ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
27ನೇ ಅಧ್ಯಾಯ
- Verse 1: ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾದಮೇಲೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ‘ಔಗುಸ್ತದಳ’ ಎಂಬ ರೋಮಿನ ದಳಕ್ಕೆ ಸೇರಿದ ಜೂಲಿಯಸ್ ಎಂಬ ಶತಾಧಿಪತಿಯ ವಶಕ್ಕೆ ಒಪ್ಪಿಸಲಾಯಿತು.
- Verse 2: ಆಗ ಅದ್ರಮಿತಿಯದಿಂದ ಬಂದು ಏಷ್ಯಾ ಪ್ರಾಂತ್ಯದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ಹಡಗನ್ನು ಹತ್ತಿ ನಾವು ಪ್ರಯಾಣ ಬೆಳೆಸಿದೆವು. ಥೆಸಲೋನಿಕದಿಂದ ಬಂದ ಮಕೆದೋನಿಯದ ಅರಿಸ್ತಾರ್ಕ ನಮ್ಮ ಸಂಗಡ ಇದ್ದನು.
- Verse 3: ಮಾರನೆಯ ದಿನ ನಾವು ಸಿದೋನಿಗೆ ಆಗಮಿಸಿದೆವು. ಪೌಲನು ತನ್ನ ಗೆಳೆಯರನ್ನು ಸಂದರ್ಶಿಸುವುದಕ್ಕೂ ಅವರಿಂದ ತನಗೆ ಅಗತ್ಯವಿದ್ದುದನ್ನು ಪಡೆಯುವುದಕ್ಕೂ ಜೂಲಿಯಸನು ಆದರದಿಂದ ಅನುಮತಿಯನ್ನು ಕೊಟ್ಟನು.
- Verse 4: ನಾವು ಅಲ್ಲಿಂದ ಹೊರಟೆವು. ಎದುರುಗಾಳಿ ಬೀಸುತ್ತಿತ್ತು. ಆದುದರಿಂದ ಸೈಪ್ರಸ್ ದ್ವೀಪದ ಮರೆಗೆ ಸಾಗಿದೆವು.
- Verse 5: ಸಿಲಿಸಿಯಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಸಿಯ ಪ್ರಾಂತ್ಯದಲ್ಲಿರುವ ‘ಮುರ’ ಎಂಬ ಊರಿಗೆ ಬಂದೆವು.
- Verse 6: ಅಲ್ಲಿ, ಅಲೆಕ್ಸಾಂಡ್ರಿಯದಿಂದ ಬಂದು ಇಟಲಿಗೆ ಹೋಗುತ್ತಿದ್ದ ಹಡಗನ್ನು ಕಂಡು ಶತಾಧಿಪತಿ ನಮ್ಮನ್ನು ಅದಕ್ಕೆ ಹತ್ತಿಸಿದನು.
- Verse 7: ನಾವು ಅನೇಕ ದಿನಗಳವರೆಗೆ ನಿಧಾನವಾಗಿ ಪ್ರಯಾಣಮಾಡಿದೆವು. ಅತಿ ಕಷ್ಟದಿಂದ ‘ಸ್ನೀಡ’ ಎಂಬ ಊರಿಗೆ ಎದುರಾಗಿ ಬಂದೆವು. ಆ ದಿಸೆಯಲ್ಲಿ ಪ್ರಯಾಣಮಾಡಲು ಎದುರುಗಾಳಿ ನಮ್ಮನ್ನು ಬಿಡಲಿಲ್ಲ. ಆದ್ದರಿಂದ ನಾವು ಸಾಲ್ಮೋನೆ ಭೂಶಿರವನ್ನು ದಾಟಿ, ಕ್ರೇಟ್ ದ್ವೀಪದ ಮರೆಯನ್ನು ಸೇರಿದೆವು.
- Verse 8: ಆ ದ್ವೀಪದ ಕರಾವಳಿಯಲ್ಲೇ ಪ್ರಯಾಸದಿಂದ ಸಾಗುತ್ತಾ, ಲಸಾಯ ಊರಿನ ಸಮೀಪದಲ್ಲಿರುವ ‘ಸುಗಮ ರೇವು’ ಎಂಬ ಸ್ಥಳವನ್ನು ಸೇರಿದೆವು.
- Verse 9: ಇಷ್ಟರಲ್ಲಿ ಬಹಳ ದಿನಗಳು ಕಳೆದಿದ್ದವು. ಉಪವಾಸದ ಮಹಾದಿನವೂ ಕಳೆದಿತ್ತು. ಈ ಕಾಲದಲ್ಲಿ ಸಮುದ್ರದಲ್ಲಿ ಮುಂದುವರಿಸುವುದು ಅಪಾಯಕರವಾಗಿತ್ತು.
- Verse 10: ಆದುದರಿಂದ ಪೌಲನು, “ಮಿತ್ರರೇ, ಇಲ್ಲಿಂದ ಮುಂದಕ್ಕೆ ಪ್ರಯಾಣ ಅಪಾಯಕರವಾಗಿರುವಂತೆ ತೋರುತ್ತದೆ. ಹಡಗು ಮತ್ತು ಅದರಲ್ಲಿರುವ ಸರಕುಸಾಮಗ್ರಿಗಳಿಗೆ ಮಾತ್ರವಲ್ಲ, ನಮ್ಮ ಪ್ರಾಣಕ್ಕೂ ಕಷ್ಟನಷ್ಟ ಸಂಭವಿಸಲಿದೆ,” ಎಂದು ಎಚ್ಚರಿಸಿದನು.
- Verse 11: ಆದರೆ ಶತಾಧಿಪತಿ ಪೌಲನನ್ನು ನಂಬದೆ, ನೌಕೆಯ ನಾಯಕನ ಹಾಗೂ ಅದರ ಯಜಮಾನನ ಮಾತುಗಳಿಗೆ ಕಿವಿಗೊಟ್ಟನು.
- Verse 12: ಅಲ್ಲದೆ ಚಳಿಗಾಲವನ್ನು ಕಳೆಯಲು ಆ ಬಂದರು ಹಿತಕರವಾಗಿರಲಿಲ್ಲ. ಆದ್ದರಿಂದ ಅಲ್ಲಿಂದ ಹೊರಟು, ಸಾಧ್ಯವಾದರೆ, ಫೆನಿಕ್ಸ್ ಎಂಬ ಊರನ್ನು ಸೇರಿ, ಅಲ್ಲೇ ಚಳಿಗಾಲವನ್ನು ಕಳೆಯಬಹುದೆಂದು ಹೆಚ್ಚುಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಫೆನಿಕ್ಸ್, ಕ್ರೇಟ್ ದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ.
- Verse 13: ದಕ್ಷಿಣದಿಂದ ತೆಳುಗಾಳಿ ಬೀಸಲಾರಂಭಿಸಿತು. ಪ್ರಯಾಣಿಕರು ತಮ್ಮ ಉದ್ದೇಶ ಕೈಗೂಡಿತೆಂದು ಭಾವಿಸಿದರು. ಅವರು ಹಡಗಿನ ಲಂಗರುಗಳನ್ನು ಎತ್ತಿ, ಕ್ರೇಟ್ ದ್ವೀಪವನ್ನು ಅನುಸರಿಸುತ್ತಾ, ತೀರದ ಮಗ್ಗುಲಲ್ಲೇ ಪ್ರಯಾಣ ಹೊರಟರು.
- Verse 14: ಆದರೆ ಸ್ವಲ್ಪದರಲ್ಲೇ ‘ಈಶಾನ್ಯ ಮಾರುತ’ ಎಂಬ ಪ್ರಚಂಡಗಾಳಿ ದ್ವೀಪದಿಂದ ಬೀಸತೊಡಗಿತು.
- Verse 15: ಅದರ ಹೊಡೆತಕ್ಕೆ ಹಡಗು ಸಿಕ್ಕಿಕೊಂಡಿತು. ಅದಕ್ಕೆ ಎದುರಾಗಿ ಚಲಿಸಲು ಅಸಾಧ್ಯವಾಗಿ ಗಾಳಿಬೀಸಿದ ಕಡೆಯೇ ಹಡಗನ್ನು ತೇಲಬಿಟ್ಟೆವು.
- Verse 16: ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು.
- Verse 17: ಹಡಗಿನವರು ಅದನ್ನು ಮೇಲಕ್ಕೆ ಎಳೆದು ಹಗ್ಗಗಳಿಂದ ಹಡಗಿನ ಅಡಿಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಅನಂತರ ‘ಸುರ್ತಿಸ್’ ಎಂಬ ಉಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.
- Verse 18: ಚಂಡಮಾರುತ ನಮ್ಮನ್ನು ಒಂದೇಸಮನೆ ಹೊಯ್ದಾಡಿಸುತ್ತಿದ್ದುದರಿಂದ ಮಾರನೆಯ ದಿನ ಸರಕುಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.
- Verse 19: ಮೂರನೆಯ ದಿನ ಅವರು ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.
- Verse 20: ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಗಾಳಿ ತೀವ್ರವಾಗಿತ್ತು. ಕಟ್ಟಕಡೆಗೆ ನಾವು ಬದುಕುವ ಆಶೆಯನ್ನೇ ತೊರೆಯಬೇಕಾಯಿತು.
- Verse 21: ಬಹಳ ದಿನಗಳವರೆಗೆ ಅವರು ಊಟವಿಲ್ಲದೆ ಇದ್ದರು. ಆಗ ಪೌಲನು ಎದ್ದುನಿಂತು, “ಗೆಳೆಯರೇ, ನೀವು ನನ್ನ ಮಾತನ್ನು ಕೇಳಬೇಕಿತ್ತು. ಕ್ರೇಟ್ ದ್ವೀಪದಿಂದ ಮುಂದಕ್ಕೆ ಪ್ರಯಾಣ ಮಾಡಬಾರದಿತ್ತು. ಆಗ ಇಷ್ಟೆಲ್ಲಾ ಕಷ್ಟನಷ್ಟವನ್ನು ತಡೆಯಬಹುದಿತ್ತು.
- Verse 22: ಈಗಲಾದರೂ ಧೈರ್ಯದಿಂದಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಹಡಗು ನಾಶವಾಗುವುದೇ ಹೊರತು, ನಿಮ್ಮಲ್ಲಿ ಯಾರಿಗೂ ಪ್ರಾಣಹಾನಿ ಆಗಲಾರದು.
- Verse 23: ನಾನು ಯಾವ ದೇವರ ಭಕ್ತನಾಗಿದ್ದೇನೋ, ಯಾವ ದೇವರನ್ನು ಆರಾಧಿಸುತ್ತೇನೋ ಆ ದೇವರ ದೂತನು ನಿನ್ನೆ ರಾತ್ರಿ ದರ್ಶನವಿತ್ತನು:
- Verse 24: ‘ಪೌಲನೇ, ಭಯಪಡಬೇಡ. ನೀನು ಚಕ್ರವರ್ತಿಯ ಸಮ್ಮುಖದಲ್ಲಿ ನಿಲ್ಲಲೇಬೇಕಾಗಿದೆ; ಇಗೋ, ನಿನ್ನ ಸಂಗಡ ಪ್ರಯಾಣಮಾಡುವ ಎಲ್ಲರ ಪ್ರಾಣಗಳನ್ನು ದೇವರು ನಿನ್ನ ನಿಮಿತ್ತ ಉಳಿಸಿದ್ದಾರೆ,’ ಎಂದು ಅಭಯವಿತ್ತನು.
- Verse 25: ಆದುದರಿಂದ ಗೆಳೆಯರೇ, ಧೈರ್ಯದಿಂದಿರಿ. ನನಗೆ ದೇವರಲ್ಲಿ ವಿಶ್ವಾಸವಿದೆ; ನನಗೆ ತಿಳಿಸಿದಂತೆಯೇ ಎಲ್ಲವೂ ನಡೆದೇ ತೀರುವುದು.
- Verse 26: ನಾವೆಲ್ಲರೂ ಒಂದು ದ್ವೀಪವನ್ನು ತಲುಪಲಿದ್ದೇವೆ,” ಎಂದನು.
- Verse 27: ಅದು ಹದಿನಾಲ್ಕನೆಯ ರಾತ್ರಿ. ಬಿರುಗಾಳಿ ನಮ್ಮನ್ನು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡಿಸುತ್ತಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ನಾವೊಂದು ಭೂಮಿಯನ್ನು ಸಮೀಪಿಸುತ್ತಿರುವ ಹಾಗೆ ನಾವಿಕರಿಗೆ ಕಂಡುಬಂದಿತು.
- Verse 28: ನೀರಿನ ಆಳವನ್ನು ಪರೀಕ್ಷಿಸಿದಾಗ ಅದು ನಾಲ್ವತ್ತು ಮೀಟರು ಇರುವುದಾಗಿ ತಿಳಿಯಿತು. ಇನ್ನೂ ಸ್ವಲ್ಪ ಮುಂದಕ್ಕೆ ಸಾಗಿ ಮತ್ತೆ ಆಳ ನೋಡಿದಾಗ ಮೂವತ್ತು ಮೀಟರು ಎಂದು ತಿಳಿಯಿತು.
- Verse 29: ನಮ್ಮ ಹಡಗು ಕಲ್ಲುಬಂಡೆಗಳನ್ನು ತಾಕಬಹುದೆಂಬ ದಿಗಿಲು ಉಂಟಾಯಿತು. ಆದುದರಿಂದ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ ಬೆಳಗಾಗಲೆಂದು ಹಾರೈಸಿಕೊಂಡಿದ್ದರು.
- Verse 30: ಅನಂತರ ನಾವಿಕರು ಹಡಗಿನ ಮುಂಭಾಗದಲ್ಲಿ ಕೆಲವು ಲಂಗರುಗಳನ್ನು ಹಾಕುವಂತೆ ನಟಿಸಿ, ದೋಣಿಯನ್ನು ನೀರಿಗಿಳಿಸಿ, ಹಡಗನ್ನು ಬಿಟ್ಟು ಪಲಾಯನ ಮಾಡಬೇಕೆಂದಿದ್ದರು.
- Verse 31: ಆಗ ಪೌಲನು ಶತಾಧಿಪತಿಯನ್ನು ಮತ್ತು ಸೈನಿಕರನ್ನು ಉದ್ದೇಶಿಸಿ, “ಈ ನಾವಿಕರು ಹಡಗಿನಲ್ಲೇ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯದು,” ಎಂದು ಎಚ್ಚರಿಸಿದನು.
- Verse 32: ಕೂಡಲೇ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.
- Verse 33: “ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರನ್ನು ಕುರಿತು ಇಂತೆಂದನು: “ನೀವೆಲ್ಲರು ಚಿಂತೆಯಿಂದ ಹದಿನಾಲ್ಕು ದಿನಗಳವರೆಗೆ ಏನನ್ನೂ ತಿನ್ನದೆ ಇದ್ದೀರಿ;
- Verse 34: ನಿಮ್ಮ ಪ್ರಾಣ ಉಳಿಸಿಕೊಳ್ಳಲು ಸ್ವಲ್ಪ ಆಹಾರವನ್ನಾದರೂ ತೆಗೆದುಕೊಳ್ಳಿ; ನಿಮ್ಮ ತಲೆಗೂದಲೊಂದೂ ಕೊಂಕಾಗದು,” ಎಂದು ಹೇಳಿ ಊಟಮಾಡುವಂತೆ ಪ್ರೋತ್ಸಾಹಿಸಿದನು.
- Verse 35: ಹೀಗೆ ಹೇಳಿದ ಮೇಲೆ ಪೌಲನು ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಅದನ್ನು ಮುರಿದು ತಿನ್ನಲಾರಂಭಿಸಿದನು.
- Verse 36: ಆಗ ಅವರೆಲ್ಲರೂ ಧೈರ್ಯತಂದುಕೊಂಡು ಆಹಾರವನ್ನು ಸೇವಿಸಿದರು.
- Verse 37: ಹಡಗಿನಲ್ಲಿ ನಾವು ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು.
- Verse 38: ಪ್ರತಿಯೊಬ್ಬನೂ ಸಾಕಷ್ಟು ತಿಂದ ಮೇಲೆ ಗೋದಿಯನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದರು.
- Verse 39: ಬೆಳಗಾದ ಮೇಲೆ, ದಡವಿರುವ ಕೊಲ್ಲಿಯೊಂದು ನಾವಿಕರಿಗೆ ಕಾಣಿಸಿತು. ಅದು ಯಾವ ತೀರವೆಂದು ಗುರುತು ಹಚ್ಚಲು ಅವರಿಂದಾಗಲಿಲ್ಲ. ಆದರೂ ಹಡಗನ್ನು ಸಾಧ್ಯವಾದರೆ ಆ ದಡಕ್ಕೆ ಮುಟ್ಟಿಸಬೇಕೆಂದು ಯೋಚಿಸಿದರು.
- Verse 40: ಎಂದೇ ಹಗ್ಗಗಳನ್ನು ಕತ್ತರಿಸಿ ಲಂಗರುಗಳನ್ನು ಸಮುದ್ರದಲ್ಲೇ ಮುಳುಗಲೆಂದು ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಲಾದ ಹಗ್ಗಗಳನ್ನು ಬಿಚ್ಚಿದರು. ಅನಂತರ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ಚಲಿಸಬಿಟ್ಟರು.
- Verse 41: ಆದರೆ ಮಧ್ಯದಲ್ಲಿ ಹಡಗು ಮರಳು ದಿಬ್ಬಕ್ಕೆ ಢಿಕ್ಕಿಹೊಡೆದು ನೆಲ ಹತ್ತಿತ್ತು. ಹಡಗಿನ ಮುಂಭಾಗ ದಿಣ್ಣೆಗೆ ಸಿಲುಕಿ ಅಲ್ಲಾಡದೆ ನಿಂತಿತು; ಹಿಂಭಾಗ ಹುಚ್ಚು ಅಲೆಗಳ ಹೊಡೆತಕ್ಕೆ ಸಿಕ್ಕಿ ತುಂಡುತುಂಡಾಯಿತು.
- Verse 42: ಕೈದಿಗಳಲ್ಲಿ ಯಾರೂ ಈಜಿ ತಲೆತಪ್ಪಿಸಿಕೊಳ್ಳದಂತೆ ಅವರನ್ನು ಕೊಲ್ಲಬೇಕೆಂದು ಸೈನಿಕರು ಆಲೋಚನೆ ಮಾಡಿದರು.
- Verse 43: ಆದರೆ ಪೌಲನನ್ನು ಕಾಪಾಡಬೇಕೆಂದಿದ್ದ ಶತಾಧಿಪತಿ ಹಾಗೆ ಮಾಡುವುದನ್ನು ತಡೆದನು. ಪ್ರತಿಯಾಗಿ ಈಜು ಬಲ್ಲವರು ಮೊದಲು ಹಡಗಿನಿಂದ ಧುಮುಕಿ ಈಜಿಕೊಂಡು ಹೋಗಬೇಕು ಎಂತಲೂ,
- Verse 44: ಮಿಕ್ಕವರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ದಡಸೇರಬೇಕೆಂತಲೂ ಆಜ್ಞೆಮಾಡಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡವನ್ನು ಸೇರಿದರು.