ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಪರಮಗೀತೆ
4ನೇ ಅಧ್ಯಾಯ
- Verse 1: ನಲ್ಲ : ಆಹಾ! ನನ್ನ ಪ್ರಿಯಳೇ, ನೀನೆಷ್ಟು ರೂಪವತಿ! ಆಹಾ! ಎಷ್ಟು ಸುಂದರಿ! ಮುಸುಕಿನೊಳಗಿನ ಕಣ್ಣುಗಳು ಪಾರಿವಾಳಗಳು ನಿನ್ನ ತಲೆಗೂದಲಿನ ನರ್ತನವು ಗಿಲ್ಯಾದ್ ಗುಡ್ಡದಿಂದ ಇಳಿದುಬರುವ ಆಡುಮಂದೆಗೆ ಸಮಾನವು.
- Verse 2: ನಿನ್ನ ಹಲ್ಲುಗಳ ಹೊಳಪು ಉಣ್ಣೆಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪು. ಮೇಲೇರುತ್ತಿವೆ ಅವು ಜೋಡಿ ಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ.
- Verse 3: ನಿನ್ನ ತುಟಿ ನಯವಾದ ಕೆಂಪುಪಟ್ಟಿ ಬಿಚ್ಚಿದಾಗ ನೀನೆಷ್ಟು ಸುರೂಪಿಣಿ! ಮಸುಕಿನಲ್ಲಿನ ನಿನ್ನ ಕೆನ್ನೆ, ಹೋಳಾಗಿಸಿದ ದಾಳಿಂಬೆ!
- Verse 4: ನಿನ್ನ ಕೊರಳು ದಾವೀದನ ನುಣುಪಾದ ಗೋಪುರ ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳ ಸರ.
- Verse 5: ಹುಲ್ಲೆಯ ಅವಳಿಮರಿಗಳು ನಿನ್ನ ಸ್ತನಗಳೆರಡು ನೆಲದಾವರೆಯ ನಡುವೆ ಮೇಯುತ್ತಿರುವವು!
- Verse 6: ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಪರಿಮಳದ ಬೆಟ್ಟಕೆ ತೆರಳುವೆ ಧೂಪದ ಗುಡ್ಡದೊಳು ಅಡ್ಡಾಡುವೆ.
- Verse 7: ನನ್ನ ಪ್ರಿಯಳೇ, ಸರ್ವಾಂಗಸುಂದರಿಯೇ, ನಿನ್ನೊಳು ಯಾವ ಕಳಂಕವು ಇಲ್ಲದಿರುವೆ.
- Verse 8: ಬಾ, ವಧುವೆ, ಲೆಬನೋನಿನಿಂದ ಬಾ, ನನ್ನೊಡನೆ ಲೆಬನೋನಿನಿಂದ ಇಳಿದು ಬಾ ಅಮಾನದ ತುದಿಯಿಂದ ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.
- Verse 9: ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಹೃದಯವನ್ನು ನೀನು ಅಪಹರಿಸಿರುವೆ ಒಂದೇ ಕಿರುನೋಟದಿಂದ, ನನ್ನ ಹೃದಯವನ್ನು ವಶಪಡಿಸಿಕೊಂಡಿರುವೆ ನಿನ್ನ ಕಂಠಹಾರದ ಒಂದೇ ರತ್ನದಿಂದ.
- Verse 10: ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿ ಎಷ್ಟೋ ರಮ್ಯ ! ನಿನ್ನ ಪ್ರೇಮ ಮಧುಪಾನಕ್ಕಿಂತ ಎಷ್ಟೋ ಮಧುರ ! ನಿನ್ನ ತೈಲದ ಪರಿಮಳ ಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ !
- Verse 11: ನನ್ನ ವಧುವೇ, ಜೇನು ಸುರಿಯುತ್ತಿದೆ ನಿನ್ನ ತುಟಿಗಳಿಂದ ಹಾಲುಜೇನು ಬರುತ್ತಿದೆ ನಿನ್ನ ನಾಲಗೆಯಡಿಯಿಂದ ಲೆಬನೋನಿನ ಸುಗಂಧ ಸೂಸುತ್ತಿದೆ ನಿನ್ನ ಉಡುಪಿನಿಂದ.
- Verse 12: ನನ್ನ ಪ್ರಿಯಳು, ನನ್ನ ಮದಲಗಿತ್ತಿ ಸುಭದ್ರವಾದ ಉದ್ಯಾನವನ ಬೇಲಿಯೊಳಗಿನ ಬುಗ್ಗೆ ಮುಚ್ಚಿ ಮುದ್ರಿಸಿದ ಚಿಲುಮೆ.
- Verse 13: ನಿನ್ನ ಉದ್ಯಾನದಲ್ಲಿ ಬೆಳೆದಿವೆ ದಾಳಿಂಬೆಯಂಥ ಉತ್ತಮ ಫಲವೃಕ್ಷಗಳು ಜಟಮಾಂಸಿ, ಕರ್ಪೂರ, ಜಟಮಾಂಸಿ, ಕುಂಕುಮ ಕೇಸರಿಗಳು.
- Verse 14: ಬೆಳೆದಿವೆ ಪಟ್ಟೆಲವಂಗ ವಿವಿಧ ಸಾಂಬ್ರಾಣಿ ಗಿಡಗಳು ರಸಗಂಧ, ಅಗರುಗಳು ಸಕಲವಿಧ ಶ್ರೇಷ್ಠ ಸುಗಂಧ ಗಿಡಮೂಲಿಕೆಗಳು.
- Verse 15: ನಿನ್ನ ತೋಟಗಳಿಗೆ ಬೇಕಾದ ಬುಗ್ಗೆ, ಉಕ್ಕಿಬರುವ ಒರತೆ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ ನಲ್ಲೆ :
- Verse 16: ಉತ್ತರದ ಗಾಳಿಯೇ ಏಳು ದಕ್ಷಿಣದ ಗಾಳಿಯೇ ಬೀಸು ನನ್ನ ತೋಟದ ಮೇಲೆ ಬಿರುಸಾಗಿ ಬೀಸು ಸುವಾಸನೆಯನ್ನು ದೂರದೂರ ಪಸರಿಸು. ಬರಲಿ ಎನ್ನಿನಿಯನು ನನ್ನ ತೋಟಕೆ ಅತ್ಯುತ್ತಮ ಫಲಗಳನು ತಾನೇ ಭುಜಿಸಲಿಕೆ.