೇಡಿಕೊಂಡನು.
- Verse 43: ಅವನಿಗೆ ಯೇಸು, “ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
- Verse 44: ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
- Verse 45: ಮಹಾದೇವಾಲಯದ ತೆರೆಯು ಇಬ್ಭಾಗವಾಗಿ ಸೀಳಿಹೋಯಿತು.
- Verse 46: ಯೇಸುಸ್ವಾಮಿ, “ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
- Verse 47: ನಡೆದುದನ್ನು ಕಂಡ ಶತಾಧಿಪತಿ ದೇವರನ್ನು ಹೊಗಳುತ್ತಾ, “ಈ ಮನುಷ್ಯ ಖಂಡಿತವಾಗಿ ಸತ್ಪುರುಷನೇ ಸರಿ,” ಎಂದನು.
- Verse 48: ಈ ದೃಶ್ಯವನ್ನು ನೋಡಲು ಕೂಡಿದ್ದ ಜನರೆಲ್ಲರು ಅಲ್ಲಿ ನಡೆದುದನ್ನು ನೋಡಿ ದುಃಖದಿಂದ ಎದೆಬಡಿದುಕೊಳ್ಳುತ್ತಾ ಹಿಂದಿರುಗಿದರು.
- Verse 49: ಯೇಸುವಿನ ಪರಿಚಿತರೆಲ್ಲರು ಹಾಗೂ ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಮಹಿಳೆಯರು ದೂರದಲ್ಲಿ ನಿಂತುಕೊಂಡು ಇದೆಲ್ಲವನ್ನು ನೋಡುತ್ತಿದ್ದರು.
- Verse 50: ಅರಿಮತಾಯ ಎಂಬುದು ಜುದೇಯದ ಒಂದು ಪಟ್ಟಣ. ಜೋಸೆಫನು ಇದರ ನಿವಾಸಿ. ಇವನು ಸದ್ಗುಣಶೀಲನು, ಸತ್ಪುರುಷನು ಹಾಗೂ ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದವನು. ಯೆಹೂದ್ಯರ ನ್ಯಾಯಸಭೆಯ ಸದಸ್ಯರಲ್ಲಿ ಇವನೂ ಒಬ್ಬನು. ಆದರೂ ಅವರ ತೀರ್ಪಿಗೂ ಕೃತ್ಯಕ್ಕೂ ಇವನು ಅನುಮತಿಸಿರಲಿಲ್ಲ.
- Verse 51: ಅರಿಮತಾಯ ಎಂಬುದು ಜುದೇಯದ ಒಂದು ಪಟ್ಟಣ. ಜೋಸೆಫನು ಇದರ ನಿವಾಸಿ. ಇವನು ಸದ್ಗುಣಶೀಲನು, ಸತ್ಪುರುಷನು ಹಾಗೂ ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದವನು. ಯೆಹೂದ್ಯರ ನ್ಯಾಯಸಭೆಯ ಸದಸ್ಯರಲ್ಲಿ ಇವನೂ ಒಬ್ಬನು. ಆದರೂ ಅವರ ತೀರ್ಪಿಗೂ ಕೃತ್ಯಕ್ಕೂ ಇವನು ಅನುಮತಿಸಿರಲಿಲ್ಲ.
- Verse 52: ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು.
- Verse 53: ತರುವಾಯ ಶರೀರವನ್ನು ಶಿಲುಬೆಯಿಂದ ಇಳಿಸಿ, ನಾರುಮಡಿವಸ್ತ್ರದಲ್ಲಿ ಸುತ್ತಿ ಸಮಾಧಿಯಲ್ಲಿ ಇಟ್ಟನು. ಬಂಡೆಯೊಂದರಲ್ಲಿ ಕೊರೆಯಲಾಗಿದ್ದ ಈ ಸಮಾಧಿಯಲ್ಲಿ ಅದುವರೆಗೆ ಯಾರನ್ನೂ ಭೂಸ್ಥಾಪನೆ ಮಾಡಿರಲಿಲ್ಲ.
- Verse 54: ಅಂದು ಶುಕ್ರವಾರ - ಸಿದ್ಧತೆಯ ದಿನ. ಇನ್ನೇನು ಸಬ್ಬತ್ ಪ್ರಾರಂಭವಾಗುವುದರಲ್ಲಿತ್ತು.
- Verse 55: ಗಲಿಲೇಯದಿಂದ ಯೇಸುವಿನ ಸಂಗಡ ಬಂದಿದ್ದ ಮಹಿಳೆಯರು ಜೋಸೆಫನ ಜೊತೆ ಹೋಗಿ ಸಮಾಧಿಯನ್ನೂ ಯೇಸುವಿನ ಪಾರ್ಥಿವ ಶರೀರವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿಕೊಂಡರು.
- Verse 56: ಅನಂತರ ಅಲ್ಲಿಂದ ಹಿಂದಿರುಗಿ ಶವಲೇಪನಕ್ಕಾಗಿ ಸುಗಂಧದ್ರವ್ಯಗಳನ್ನು ಮತ್ತು ಪರಿಮಳ ತೈಲವನ್ನು ಸಿದ್ಧಮಾಡಿಕೊಂಡರು. ಸಬ್ಬತ್ದಿನ, ಧರ್ಮನಿಯಮಾನುಸಾರ ವಿಶ್ರಮಿಸಿಕೊಂಡರು.