ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
5ನೇ ಅಧ್ಯಾಯ
- Verse 1: “ಈ ಕೆಳಕಂಡ ಸಂದರ್ಭಗಳಲ್ಲಿ ಪಾಪಪರಿಹಾರಕ ಬಲಿಗಳನ್ನು ಒಪ್ಪಿಸಬೇಕಾಗುತ್ತದೆ: ಒಬ್ಬನು ತಾನು ಕಂಡು ಕೇಳಿದ್ದಕ್ಕೆ ನ್ಯಾಯಸ್ಥಾನದಲ್ಲಿ ಸಾಕ್ಷಿಹೇಳಬೇಕೆಂದು ಅಧಿಕೃತವಾದ ಕರೆಯಿದ್ದರೂ ಸಾಕ್ಷಿ ಹೇಳದೆಹೋದರೆ ಅವನು ಪಾಪಕ್ಕೆ ಗುರಿಯಾಗುವನು.
- Verse 2: “ಒಬ್ಬನಿಗೆ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವಾಗಲಿ, ಬೇರೆ ಯಾವ ಅಶುದ್ಧ ವಸ್ತುವಾಗಲಿ ತಗಲಿದರೆ, ಅವನಿಗೆ ತಿಳಿಯದೆ ಹೋದರೂ, ಅವನು ಅಶುದ್ಧನೂ ದೋಷಿಯೂ ಆಗುತ್ತಾನೆ.
- Verse 3: “ಮನುಷ್ಯ ದೇಹದಿಂದುಂಟಾದ ಯಾವುದಾದರು ಒಂದು ಅಶುದ್ಧ ವಸ್ತು ತಗುಲಿದ್ದು, ಅವನಿಗೆ ತಿಳಿಯದೆ ಹೋದರೂ, ತಿಳಿದು ಬಂದಾಗ ಅವನು ದೋಷಿಯಾಗುತ್ತಾನೆ.
- Verse 4: “ಯಾರಾದರು ಆಲೋಚಿಸದೆ ಒಳಿತಿಗಾಗಲಿ, ಕೇಡಿಗಾಗಲಿ ಏನಾದರು ಆಣೆಯಿಟ್ಟುಕೊಂಡರೆ, ಅದು ಅವನಿಗೆ ತಿಳಿಯದೆಹೋದರೂ, ತಿಳಿದು ಬಂದಾಗ ಅವನು ಇದರಿಂದಲೂ ದೋಷಿಯಾಗುತ್ತಾನೆ.
- Verse 5: “ಈ ವಿಷಯಗಳಲ್ಲಿ ಯಾರಾದರು ದೋಷಿಯಾದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು.
- Verse 6: ಇಂಥ ದೋಷದ ಪ್ರಾಯಶ್ಚಿತ್ತಕ್ಕಾಗಿ ಒಂದು ಹೆಣ್ಣು ಕುರಿಯನ್ನಾಗಲಿ, ಒಂದು ಮೇಕೆಯನ್ನಾಗಲಿ ಸರ್ವೇಶ್ವರನಿಗೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
- Verse 7: “ಆಡು ಕುರಿಯನ್ನು ಕೊಡಲು ಅವನಿಂದ ಆಗದಿದ್ದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಮರಿ ಪಾರಿವಾಳಗಳನ್ನಾಗಲಿ ತೆಗೆದುಕೊಂಡು ಬಂದು ದಹನ ಬಲಿಯಾಗಿ ಒಂದನ್ನೂ ದೋಷಪರಿಹಾರಕ ಬಲಿಯಾಗಿ ಮತ್ತೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಲಿ.
- Verse 8: ಅವನು ಅವುಗಳನ್ನು ಯಾಜಕನ ಬಳಿಗೆ ತಂದಾಗ ಯಾಜಕನು ಮೊದಲು ದೋಷಪರಿಹಾರಾರ್ಥಕವಾದದ್ದನ್ನು ಸಮರ್ಪಿಸಬೇಕು. ಅವನು ಅದರ ಕುತ್ತಿಗೆ ಮುರಿಯಬೇಕು. ಅದರ ತಲೆಯನ್ನು ಪೂರಾ ತೆಗೆದುಬಿಡಬಾರದು.
- Verse 9: ಬಳಿಕ ದೋಷಪರಿಹಾರಾರ್ಥಕವಾದ ಆ ಹಕ್ಕಿಯ ರಕ್ತದಲ್ಲಿ ಸ್ವಲ್ಪವನ್ನು ಬಲಿಪೀಠದ ಬುಡದಲ್ಲಿ ಹಿಂಡಬೇಕು. ಅದು ದೋಷಪರಿಹಾರ ಬಲಿ.
- Verse 10: ಮತ್ತೊಂದನ್ನು ವಿಧಿಯಾನುಸಾರ ದಹನಬಲಿ ಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮೆ ದೊರಕುವುದು.
- Verse 11: “ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿ ಪಾರಿವಾಳಗಳನ್ನಾಗಲಿ ಕೊಡಲು ಅವನಿಂದ ಆಗದೆ ಹೋದಲ್ಲಿ ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿ ಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾದ್ದರಿಂದ ಅದರ ಮೇಲೆ ಎಣ್ಣೆ ಹೊಯ್ಯಕೂಡದು, ಸಾಂಬ್ರಾಣಿಯನ್ನು ಇಡಕೂಡದು.
- Verse 12: ಅವನು ಯಾಜಕನ ಬಳಿಗೆ ಅದನ್ನು ತಂದ ನಂತರ ಅದು ದೇವಾರ್ಪಿತವೆಂದು ಸೂಚಿಸುವುದಕ್ಕಾಗಿ ಯಾಜಕನು ಅದರಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಸರ್ವೇಶ್ವರನಿಗೆ ಸಮರ್ಪಿಸಿದ ಹೋಮದ್ರವ್ಯಗಳ ಮೇಲೆ ಬಲಿಪೀಠದಲ್ಲಿ ಹೋಮಮಾಡಬೇಕು. ಅದು ದೋಷಪರಿಹಾರಕ ಬಲಿ.
- Verse 13: ಮೇಲೆ ಕಂಡ ವಿಷಯಗಳಲ್ಲಿ ಯಾವ ವಿಧವಾಗಿ ಅವನು ದೋಷಿಯಾದರೂ ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರವನ್ನು ಮಾಡಿದ ನಂತರ ಅವನಿಗೆ ಕ್ಷಮೆ ದೊರಕುವುದು. ನೈವೇದ್ಯ ದ್ರವ್ಯಗಳಲ್ಲಿ ಮಿಕ್ಕದ್ದು ಹೇಗೆ ಯಾಜಕನಿಗೆ ಸೇರತಕ್ಕದ್ದೋ ಹಾಗೆಯೆ ಇದರಲ್ಲಿಯೂ ಮಿಕ್ಕದ್ದು ಯಾಜಕನಿಗೆ ಸೇರತಕ್ಕದ್ದು.”
- Verse 14: ಮೋಶೆಗೆ ಸರ್ವೇಶ್ವರ ಹೀಗೆಂದರು:
- Verse 15: “ಯಾರಾದರು ಸರ್ವೇಶ್ವರನಿಗೆ ಸಲ್ಲಿಸಬೇಕಾದ ಪವಿತ್ರವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ, ಅಂಥವರು ಆ ಅಪರಾಧಕ್ಕೆ ಪರಿಹಾರ ಮಾಡಬೇಕು; ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಎರಡು ಅಥವಾ ಹೆಚ್ಚು ನಾಣ್ಯ ಬೆಲೆ ಬಾಳುವುದೆಂದು ತೋರುವ ಕಳಂಕರಹಿತವಾದ ಒಂದು ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 16: ತಾವು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪರಿಹಾರಾರ್ಥವಾಗಿ ತಂದ ಟಗರಿನಿಂದ ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದಾಗ ಅವರಿಗೆ ಕ್ಷಮೆ ದೊರಕುವುದು.
- Verse 17: “ನಿಮ್ಮಲ್ಲಿ ಯಾರಾದರು ಸರ್ವೇಶ್ವರನು ವಿಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರು ಮಾಡಿ ದೋಷಕ್ಕೆ ಒಳಗಾದರೆ, ಅದು ಅವರಿಗೆ ತಿಳಿಯದೆ ಹೋದರೂ, ಅವರು ಅದರಿಂದ ಅಪರಾಧಿಯಾಗಿ ತಮ್ಮ ಪಾಪಫಲವನ್ನು ಅನುಭವಿಸಬೇಕು.
- Verse 18: ಅಂಥವರು ಪರಿಹಾರಕ್ಕಾಗಿ ಹಿಂಡಿನಿಂದ ಕಳಂಕರಹಿತವಾದ ಟಗರೊಂದನ್ನು ಅಥವಾ ಅದಕ್ಕೆ ಸರಿಸಮಾನವಾದುದನ್ನು ಯಾಜಕನ ಬಳಿಗೆ ತೆಗೆದುಕೊಂಡು ಬರಬೇಕು. ಅವರು ತಿಳಿಯದೆ ಮಾಡಿದ ತಪ್ಪನ್ನು ಪರಿಹರಿಸುವುದಕ್ಕಾಗಿ ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಬೇಕು. ಆಗ ಅವರಿಗೆ ಕ್ಷಮೆ ದೊರಕುವುದು.
- Verse 19: ಅವರು ಅಪರಾಧಿಗಳಾದುದರಿಂದ ಸರ್ವೇಶ್ವರನ ಸನ್ನಿಧಿಯಲ್ಲಿ ಈ ಪರಿಹಾರ ಬಲಿಯನ್ನು ಅರ್ಪಿಸಬೇಕು.