வேதாகமம்
ಹಳೆಯ ಒಡಂಬಡಿಕೆ
ನ್ಯಾಯಸ್ಥಾಪಕರು
19ನೇ ಅಧ್ಯಾಯ
- Verse 1: ಆ ಕಾಲದಲ್ಲಿ ಇಸ್ರಯೇಲರಿಗೆ ಅರಸನಿರಲಿಲ್ಲ. ಎಫ್ರಯಿಮ್ ಪರ್ವತ ಪ್ರದೇಶದ ಒಂದು ಮೂಲೆಯಲ್ಲಿ ಯಾರೋ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಯೆಹೂದದ ಬೆತ್ಲೆಹೇಮಿನವಳಾದ ಒಬ್ಬ ಸ್ತ್ರೀ ಅವನಿಗೆ ಉಪಪತ್ನಿಯಾಗಿದ್ದಳು.
- Verse 2: ಈಕೆ ಇವನನ್ನು ಬಿಟ್ಟು ವೇಶ್ಯೆಯಾಗಿ ಯೆಹೂದದ ಬೆತ್ಲೆಹೇಮಿನಲ್ಲಿದ್ದ ತನ್ನ ತೌರುಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳು ಇದ್ದಳು.
- Verse 3: ಅನಂತರ ಆಕೆಯ ಗಂಡನಾದ ಆ ಲೇವಿಯನು ಆಕೆಯನ್ನು ಪ್ರೀತಿಯಿಂದ ಮಾತಾಡಿಸಿ ಮತ್ತೆ ಮನೆಗೆ ಕರೆದು ತರಬೇಕೆಂದು ಒಬ್ಬ ಸೇವಕನನ್ನೂ ಎರಡು ಕತ್ತೆಗಳನ್ನೂ ತೆಗೆದುಕೊಂಡು ಅಲ್ಲಿಗೆ ಹೋದನು. ಆಕೆ ಅವನನ್ನು ತನ್ನ ತೌರುಮನೆಯಲ್ಲಿ ಸೇರಿಸಿಕೊಂಡಳು. ಆಕೆಯ ತಂದೆಯೂ ಅವನನ್ನು ನೋಡಿ ಸಂತೋಷಪಟ್ಟನು.
- Verse 4: ಆ ಸ್ತ್ರೀ ಹಾಗು ಅವನ ಮಾವ ಅವನನ್ನು ಮೂರು ದಿವಸ ಅಲ್ಲೇ ನಿಲ್ಲಿಸಿಕೊಂಡರು. ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು.
- Verse 5: ಅವರು ನಾಲ್ಕನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾದರು. ಆ ಸ್ತ್ರೀಯ ತಂದೆ ಅಳಿಯನಿಗೆ, “ಮೊದಲು ಸ್ವಲ್ಪ ಊಟಮಾಡಿ ಚೇತರಿಸಿಕೊ, ಆಮೇಲೆ ಹೋಗಬಹುದು,” ಎಂದು ಹೇಳಿದನು.
- Verse 6: ಅವರಿಬ್ಬರೂ ಕುಳಿತು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆ ಪುನಃ ಅವನಿಗೆ, “ದಯವಿಟ್ಟು ಈ ರಾತ್ರಿ ಇಲ್ಲೇ ಇದ್ದು ಸಂತೋಷಪಡು,” ಎಂದು ಹೇಳಿದರೂ ಅವನು ಹೊರಡಲು ಸಿದ್ಧನಾದನು.
- Verse 7: ಆದರೆ ಅವನ ಮಾವ ಬಹಳ ಬಲಾತ್ಕಾರ ಮಾಡಿದ್ದರಿಂದ ಆ ರಾತ್ರಿ ಅಲ್ಲೇ ತಂಗಿದರು.
- Verse 8: ಅವನು ಐದನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆ, “ದಯವಿಟ್ಟು ಇಳಿಹೊತ್ತಿನವರೆಗೆ ಇಲ್ಲೇ ಇದ್ದು ವಿಶ್ರಮಿಸಿಕೋ,” ಎಂದು ಅವನನ್ನು ಬೇಡಿಕೊಳ್ಳಲು ಅವನು ಮತ್ತೆ ಊಟಕ್ಕೆ ನಿಂತನು.
- Verse 9: ಅನಂತರ ಅವನು, ಅವನ ಉಪಪತ್ನಿ ಹಾಗು ಸೇವಕನು ಹೋಗುವುದಕ್ಕ ಸಿದ್ಧರಾಗಲು ಆ ಸ್ತ್ರೀಯ ತಂದೆ ಅಳಿಯನಿಗೆ, “ಹೊತ್ತುಮೀರಿತು; ಸಂಜೆ ಆಯಿತು. ದಯವಿಟ್ಟು ಈ ದಿನ ರಾತ್ರಿ ಇಲ್ಲೇ ಇರು; ನೋಡು, ಸಂಜೆಯಾಗಿಹೋಯಿತು. ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು,” ಎಂದು ಬೇಡಿಕೊಂಡನು.
- Verse 10: ಆದರೆ ಆ ಮನುಷ್ಯ ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ ಉಪಪತ್ನಿಯನ್ನು ಕರೆದುಕೊಂಡು ಹೊರಟನು.
- Verse 11: ಅವರು ಯೆಬೂಸಿಯರ ಊರಾದ ಜೆರುಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತು ಮುಳುಗುವ ಕಾಲವಾದುದರಿಂದ ಸೇವಕನು ದಣಿಗೆ, “ದಯವಿಟ್ಟು ಬನ್ನಿ, ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ ಅಲ್ಲಿ ರಾತ್ರಿಯನ್ನು ಕಳೆಯೋಣ,” ಎಂದನು.
- Verse 12: ಆಗ ಆ ದಣಿ, “ನಾವು ಇಸ್ರಯೇಲರಲ್ಲದ ಅನ್ಯರ ಪಟ್ಟಣದಲ್ಲಿ ತಂಗಬಾರದು; ಗಿಬೆಯಕ್ಕೆ ಹೋಗೋಣ,” ಎಂದನು.
- Verse 13: ಅವನು ಮತ್ತೆ ತನ್ನ ಆಳಿಗೆ, “ನಾವು ಬೇಗನೆ ಹೋಗಿ ಮುಂದಿರುವ ಗಿಬೆಯದಲ್ಲಾಗಲಿ, ದಾಮದಲ್ಲಾಗಲಿ ತಂಗೋಣ ಬಾ,” ಎಂದನು.
- Verse 14: ಹೀಗೆ ಅವರು ಮುಂದೆ ಸಾಗಿ ಬೆನ್ಯಾಮೀನ್ಯರ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯನು ಮುಳುಗಿದ್ದನು.
- Verse 15: ಆದುದರಿಂದ ಅವರು ತಂಗುವುದಕ್ಕಾಗಿ ಗಿಬೆಯಕ್ಕೆ ಹೋಗಿ, ಯಾರೂ ಮನೆಯಲ್ಲಿ ಸೇರಿಸಿಕೊಳ್ಳದೆ ಹೋದುದರಿಂದ ಸಂತೆ ಬೀದಿಯಲ್ಲೇ ಕುಳಿತುಕೊಂಡರು.
- Verse 16: ಅಷ್ಟರಲ್ಲಿ ಎಫ್ರಯಿಮ್ ಪರ್ವತಪ್ರದೇಶಕ್ಕೆ ಸೇರಿದವನು ಹಾಗು ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸಿಸುವವನು ಆಗಿದ್ದ ಯಾರೋ ಒಬ್ಬ ಮುದುಕ ಸಾಯಂಕಾಲವಾದ್ದರಿಂದ ಕೆಲಸವನ್ನು ಬಿಟ್ಟು ಹೊಲದಿಂದ ಮನೆಗೆ ಬರುತ್ತಿದ್ದನು.
- Verse 17: ಈ ಮುದುಕ, ಬೀದಿಯಲ್ಲಿ ಕುಳಿತಿದ್ದ ಆ ದಾರಿಗನನ್ನು ಕಂಡು, “ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
- Verse 18: ಅವನು ಆ ಮುದುಕನಿಗೆ, “ನಾವು ಯೆಹೂದದ ಬೆತ್ಲೆಹೇಮಿನಿಂದ ಎಫ್ರಯಿಮ್ ಪರ್ವತಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಅಲ್ಲಿಂದ ಯೆಹೂದದ ಬೆತ್ಲೆಹೇಮಿಗೆ ಹೋಗಿದ್ದೆ; ಈಗ ಮರಳಿ ಸರ್ವೇಶ್ವರನ ಮಂದಿರಕ್ಕೆ ಹೋಗುತ್ತಿದ್ದೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲಿಲ್ಲ.
- Verse 19: ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ. ನನಗೂ ನಿನ್ನ ಸೇವಕಿಗೂ ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ ದ್ರಾಕ್ಷಾರಸವೂ ಇರುತ್ತವೆ; ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ,” ಎಂದು ಹೇಳಿದನು.
- Verse 20: ಆಗ ಆ ಮುದುಕ, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ;
- Verse 21: ಈ ಬೀದಿಯಲ್ಲಿ ರಾತ್ರಿಯನ್ನು ಕಳೆಯಬೇಡ; ನನ್ನ ಮನೆಗೆ ಬಾ,” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಕತ್ತೆಗಳಿಗೆ ಮೇವುಕೊಟ್ಟನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿ ಅನ್ನಪಾನಗಳನ್ನು ತೆಗೆದುಕೊಂಡರು.
- Verse 22: ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ನೀಚ ಜನರು ಬಂದು, ಆ ಮನೆಯನ್ನು ಸುತ್ತಿಕೊಂಡು, ಕದಗಳನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ತೆಗೆದುಕೊಂಡು ಬಾ; ಅವನೊಡನೆ ನಮಗೆ ಸಂಗಮವಾಗಬೇಕು,” ಎಂದು ಕೂಗಿದರು.
- Verse 23: ಆಗ ಆ ಮುದುಕ ಹೊರಗೆ ಹೋಗಿ ಅವರಿಗೆ, “ಸಹೋದರರೇ, ಇಂಥ ದುಷ್ಟತನವನ್ನು ನಡೆಸಬೇಡಿ; ಅವನು ಆಶ್ರಯಕ್ಕಾಗಿ ನನ್ನ ಮನೆಗೆ ಬಂದಿದ್ದಾನೆ; ನೀವು ಇಂಥ ಹುಚ್ಚುತನ ಮಾಡಬೇಡಿ.
- Verse 24: ಇನ್ನೂ ಮದುವೆಯಾಗದಂಥ ನನ್ನ ಮಗಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ತರುತ್ತೇನೆ. ಅವರನ್ನು ಭಂಗಪಡಿಸಿರಿ; ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿ; ಈ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿ,” ಎಂದನು.
- Verse 25: ಆದರೆ ಅವರು ಆ ಮುದುಕನಿಗೆ ಕಿವಿಗೊಡಲೊಲ್ಲದೆ ಹೋದರು. ಆದುದರಿಂದ ಆ ಲೇವಿಯನು ತನ್ನ ಉಪಪತ್ನಿಯನ್ನು ಹೊರಗೆ ಅವರ ಮಧ್ಯಕ್ಕೆ ಕಳುಹಿಸಿಬಿಟ್ಟನು. ಅವರು ಆಕೆಯನ್ನು ರಾತ್ರಿಯೆಲ್ಲಾ ಬಹುಕ್ರೂರತನದಿಂದ ನಡಿಸಿ, ಕೋಳಿ ಕೂಗುವ ಹೊತ್ತಾಗಲು ಬಿಟ್ಟುಹೋದರು.
- Verse 26: ಆ ಸ್ತ್ರೀ ಸೂರ್ಯೋದಯಕ್ಕೆ ಮುಂಚೆಯೇ ಬಂದು ತನ್ನ ಯಜಮಾನನು ತಂಗಿದ್ದ ಮನೆಯ ಬಾಗಿಲಲ್ಲಿ ಬಿದ್ದಳು; ಬೆಳಗಾದರೂ ಏಳಲೇ ಇಲ್ಲ.
- Verse 27: ಆಕೆಯ ಪತಿ ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆದಾಗ ತನ್ನ ಉಪಪತ್ನಿ ಬಾಗಿಲ ಮುಂದೆ ಬಿದ್ದಿರುವುದನ್ನೂ ಆಕೆಯ ಕೈಗಳು ಹೊಸ್ತಲಿನ ಮೇಲಿರುವುದನ್ನೂ ಕಂಡನು.
- Verse 28: ಅವನು, “ಏಳು, ಹೋಗೋಣ,” ಎಂದು ಆಕೆಯನ್ನು ಕರೆಯಲು ಪ್ರತ್ಯುತ್ತರವೇ ಬರಲಿಲ್ಲ. ಆಗ ಅವನು ಆಕೆಯ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು ಸ್ವಸ್ಥಳಕ್ಕೆ ಹೋದನು.
- Verse 29: ಅವನು ಮನೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ ಅವುಗಳನ್ನು ಇಸ್ರಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು.
- Verse 30: ಅವುಗಳನ್ನು ಕಂಡವರೆಲ್ಲರು, “ಇಸ್ರಯೇಲರು ಈಜಿಪ್ಟನ್ನು ಬಿಟ್ಟು ಬಂದ ದಿವಸ ಮೊದಲ್ಗೊಂಡು ಈ ದಿವಸದವರೆಗೆ ಇಂಥ ಕೃತ್ಯ ನಡೆಯಲೂ ಇಲ್ಲ, ನಾವು ಅದನ್ನು ನೋಡಿಯೂ ಇಲ್ಲ. ಈ ಸಂಗತಿಯನ್ನು ಗಂಭೀರವಾಗಿ ವಿಚಾರಿಸತಕ್ಕದ್ದು,” ಎಂದುಕೊಂಡರು.