P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
78ನೇ ಅಧ್ಯಾಯ
1 : ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ I ಗಮನಕೊಡಿ ನಾ ಹೇಳುವ ಮಾತುಗಳಿಗೆ II
2 : ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು I ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು II
3 : ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
4 : ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
5 : ನೇಮವಿತ್ತನು ಯಕೋಬವಂಶಕೆ I ಶಾಸನಕೊಟ್ಟನು ಇಸ್ರಯೇಲರಿಗೆ II ವಿಧಿಸಿದ ನಿಂತು ನಮ್ಮ ಪೂರ್ವಜನರಿಗೆ I “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” II
6 : “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
7 : ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
8 : ಮರೆಯರು ನನ್ನ ಮಹತ್ಕಾರ್ಯಗಳನು I ಇಡುವರು ನನ್ನಲ್ಲೇ ಭರವಸೆಯನು I ಕೈಗೊಳ್ಳುವರು ನನ್ನ ಆಜ್ಞೆಗಳನು II
9 : ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ I ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ II
10 : ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II
11 : ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು I ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು : II
12 : ಆ ಈಜಿಪ್ಟ್ ದೇಶದೊಳು, ಸೋನ್ ಬಯಲು ಸೀಮೆಯೊಳು I ಆತನೆಸಗಿದ ಪವಾಡಗಳು ಪೂರ್ವಜರ ಇದಿರೊಳು II
13 : ದಾಟಿಸಿದನವರನು ಸಮುದ್ರವನೆ ಭೇದಿಸಿ I ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ II
14 : ಹಗಲಲಿ ಕರೆದೊಯ್ದನು ಮೇಘದ ನೆರಳಲಿ I ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ II
15 : ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು ನೀರನು I ಆಳದ ಸರಸಿಯಿಂದೊ ಎಂಬಂತೆ ಅದನು ಕುಡಿಯಲಿತ್ತನು II
16 : ಬಂಡೆಗಳಿಂದಲೆ ಹೊರಡಿಸಿದನು ನೀರನು I ನದಿಗಳಂತೆಯೆ ಹರಿಯಮಾಡಿದನು ಅದನು II
17 : ಆದರೂ ಪಾಪಮಾಡುತ್ತಲೆ ಬಂದರು ದೇವರಿಗೆದುರಾಗಿ I ಪ್ರತಿಭಟಿಸಿದರು ಅಡವಿಯಲಿ ಪರಾತ್ಪರನಿಗೆ ವಿರುದ್ಧವಾಗಿ II
18 : ಕೋರಿದರು ತಮಗಿಷ್ಟವಾದ ಆಹಾರವನೇ I ಪರೀಕ್ಷಿಸಿದರು ಮನದಲಿ ಆ ದೇವರನೇ II
19 : ಜರೆವ ಮಾತಿನಲಿ ಆಡಿಕೊಂಡರಿಂತು : I “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” II
20 : “ಹೊಡೆದನು ಆಸರೆಯನು, ಚಿಮ್ಮಿತು ನೀರು, ಹರಿಯಿತು ನೆರೆಯು I ಆದರೆ ಕೊಡಬಲ್ಲನೆ ರೊಟ್ಟಿ, ಒದಗಿಸುವನೆ ಮಾಂಸವನು?” II
21 : ಇದನ್ನು ಕೇಳಿ ಸಿಡಿದೆದ್ದನು ಪ್ರಭು ರೋಷದಿಂದಲೆ I ಉಕ್ಕೇರಿತಾತನ ಕೋಪ ಇಸ್ರಯೇಲರ ಮೇಲೆ I ಕಾರಿದನು ಕೋಪಾಗ್ನಿಯನು ಯಕೋಬಕುಲದ ಮೇಲೆ II
22 : ಏಕೆನೆ, ಅವರಿಗಿರಲಿಲ್ಲ ವಿಶ್ವಾಸ ದೇವರಲಿ I ಇರಲಿಲ್ಲ ನಂಬಿಕೆ ಆತನಾ ಸಲಹುವ ಶಕ್ತಿಯಲಿ II
23 : ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ I ಅಂತರಿಕ್ಷದಾ ದ್ವಾರಗಳನು ತೆರೆದನಾತ II
24 : ಸುರಿಸಿದನು ಅವರ ಮೇಲೆ ಉಣಲು ಅನ್ನವನು I ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು II
25 : ನರರಿಗುಣಲುಕೊಟ್ಟನು ದೇವದೂತರ ಆಹಾರವನು I ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು II
26 : ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು I ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು II
27 : ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು I ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು II
28 : ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ I ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ II
29 : ಸಿಕ್ಕಿತು ಅವರಿಗೆ ತಾವು ಬಯಸಿದ್ದು I ತೃಪ್ತರಾದರು ಹೊಟ್ಟೆತುಂಬ ತಿಂದು II
30 : ಆದರೆ ಆ ಜನಕೆ ಆಶೆ ಕೈಗೂಡುವುದಕೆ ಮುನ್ನ I ಬಾಯಿಗೆ ಬಂದ ತುತ್ತು ಹೊಟ್ಟೆಗಿಳಿಯುವುದಕ್ಕೆ ಮುನ್ನ II
31 : ದೈವಕೋಪವೆದ್ದಿತು ಅವರಿಗೆ ವಿರುದ್ಧ I ಮಾಡಿತವರಲಿ ಕೊಬ್ಬಿದವರ ವಧ I ನೆಲಕುರುಳಿತು ಇಸ್ರಯೇಲ ಸಿರಿಜನ II
32 : ಇಷ್ಟಾದರೂ ಪಾಪಮಾಡುತ ಬಂದವರು ಪದೇ ಪದೇ I ದೇವರ ಅದ್ಭುತಕಾರ್ಯಗಳನು ತೊರೆದರು ನಂಬದೆ II
33 : ಆರಿಸಿದನು ಊದಿ ಅವರ ಬಾಳ ಹಣತೆಯನು I ಬರಮಾಡಿದನು ಅವರಿಗೆ ಭೀಕರ ಮರಣವನು II
34 : ಆತನನು ನೆನಸಿಕೊಂಡರವರು ವಧೆಯಾಗುವಾಗ I ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ II
35 : ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು I ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು II
36 : ಆದರೆ ಅವರ ನಾಲಿಗೆಯಾಡಿತು ಅಸತ್ಯ I ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ II
37 : ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II
38 : ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ I ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ II
39 : ನೆನೆದುಕೊಂಡನಾತ ಅವರು ಕೇವಲ ನರರೆಂದು I ತಿಳಿದುಕೊಂಡನು ಮರಳಿಬಾರದ ಉಸಿರವರೆಂದು II
40 : ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ I ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ II
41 : ಪದೇಪದೇ ಪರೀಕ್ಷಿಸಿದರು ದೇವರನು I ಕೆಣಕಿದರು ಇಸ್ರಯೇಲರ ಸದಮಲನನು II
42 : ಮರೆತೇಬಿಟ್ಟರು ಆತನ ಭುಜಬಲವನು I ವೈರಿಗಳಿಂದ ಬಿಡುಗಡೆಯಾದಾ ಸಮಯವನು II
43 : ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು I ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು II
44 : ಅಲ್ಲಿ ಆತ ರಕ್ತವಾಗಿಸಿದನು ನದಿನೀರನು I ಕುಡಿಯಲಾಗದಂತೆ ಮಾಡಿದನಾ ತೊರೆನೀರನು II
45 : ಕಳುಹಿಸಿದನು ವಿನಾಶಕರ ಹುಳುಗಳನು I ಹಾಳುಮಾಡುವ ವಿಷಮಂಡೂಕಗಳನು II
46 : ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ I ಕಷ್ಟದ ಫಲಗಳನು ಮಿಡತೆಗಳಿಗೆ II
47 : ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ I ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ II
48 : ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ I ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ II
49 : ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II
50 : ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ I ತುತ್ತಾಗಿಸಿದನು ದೇಹಗಳನು ಜಾಡ್ಯಕೆ I ಅಡ್ಡಿತರಲಿಲ್ಲ ಆತನು ಅವರ ಮರಣಕೆ II
51 : ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು I ಹಾಮನ ಮನೆತನದ ಮೊತ್ತಮೊದಲ ಸಂತಾನವನು II
52 : ತನ್ನ ಜನರನ್ನೋ ಹೊರತಂದನು ಕುರಿಮಂದೆಯಂತೆ I ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ II
53 : ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II
54 : ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II
55 : ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II
56 : ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು I ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು II
57 : ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ I ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ II
58 : ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ I ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ II
59 : ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II
60 : ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II
61 : ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ I ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ II
62 : ಗುರಿಮಾಡಿದನು ತನ್ನ ಪ್ರಜೆಯನು ಖಡ್ಗಕೆ I ಉಗ್ರವಾದನು ತನ್ನ ವಾರಸುದಾರರಿಗೆ II
63 : ಆಹುತಿಯಾದರವರ ಯುವಜನ ಅಗ್ನಿಗೆ I ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ II
64 : ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II
65 : ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ I ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠನಂತೆ II
66 : ಸದೆಬಡಿದನಾತ ತನ್ನ ಶತ್ರುಗಳನು I ನಿತ್ಯನಿಂದೆಗೆ ಈಡುಮಾಡಿದನವರನು II
67 : ವರ್ಜಿಸಿದನು ಜೋಸೆಫ್ ಕುಲದ ಗುಡಾರವನು I ತ್ಯಜಿಸಿದನು ಎಫ್ರಯಿಮ್ ಕುಲದಾ ಗುಡಾರವನು II
68 : ಆರಿಸಿಕೊಂಡನು ಯೆಹೂದರ ಗೋತ್ರವನು I ತನಗತಿಪ್ರಿಯವಾದ ಸಿಯೋನ್ ಗಿರಿಯನು II
69 : ನಿರ್ಮಿಸಿದನು ತನ್ನ ಮಂದಿರವನು ಪರ್ವತದಂತೆ I ಶಾಶ್ವತವಾಗಿ ತಾನು ಸ್ಥಾಪಿಸಿದ ಭೂಮಿಯಂತೆ II
70 : ಆರಿಸಿಕೊಂಡನು ದಾಸ ದಾವೀದನನು I ತೆಗೆದುಕೊಂಡನು ಕುರಿಹಟ್ಟಿಯಿಂದವನನು II
71 : ಕುರಿಮೇಯಿಸುವಾ ಕಸಬಿನಿಂದವನನು ಬಿಡಿಸಿದನು I ಸ್ವಪ್ರಜೆ ಯಕೋಬ್ಯರನು, ಸ್ವಜನ ಇಸ್ರಯೇಲರನು I ಪರಿಪಾಲಿಸುವಂತೆ ನೇಮಕ ಮಾಡಿದನು ಆತನನು II
72 : ದಾವೀದನು ಪೋಷಿಸಿದನವರನು ನೇರ ಮನದಿಂದ I ಪರಿಪಾಲಿಸಿದನವರನು ರಾಜ್ಯಾಧಿಕಾರ ಕುಶಲತೆಯಿಂದ II