வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
76ನೇ ಅಧ್ಯಾಯ
1 : ಸುಪ್ರಸಿದ್ಧನು ದೇವನು ಜುದೇಯನಾಡಿನಲಿ I ಸುಪ್ರಖ್ಯಾತ ಆತನ ನಾಮ ಇಸ್ರಯೇಲಿನಲಿ II
2 : ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II
3 : ಚೂರು ಚೂರು ಮಾಡಿಹನಲ್ಲಿ ಥಳಥಳಿಸುವ ಬಾಣಗಳನು I ಖಡ್ಗ, ಗುರಾಣಿ ಎಂಬೆಲ್ಲ ಯುದ್ಧಾಯುಧಗಳನು II
4 : ಹೇ ದೇವಾ, ನೀ ತೇಜೋಮಯನು I ಸ್ಥಿರಗಿರಿಗಳಿಗಿಂತ ಗಂಭೀರನು II
5 : ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II
6 : ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II
7 : ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II
8 : ನಿನ್ನ ನಿರ್ಣಯ ಸಗ್ಗದಿಂದ ಕೇಳಿಸಿದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II
9 : ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II
10 : ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ I ಅಳಿದುಳಿದಾ ಕೋಪ ನಿನ್ನ ನಡುಕಟ್ಟಿಗೆ ಲಾಯಕ II
11 : ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ ಹರಕೆ I ಸುತ್ತಣರೆಲ್ಲರು ಸಮರ್ಪಿಸಲಿ ಭಯಂಕರನಿಗೆ ಕಾಣಿಕೆ II