P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
38ನೇ ಅಧ್ಯಾಯ
1 : ಕೋಪದಿಂದೆನ್ನ ಪ್ರಭು, ಬೈಯಬೇಡ I ರೋಷದಿಂದೆನ್ನನು ದಂಡಿಸಲು ಬೇಡ II
2 : ನಿನ್ನ ಬಾಣಗಳು ನಾಟಿವೆ ನನ್ನೊಳಗೆ I ನಿನ್ನ ಹಸ್ತವು ಎರಗಿದೆ ನನ್ನ ಮೇಲೆ II
3 : ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II
4 : ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳೆನ್ನನು I ಅಮುಕಿಬಿಟ್ಟಿವೆ ಹೊರಲಾರದ ಹೊರೆಯಂತೆನ್ನನು II
5 : ಕೀವು ಸೋರಿ ನಾರುತ್ತಿವೆ ನನ್ನ ಪಾಪದ ಗಾಯಗಳು I ಇದಕ್ಕೆಲ್ಲ ಕಾರಣವು ನನ್ನ ಮೂರ್ಖತನವು II
6 : ಬಾಗಿ ಕುಗ್ಗಿಹೋಗಿರುವೆ ಪ್ರಭು ಬಹಳವಾಗಿ I ದಿನವೆಲ್ಲ ಅಲೆಯುತ್ತಿರುವೆ ದುಃಖಭರಿತನಾಗಿ II
7 : ಉರಿಬಡಿದಂತಿದೆ ಎನ್ನ ಸೊಂಟಕೆ I ಆರೋಗ್ಯವಿಲ್ಲದಿದೆ ದೇಹಕೆ II
8 : ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ I ಹೃದಯವೇದನೆಯಿಂದ ನರಳಾಡುತ್ತಿರುವೆ II
9 : ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ I ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ II
10 : ಬಡಿದುಕೊಳ್ಳುತಿದೆ ಹೃದಯ, ಹುದುಗಿಹೋಗಿದೆ ಚೇತನ I ಮಬ್ಬಾಗಿ ಹೋಗಿದೆ ನನ್ನೆರಡು ನಯನಸಾಧನ II
11 : ನನ್ನ ಜಾಡ್ಯ ನೋಡಿ ದೂರ ಸರಿದರು ನೆಂಟರಿಷ್ಟರು I ಬಳಿಬಾರದೆ ಅಲ್ಲೇ ನಿಂತರು ಬಂಧು ಬಳಗದವರು II
12 : ಉರಲನೊಡ್ಡಿಹರು ನನ್ನ ಪ್ರಾಣಹಂತಕರು I ನಿರ್ಧರಿಸಿಹರು ವಿನಾಶವನ್ನು ಕೇಡು ಬಗೆವವರು I ಕುತಂತ್ರವ ಮಾಡುವರು ಸತತ ಮೋಸಗಾರರು II
13 : ನಾನಂತು ಕೇಳದಿದ್ದೆ ಕಿವುಡನಂತೆ I ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ II
14 : ಅಹುದಹುದು ಕಿವಿ ಕೇಳಿಸದವನಂತಿದ್ದೆ I ಪ್ರತ್ಯುತ್ತರ ಕೊಡಲಾಗದವನಂತಿದ್ದೆ II
15 : ನಿನಗಾಗಿ ಪ್ರಭು, ಕಾದಿರುವೆನಯ್ಯಾ I ನನಗಾಗಿ ನೀ ಉತ್ತರಿಸೋ, ದೇವಾ II
16 : ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ I ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ II
17 : ಇಗೋ, ನಾನೆಡವಿ ಬೀಳಲಿರುವೆ I ಆಪತ್ತಿಗಾಗಿ ಸಂಕಟಪಡುತ್ತಿರುವೆ II
18 : ನಾನಪರಾಧಿಯೆಂದು ನಿವೇದಿಸುವೆ I ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ II
19 : ಬಲಿಷ್ಠ ವೈರಿಗಳು ವಿರೋಧಿಸುತಿಹರು ನಿಷ್ಕಾರಣವಾಗಿ I ಶತ್ರುಗಳನೇಕರು ದ್ವೇಷಿಸುತಿಹರು ಅನ್ಯಾಯವಾಗಿ II
20 : ಎಸಗಿಹರು ಉಪಕಾರಕೆ ಪ್ರತಿಯಾಗಿ ಅಪಕಾರ I ಎದುರಿಸುತಿಹರೀಗ ನಾ ಹಿಡಿದಿರುವ ಸನ್ಮಾರ್ಗ II
21 : ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ I ದೇವಾ, ನನಗೆ ದೂರವಾಗಬೇಡಯ್ಯಾ II