ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರಕಟನೆ
22ನೇ ಅಧ್ಯಾಯ
- Verse 1: ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ,
- Verse 2: ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.
- Verse 3: ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖ ದರ್ಶನವಾಗುವುದು.
- Verse 4: ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.
- Verse 5: ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು.
- Verse 6: ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ.
- Verse 7: “ಯೇಸುಸ್ವಾಮಿ ನುಡಿಯುವುದನ್ನು ಕೇಳು : ‘ಇಗೋ ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.
- Verse 8: ಯೊವಾನ್ನನೆಂಬ ನಾನೇ ಇವುಗಳನ್ನೆಲ್ಲಾ ಕೇಳಿದವನು ಮತ್ತು ಕಂಡವನು. ಇವುಗಳನ್ನು ಕಂಡು ಕೇಳಿದಾಗ, ಇವುಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಆತನ ಪಾದಗಳಿಗೆ ಅಡ್ಡಬಿದ್ದೆ.
- Verse 9: ಆದರೆ ಆತನು, “ನೀನು ನನಗೆ ಅಡ್ಡಬೀಳಬೇಡ, ಪ್ರವಾದಿಗಳಾದ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಂಡು ನಡೆಯುವವರಿಗೂ ನಿನಗೂ ನಾನು ಸಹಸೇವಕನು ಮಾತ್ರ. ಆದ್ದರಿಂದ ನೀನು ದೇವರನ್ನು ಆರಾಧಿಸು,” ಎಂದು ತಿಳಿಸಿದನು.
- Verse 10: ಇದಲ್ಲದೆ ಆತನು ನನಗೆ, “ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆಹಾಕಿ ಮುಚ್ಚಿಡಬೇಡ; ಇವು ನೆರವೇರುವ ಕಾಲವು ಸಮೀಪಿಸಿತು.
- Verse 11: ಅಕ್ರಮಿಯು ತನ್ನ ಅಕ್ರಮವನ್ನು ಮುಂದುವರೆಸಲಿ. ಅಶುದ್ಧನು ತನ್ನ ಅಶುದ್ಧತೆಯಲ್ಲಿ ಮುಂದುವರೆಯಲಿ. ಸಜ್ಜನನು ತನ್ನ ಸನ್ನಡತೆಯಲ್ಲಿಯೇ ನಿರತನಾಗಿರಲಿ. ಪವಿತ್ರನು ತನ್ನ ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಳ್ಳಲಿ,” ಎಂದನು.
- Verse 12: “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಕೊಡಲಾಗುವ ಪ್ರತಿಫಲವು ನನ್ನ ಕೈಯಲ್ಲೇ ಇದೆ.
- Verse 13: ‘ಅ'ಕಾರವೂ ‘ಳ'ಕಾರವೂ ನಾನೇ ಆದಿಯೂ ಸಮಾಪ್ತಿಯೂ ನಾನೇ'. “
- Verse 14: “ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರವಾಗಿಟ್ಟುಕೊಂಡಿರುವವರು ಭಾಗ್ಯವಂತರು. ಜೀವವೃಕ್ಷದ ಫಲವನ್ನು ಸವಿಯುವ ಹಕ್ಕು ಅವರಿಗಿರುತ್ತದೆ. ಹೆಬ್ಬಾಗಿಲಿನ ಮೂಲಕ ಅವರು ಆ ನಗರವನ್ನು ಸೇರುವರು.
- Verse 15: ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.
- Verse 16: “ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ!
- Verse 17: ದೇವರಾತ್ಮ ಹಾಗು ಮದುವಣಗಿತ್ತಿ, ‘ಬಾ’ ಎಂದು ಆಹ್ವಾನಿಸುತ್ತಾರೆ. ಇದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನೂ ‘ಬಾ’ ಎಂದು ಹೇಳಲಿ. ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ಪಡೆಯಲಿ.”
- Verse 18: ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೂ ನಾನು ಕೊಡುವ ಎಚ್ಚರಿಕೆ ಇದು: “ಯಾವನಾದರೂ ಇವುಗಳಿಗೆ ಏನನ್ನಾದರೂ ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ವಿಪತ್ತುಗಳು ಬಂದೆರಗುವಂತೆ ಮಾಡುವರು.
- Verse 19: ಯಾವನಾದರೂ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳಲ್ಲಿ ಏನನ್ನಾದರೂ ತೆಗೆದುಹಾಕಿದರೆ, ಈ ಪುಸ್ತಕದಲ್ಲಿ ವಿವರಿಸಿರುವ ಜೀವವೃಕ್ಷದಲ್ಲಿಯೂ ಪವಿತ್ರನಗರದಲ್ಲಿಯೂ ಅವನಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.”
- Verse 20: ಇದಕ್ಕೆಲ್ಲಾ ಸಾಕ್ಷಿಯಾಗಿರುವಾತನು, “ಹೌದು, ನಾನು ಬೇಗನೆ ಬರುತ್ತೇನೆ,” ಎಂದು ಹೇಳುತ್ತಾನೆ. ಆಮೆನ್, ಪ್ರಭು ಯೇಸುವೇ, ಬನ್ನಿ.
- Verse 21: ಪ್ರಭು ಯೇಸುವಿನ ಕೃಪಾಶೀರ್ವಾದಗಳು ಎಲ್ಲರಲ್ಲೂ ಇರಲಿ !