வேதாகமம்
ಹಳೆಯ ಒಡಂಬಡಿಕೆ
ಯೆಶಾಯ
37ನೇ ಅಧ್ಯಾಯ
1 : ಈ ವರದಿಯನ್ನು ಕೇಳಿದ ಹಿಜ್ಕೀಯನು ಕೂಡ ಬಟ್ಟೆಯನ್ನು ಹರಿದುಕೊಂಡು, ಗೋಣಿತಟ್ಟನ್ನು ಕಟ್ಟಿಕೊಂಡು, ಸರ್ವೇಶ್ವರ ಸ್ವಾಮಿಯ ಆಲಯಕ್ಕೆ ಹೋದನು.
2 : ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ : “ನೀವು ಗೋಣಿತಟ್ಟನ್ನು ಕಟ್ಟಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಹೋಗಿ
3 : ಅವನಿಗೆ ಹೀಗೆಂದು ಹೇಳಿ : ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ. ಹೆರಿಗೆಯ ಕಾಲ ಬಂದಿದೆ, ಆದರೆ ಹೆರುವುದಕ್ಕೆ ಶಕ್ತಿ ಸಾಲದು.
4 : ಅಸ್ಸೀರಿಯದ ಅರಸನಿಂದ ಬಂದಿರುವ ಸೇನಾಪತಿ ಆಡಿದ ಮಾತುಗಳನ್ನು ನಿನ್ನ ದೇವರಾದ ಸರ್ವೇಶ್ವರ ಕೇಳಿದ್ದಾರೆ. ಆ ಸೇನಾಪತಿ ತನ್ನ ಒಡೆಯನ ಹೆಸರಿನಲ್ಲಿ ಜೀವಸ್ವರೂಪರಾದ ಆ ದೇವರನ್ನು ದೂಷಿಸಿದ್ದಾನೆ. ಅವನಿಗೆ ತಕ್ಕ ದಂಡನೆಯಾಗಬೇಕು. ಹೀಗಿರಲು ಅಳಿದುಳಿದಿರುವ ಜನರಿಗಾಗಿ ದೇವರನ್ನು ನೀನು ಪ್ರಾರ್ಥನೆ ಮಾಡಬೇಕೆಂದು ಹಿಜ್ಕೀಯ ಕೇಳಿಕೊಂಡಿದ್ದಾನೆ,’ ಎಂದು ತಿಳಿಸಿ.”
5 : ಅರಸ ಹಿಜ್ಕೀಯನ ಸೇವಕರು ತನ್ನ ಬಳಿಗೆ ಬಂದು ವರದಿಮಾಡಿದ ಮೇಲೆ ಯೆಶಾಯನು,
6 : “ನೀವು ಹಿಂದಿರುಗಿ ಹೋಗಿ ನಿಮ್ಮ ರಾಜನಿಗೆ ಹೀಗೆಂದು ತಿಳಿಸಿರಿ: ‘ಇದು ಸರ್ವೇಶ್ವರನ ನುಡಿ: ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿ ಆಡಿದ ಮಾತುಗಳನ್ನು ಕೇಳಿದ್ದೇನೆ. ಅವುಗಳಿಗಾಗಿ ನೀನು ಹೆದರಬೇಕಾಗಿಲ್ಲ.
7 : ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು, ಅವನ ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೆ ಕತ್ತಿಗೆ ತುತ್ತಾಗುವಂತೆ ಮಾಡುವೆನು.”
8 : ಅಸ್ಸೀರಿಯದ ಸೇನಾಪತಿಯು ತನ್ನ ಅರಸನು ಲಾಕೀಷನ್ನು ಬಿಟ್ಟು ಲಿಬ್ನಕ್ಕೆ ಹೋಗಿ ಆ ರಾಜ್ಯದ ವಿರುದ್ಧ ಯುದ್ಧಮಾಡುತ್ತಿರುವುದಾಗಿ ಸಮಾಚಾರ ಪಡೆದನು. ಆದುದರಿಂದ ಅವನು ಅಲ್ಲಿಗೆ ತೆರಳಿದನು.
9 : ಅಷ್ಟರಲ್ಲೆ ಸುಡಾನಿನ ಅರಸ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸ ಹಿಜ್ಕೀಯನಿಗೆ,
10 : “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ಹೇಳಿ, ನಿನ್ನನ್ನು ಮೋಸಗೊಳಿಸಿದ್ದಾನೆ.
11 : ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು. ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?
12 : ನನ್ನ ತಂದೆ ತಾತಂದಿರು ಗೋಜಾನ್, ಹಾರನ್, ರೆಚೆಪ್ ಎಂಬ ನಗರಗಳ ಜನರನ್ನು ಮತ್ತು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನು ನಾಶಮಾಡಿದರು. ಆಗ ಅವರ ದೇವರುಗಳು ಅವರನ್ನು ರಕ್ಷಿಸಲಾಗಲಿಲ್ಲ.
13 : ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ್ ಮತ್ತು ಇವ್ವಾ ಎಂಬ ನಗರಗಳ ಅರಸರ ಗತಿ ಏನಾಯಿತು?” ಎಂದು ಪತ್ರ ಬರೆದು ದೂತರ ಸಮೇತ ಕಳುಹಿಸಿದನು.
14 : ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು,
15 : ಹೀಗೆಂದು ಪ್ರಾರ್ಥನೆ ಮಾಡಿದನು :
16 : “ಇಸ್ರಯೇಲಿನ ದೇವರೇ, ಸೇನಾಧೀಶ್ವರ ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ.
17 : ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ. ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕೋಸ್ಕರ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ.
18 : ಸರ್ವೇಶ್ವರಾ, ಅಸ್ಸೀರಿಯರ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ.
19 : ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ, ಆದುದರಿಂದಲೇ ಅವು ಅವರಿಂದ ಹಾಳಾದವು.
20 : ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ಸರ್ವೇಶ್ವರ ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಅಸ್ಸೀರಿಯರ ಕೈಯಿಂದ ಬಿಡಿಸಿರಿ.”
21 : ಆಗ ಆಮೋಚನ ಮಗ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ : “ಇಸ್ರಯೇಲಿನ ದೇವರಾದ ಸರ್ವೇಶ್ವರ ಸ್ವಾಮಿಯ ಈ ಮಾತುಗಳನ್ನು ಕೇಳು : ನೀನು ಅಸ್ಸೀರಿಯದ ಅರಸ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರ ಸ್ವಾಮಿಗೆ ಮುಟ್ಟಿವೆ. ಅವರು ಅವನಿಗೆ ವಿರುದ್ಧ ಹೀಗೆಂದಿದ್ದಾರೆ -
22 : “ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು, ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು.
23 : ನೀನು ನಿಂದಿಸಿ ದೂಷಿಸುತ್ತಿರುವುದು ಯಾರನ್ನು? ಕಿರಿಚಿ ಹೀಯಾಳಿಸುತ್ತಿರುವುದು ಯಾರನ್ನು? ಗರ್ವದಿಂದ ದುರುಗುಟ್ಟಿ ನೋಡಿದುದು ಯಾರನ್ನು? ಇಸ್ರಯೇಲರ ಪರಮಪಾವನ ಸ್ವಾಮಿಯನ್ನಲ್ಲವೇನು?
24 : ನೀನು ನಿನ್ನ ಸೇವಕರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ. ಅಲ್ಲದೆ, ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ : ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ. ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ, ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ. ಒಳಹೊಕ್ಕಿದ್ದೇನೆ ಅಲ್ಲಿನ ದೂರದ ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡುಮೇಡುಗಳನ್ನೇ
25 : ಪರನಾಡುಗಳಲ್ಲಿ ಬಾವಿತೋಡಿ ನೀರು ಕುಡಿದಿದ್ದೇನೆ, ನನ್ನ ಅಂಗಾಲಿನಿಂದಲೇ ಈಜಿಪ್ಟಿನ ನದಿಗಳನ್ನೆಲ್ಲಾ ಬತ್ತಿಸಿದ್ದೇನೆ.
26 : ಇದನ್ನೆಲ್ಲಾ ಬಹುಕಾಲದ ಹಿಂದೆ ಗೊತ್ತು ಮಾಡಿದವನು ನಾನೇ, ಪೂರ್ವಕಾಲದಲ್ಲಿ ನಿರ್ಣಯಿಸಿದುದನ್ನು ಈಗ ನೆರವೇರಿಸಿದ್ದೇನೆ. ಕೋಟೆ ನಗರಗಳನ್ನು ನೀನು ಹಾಳು ದಿಬ್ಬಗಳನ್ನಾಗಿಸಿದೆ, ಆದರೆ ಸಾಧ್ಯವಾಯಿತಿದು ನನ್ನಿಂದಲೇ, ನಿನಗಿದು ತಿಳಿಯದೆಹೋಯಿತೆ?
27 : ಬಲವಿಲ್ಲದವರಾದರು ಆ ನಗರವಾಸಿಗಳು ನನ್ನ ನಿಮಿತ್ತವೆ, ಸಮಾನರಾದರು ಹೊಲದ ಸಸಿಗೆ, ಎಳೆಗರಿಕೆಗೆ, ಮಾಳಿಗೆ ಮೇಲಿನ ಹುಲ್ಲಿಗೆ. ಬೆಳೆಯುವುದಕ್ಕೆ ಮೊದಲೆ ತುತ್ತಾದರು ಬಿರುಗಾಳಿಯ ಹೊಡೆತಕ್ಕೆ.
28 : ನನಗೆ ಗೊತ್ತಿದೆ ನೀ ಕೂರುವುದು ಹೋಗಿಬರುವುದು, ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು.
29 : ನನ್ನ ವಿರುದ್ಧ, ನಿನಗಿರುವ ಕ್ರೋಧ, ಗರ್ವ ತಿಳಿದಿದೆ ನನಗೆ, ಎಂದೇ ಹಾಕುವೆ ಮೂಗಿಗೆ ದಾರ, ಬಾಯಿಗೆ ಕಡಿವಾಣ. ನೀ ಬಂದ ದಾರಿಯಿಂದಲೇ ಅಟ್ಟುವೆ ನಿನ್ನನ್ನು ಹಿಂದಕ್ಕೆ’.”
30 : ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ, “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು : ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯಮಾಡಿ ಶೇಖರಿಸಿದ್ದನ್ನು ಅನುಭವಿಸುವಿರಿ.
31 : ಅಳಿದುಳಿದ ಯೆಹೂದ್ಯರು ನಾಡಿನಲ್ಲಿ ಬೇರೂರಿ ನೆಲೆಗೊಳ್ಳುವರು; ಬೆಳೆದು ಅಭಿವೃದ್ಧಿಯಾಗುವರು.
32 : ಆ ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು, ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು, ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು.
33 : “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು - ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.
34 : ಅವನು ಬಂದ ದಾರಿಯಿಂದಲೇ ಹಿಂದಿರುಗಿಹೋಗುವನು; ಈ ಪಟ್ಟಣಕ್ಕೆ ಕಾಲಿಡನು.
35 : ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು - ಎಂದಿದ್ದಾರೆ,” ಎಂದು ಹೇಳಿದನು.
36 : ಆಗ ಸರ್ವೇಶ್ವರ ಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು.
37 : ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು.
38 : ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬ ಅವನ ಇಬ್ಬರು ಮಕ್ಕಳು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ನಾಡಿಗೆ ಪಲಾಯನಗೈದರು. ಬಳಿಕ ಅವನ ಇನ್ನೊಬ್ಬ ಮಗ ಏಸರ್ ಹದ್ದೋನನು ಅರಸನಾದನು.