P. O. C ബൈബിള്
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
33ನೇ ಅಧ್ಯಾಯ
- Verse 1: “ಇಂತಿರಲು, ಯೋಬನೇ, ನನ್ನ ಮಾತುಗಳಿಗೆ ಕಿವಿಗೊಡು: ನಾನು ಹೇಳುವುದನ್ನೆಲ್ಲಾ ಗಮನವಿಟ್ಟು ಕೇಳು.
- Verse 2: ಇಗೋ, ಮಾತಾಡಲು ತೊಡಗಿದ್ದೇನೆ ನನ್ನ ನಾಲಿಗೆ ಬಾಯಲ್ಲಿ ತುಡುಕುತ್ತಿದೆ.
- Verse 3: ನನ್ನ ನುಡಿ ವ್ಯಕ್ತಪಡಿಸುತ್ತದೆ ಹೃದಯದ ಯಥಾರ್ಥತೆಯನು ನನ್ನ ತುಟಿ ನುಡಿಯುತ್ತದೆ ಸತ್ಯವೆಂದು ಅರಿತವುಗಳನು.
- Verse 4: ನಾನು ನಿರ್ಮಿತನಾಗಿದ್ದೇನೆ ದೇವರಾತ್ಮನಿಂದ ನನಗೆ ಜೀವ ಉಂಟಾಗಿದೆ ಸರ್ವಶಕ್ತನ ಶ್ವಾಸದಿಂದ.
- Verse 5: ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು ನನ್ನ ಎದುರಿನಲ್ಲೇ ನಿಂತು ವಾದಮಾಡು.
- Verse 6: ನೋಡು, ನಾನು ಕೂಡ ಜೇಡಿಮಣ್ಣಿನಿಂದ ರೂಪಿತನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇರುವವನು.
- Verse 7: ಆದ್ದರಿಂದ ನೀನು ನನಗೆ ಅಂಜಬೇಕಾಗಿಲ್ಲ ನನ್ನ ಕೈ ಬಲ ನಿನಗೆ ಹೊರೆಯಾಗಿರುವುದಿಲ್ಲ.
- Verse 8: ನನಗೆ ಸ್ಪಷ್ಟವಾಗಿ ಕೇಳಿಸುವಂತೆ ನೀನು ಮಾತಾಡಿರುವೆ ನನ್ನ ಕಿವಿಗೆ ಬಿದ್ದ ಈ ಮಾತುಗಳು ನಿನ್ನವೇ ಆಗಿವೆ.
- Verse 9: ‘ನಾನು ಪರಿಶುದ್ಧನು, ನಿರ್ದೋಷಿ ನಾನು ನಿರ್ಮಲನು, ನಿರಪರಾಧಿ.
- Verse 10: ‘ಆದರೂ ನನ್ನಲ್ಲಿ ದೇವರು ತಪ್ಪುಕಂಡುಹಿಡಿಯಬೇಕೆಂದಿದ್ದಾನೆ ನನ್ನನ್ನು ತನ್ನ ಶತ್ರುವೆಂದೇ ಭಾವಿಸಿದ್ದಾನೆ.
- Verse 11: ‘ನನ್ನ ಕಾಲುಗಳಿಗೆ ಕೋಳ ತೊಡಿಸಿದ್ದಾನೆ ನನ್ನ ಎಲ್ಲ ಹಾದಿಗಳನ್ನು ಕಂಡುಕೊಂಡಿದ್ದಾನೆ.’
- Verse 12: ಹೀಗೆ ನೀನು ನುಡಿದದ್ದು ಸರಿಯಲ್ಲವೆಂಬುದೇ ನನ್ನ ಉತ್ತರ; ದೇವರು ಮನುಷ್ಯರಿಗಿಂತ ದೊಡ್ಡವನು ಎಂಬುದೇ ಇದಕ್ಕೆ ಆಧಾರ.
- Verse 13: ಆತ ನಿನ್ನ ಯಾವ ಮಾತಿಗೂ ಉತ್ತರ ಕೊಡಲಿಲ್ಲ ಎಂದ ಮಾತ್ರಕ್ಕೆ ನೀನು ಆತನೊಡನೆ ವ್ಯಾಜ್ಯವಾಡುವುದು ಸರಿಯಲ್ಲ.
- Verse 14: ದೇವರು ಪದೇ ಪದೇ ಮಾತನಾಡಿದರೂ ನರಮಾನವನು ಗ್ರಹಿಸಿಕೊಳ್ಳುವುದಿಲ್ಲ.
- Verse 15: ಮಾನವನಿಗೆ ಗಾಢನಿದ್ರೆ ಬಂದಾಗ ಹಾಸಿಗೆ ಮೇಲೆ ಮಲಗಿರುವಾಗ ಸ್ವಪ್ನ ಬಿದ್ದಾಗ, ಕನಸು ಕಾಣುವಾಗ.
- Verse 16: ದೇವರು ಅವನ ಕಿವಿಗಳನ್ನು ತೆರೆಯುತ್ತಾನೆ ಉಪದೇಶಮಾಡಿ ಎಚ್ಚರಿಕೆ ನೀಡುತ್ತಾನೆ.
- Verse 17: ಹೀಗೆ ದುಷ್ಕಾರ್ಯದಿಂದ ಮನುಷ್ಯನನ್ನು ತಪ್ಪಿಸುತ್ತಾನೆ ಅವನ ಅಹಂಕಾರ ಗರ್ವವನು ಅಡಗಿಸುತ್ತಾನೆ.
- Verse 18: ಅವನ ಆತ್ಮ ಅಧೋಲೋಕಕ್ಕಿಳಿಯದಂತೆ ತಡೆಯುತ್ತಾನೆ ಅವನ ಪ್ರಾಣ ಕತ್ತಿಗೆ ತುತ್ತಾಗದಂತೆ ಕಾಪಾಡುತ್ತಾನೆ.
- Verse 19: ಇದಲ್ಲದೆ, ಮಾನವ ವ್ಯಾಧಿಯಿಂದ ಹಾಸಿಗೆ ಹಿಡಿದಿರುವಾಗ ಅವನನ್ನು ತಿದ್ದುತ್ತಾನೆ ಅವನ ದೇಹ ನರಳುತ್ತಿರುವಾಗ.
- Verse 20: ಅವನಿಗೆ ಆಹಾರವೂ ಬೇಸರವಾಗುವುದು ಮೃಷ್ಟಾನ್ನವೂ ಅಸಹ್ಯವಾಗುವುದು.
- Verse 21: ಅವನ ಮಾಂಸಖಂಡ ಕರಗಿಹೋಗುವುದು ಅವನ ಅಸ್ಥಿಪಂಜರ ಎದ್ದು ಕಾಣುವುದು.
- Verse 22: ಅವನ ಆತ್ಮ ಅಧೋಲೋಕವನ್ನು ಸಮೀಪಿಸುವುದು ಅವನ ಪ್ರಾಣ ಮೃತ್ಯುದೂತರಿಗೆ ಹತ್ತಿರವಾಗುವುದು.
- Verse 23: ಆದರೆ ಸಹಸ್ರ ದೂತರಲ್ಲೊಬ್ಬ ಮಧ್ಯಸ್ಥನಾಗಿ ಅವನ ಪಕ್ಕದಲ್ಲಿ ನಿಂತು ಅವನ ಕರ್ತವ್ಯವೇನೆಂದು ತಿಳಿಸಿ,
- Verse 24: ‘ಇವನನ್ನು ಕಾಪಾಡಿ; ಅಧೋಲೋಕಕ್ಕೆ ತಳ್ಳಬೇಡಿ, ಬಿಡುಗಡೆ ಬೇಕಾದ ಈಡು ಇದೋ ಇಲ್ಲಿ!’ ಎಂದು ಹೇಳಿದರೆ,
- Verse 25: ಅವನ ದೇಹ ಬಾಲ್ಯಕ್ಕಿಂತಲೂ ಕೋಮಲವಾಗುವುದು ಎಳೆತನದ ಚೈತನ್ಯವನ್ನು ಮತ್ತೆ ಅನುಭವಿಸುವನು.
- Verse 26: ಆಗ ಅವನು ದೇವರಿಗೆ ಪ್ರಾರ್ಥನೆ ಮಾಡುವನು ಆತನ ಒಲುಮೆಗೆ ಪಾತ್ರನಾಗುವನು. ಹರ್ಷೋದ್ಗಾರದಿಂದ ಆತನ ಸನ್ನಿಧಿಗೆ ಬರುವನು ಮತ್ತೆ ಆತನಿಂದ ಸತ್ಯವಂತ ಎನಿಸಿಕೊಳ್ಳುವನು.
- Verse 27: ಆಗ ಅವನು ಜನರ ಮುಂದೆ ಈ ಪರಿ ಹಾಡುವನು: ‘ಪಾಪ ಮಾಡಿದೆ; ಸನ್ಮಾರ್ಗ ಬಿಟ್ಟು ನಡೆದೆ ಆದರೂ ದಂಡಿಸಲಿಲ್ಲ ದೇವರು ನನ್ನ ಪಾಪಕ್ಕೆ ತಕ್ಕಂತೆ.
- Verse 28: ವಿಮೋಚಿಸಿದ್ದಾನೆ ನನ್ನ ಆತ್ಮ ಅಧೋಲೋಕ ಸೇರದಂತೆ ನನ್ನ ಜೀವವು ಜ್ಯೋತಿಯನು ಕಾಣುವಂತೆ.’
- Verse 29: ಇದನ್ನೆಲ್ಲ ನೀಡುವನು ಆ ದೇವರೇ ಇಮ್ಮಡಿ ಮುಮ್ಮಡಿಯಾಗಿ ನೀಡುವನು ಮನುಜನಿಗೆ.
- Verse 30: ಅವನ ಆತ್ಮವನು ಅಧೋಲೋಕದಿಂದ ಹಿಂದಿರುಗಿಸುವನು ಜೀವಲೋಕದ ಬೆಳಕನು ಅನುಭವಿಸುವಂತೆ ಮಾಡುವನು.
- Verse 31: ಯೋಬನೇ, ನನ್ನ ಮಾತಿಗೆ ಕಿವಿಗೊಡು, ಮೌನದಿಂದ ಕೇಳು, ನಾನೇ ಮಾತಾಡಲಿರುವೆ:
- Verse 32: ಏನಾದರೂ ಹೇಳಬೇಕೆಂದಿದ್ದರೆ ಹೇಳು, ಉತ್ತರಕೊಡು ನನಗೆ, ನೀನು ಸತ್ಯವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಬಯಕೆ.
- Verse 33: ಇಲ್ಲವಾದರೆ ಸುಮ್ಮನಿದ್ದು ಕಿವಿಗೊಡು ನಿನಗೆ ಬೋಧಿಸುವೆನು ಸುಜ್ಞಾನವನು.”