வேதாகமம்
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
2ನೇ ಅಧ್ಯಾಯ
1 : ಸರ್ವೇಶ್ವರ ಸ್ವಾಮಿ ಮೋಶೆ - ಆರೋನರಿಗೆ ಕೊಟ್ಟ ಆಜ್ಞೆ ಇದು:
2 : ಇಸ್ರಯೇಲರೆಲ್ಲರೂ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನೂ ತನ್ನ ತನ್ನ ಗೋತ್ರ ಧ್ವಜದ ಹತ್ತಿರ ತನ್ನ ತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು.
3 : “ಸೂರ್ಯೋದಯವಾಗುವ ದಿಕ್ಕಿನಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಅಮ್ಮಿನಾದಾಬನ ಮಗ ನಹಶೋನ.
4 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 74,600:
5 : ಅವರ ಸಮೀಪದಲ್ಲೇ ಇಸ್ಸಾಕಾರ್ ಕುಲದವರೂ ಜೆಬುಲೂನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಚೂವಾರನ ಮಗ ನೆತನೇಲ್;
6 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 54,400:
7 : ಜೆಬುಲೂನ್ಯರಿಗೆ ನಾಯಕ ಹೇಲೋನನ ಮಗ ಎಲೀಯಾಬ್,
8 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 57,400:
9 : ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,86,400: ಇವರು ಮುಂಭಾಗದಲ್ಲಿ ಹೊರಡಬೇಕು.
10 : “ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಈ ರೂಬೇನ್ ಕುಲದವರಿಗೆ ನಾಯಕ ಶೆದೇಯೂರನ ಮಗ ಎಲೀಚೂರ;
11 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 46,500:
12 : ಅವರ ಸಮೀಪದಲ್ಲೇ ಸಿಮೆಯೋನ್ ಕುಲದವರೂ ಗಾದ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಸಿಮೆಯೋನ್ ಕುಲದವರಿಗೆ ನಾಯಕ ಚೂರೀಷದ್ದೈಯನ ಮಗ ಶೆಲೂಮೀಯೇಲ;
13 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 59,300:
14 : ಗಾದ್ ಕುಲದವರಿಗೆ ನಾಯಕ ರೆಗೂವೇಲನ ಮಗ ಎಲ್ಯಾಸಾಫ;
15 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 45,650:
16 : ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ್ದವರೆಲ್ಲರ ಸಂಖ್ಯೆ - 1,51,450: ಇವರು ಎರಡನೆಯ ದಂಡಾಗಿ ಹೊರಡಬೇಕು.
17 : “ಅನಂತರ ಸೈನ್ಯಗಳ ನಟ್ಟನಡುವೆ ದೇವದರ್ಶನದ ಗುಡಾರ ಮತ್ತು ಲೇವಿಯರ ಪಾಳೆಯದವರು ಹೊರಡಬೇಕು. ಅವರು ಹೇಗೆ ಇಳಿದುಕೊಂಡಿದ್ದರೋ ಹಾಗೆಯೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು.
18 : ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಹೂದನ ಮಗ ಎಲೀಷಾಮಾ;
19 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 40,500:
20 : ಅವರ ಸಮೀಪದಲ್ಲೇ ಮನಸ್ಸೆ ಕುಲದವರು ಬೆನ್ಯಾಮೀನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಮನಸ್ಸೆ ಕುಲದವರಿಗೆ ನಾಯಕ ಪೆದಾಚೂರನ ಮಗ ಗಮ್ಲೀಯೆಲ್;
21 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -32,200:
22 : ಬೆನ್ಯಾಮೀನ್ ಕುಲದವರಿಗೆ ನಾಯಕ ಗಿದ್ಯೋನಿಯ ಮಗ ಅಬೀದಾನ್.
23 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -35,400:
24 : ಹೀಗೆ ಎಫ್ರಾಯೀಮರ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,08,100: ಇವರು ಮೂರನೆಯ ದಂಡಾಗಿ ಹೊರಡಬೇಕು.
25 : ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಷದ್ದೈಯನ ಮಗ ಅಹೀಗೆಜೆರ್;
26 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 62,700:
27 : ಅವರ ಸಮೀಪದಲ್ಲೇ ಆಶೇರ್ ಕುಲದವರು ಮತ್ತು ನಫ್ತಾಲಿ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆಶೇರ್ ಕುಲದವರಿಗೆ ನಾಯಕ ಒಕ್ರಾನನ ಮಗ ಪಗೀಯೇಲ್;
28 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 41,500:
29 : ನಫ್ತಾಲಿ ಕುಲದವರಿಗೆ ನಾಯಕ ಏನಾನನ ಮಗ ಅಹೀರ;
30 : ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 53,400:
31 : ಹೀಗೆ ದಾನ್ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,57,600: ಇವರು ಕಡೆಯ ದಂಡಾಗಿ ಹೊರಡಬೇಕು.
32 : ಇವರೇ ಇಸ್ರಯೇಲರಲ್ಲಿ ಗೋತ್ರಗೋತ್ರಗಳ ಪ್ರಕಾರ ಎಣಿಕೆಯಾದವರು. ಆ ದಂಡುಗಳಲ್ಲಿ ಸೈನಿಕರಾಗಿ ಎಣಿಕೆಯಾದ ಸೈನಿಕರ ಸಂಖ್ಯೆ - 6,03,500:
33 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇತರ ಇಸ್ರಯೇಲರ ಸಂಗಡ ಎಣಿಕೆಯಾಗಲಿಲ್ಲ.
34 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಹಾಗೆಯೆ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಅಂತೆಯೇ ಗೋತ್ರ ಕುಟುಂಬಗಳ ಪ್ರಕಾರ ಹೊರಡುತ್ತಿದ್ದರು.