ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಉಪದೇಶಕ
2ನೇ ಅಧ್ಯಾಯ
- Verse 1: “ಬಾ ಮನವೇ, ಸಂತೋಷದ ಮೂಲಕ ನಿನ್ನನ್ನು ಪರೀಕ್ಷಿಸುವೆ; ಸುಖಭೋಗವನ್ನು ಅನುಭವಿಸು” ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಆದರೆ ಇದೂ ವ್ಯರ್ಥವೇ ಸರಿ.
- Verse 2: “ನಗೆ ಹುಚ್ಚುತನ, ಸುಖಭೋಗ ನಿಷ್ಪ್ರಯೋಜಕ” ಎಂದುಕೊಂಡೆ.
- Verse 3: ದೇಹಕ್ಕೆ ಮಧುಪಾನ ಮಾಡಿಸೋಣ; ಮೂರ್ಖತನದಲ್ಲಿ ತಲ್ಲೀನನಾಗೋಣ; ಜೀವಮಾನದ ಅಲ್ಪಕಾಲದಲ್ಲಿ ನರಮಾನವನಿಗೆ ಧರೆಯಲ್ಲಿ ಯಾವುದು ಹಿತ ಎಂದು ತಿಳಿದುಕೊಳ್ಳೋಣ” ಎಂದು ಜ್ಞಾನಾಶಕ್ತನಾದ ನಾನು ಮನಸ್ಸಿನಲ್ಲೇ ಅಂದುಕೊಂಡೆ.
- Verse 4: ಮಹತ್ಕಾರ್ಯಗಳನ್ನು ಎಸಗಿದೆ; ಮನೆಮಾರುಗಳನ್ನು ಕಟ್ಟಿಸಿಕೊಂಡೆ;
- Verse 5: ತೋಟ ಉದ್ಯಾನವನಗಳನ್ನು ಬೆಳೆಸಿದೆ. ಅವುಗಳಲ್ಲಿ ನಾನಾ ತರದ ಫಲವೃಕ್ಷಗಳನ್ನು ನಾಟಿಮಾಡಿಸಿದೆ.
- Verse 6: ಬೆಳೆಯುವ ಗಿಡತೋಟಗಳಿಗೆ ನೀರುಹಾಯಿಸಲು ಕೆರೆಕುಂಟೆಗಳನ್ನು ತೋಡಿಸಿದೆ.
- Verse 7: ಗಂಡು ಹೆಣ್ಣಾಳುಗಳನ್ನು ಕೊಂಡುಕೊಂಡೆ. ಇವರಿಗಾದ ಮಕ್ಕಳು ನನಗೆ ಹುಟ್ಟುಗುಲಾಮರಾದರು. ಇದಲ್ಲದೆ ಜೆರುಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ದನಕುರಿಗಳು ನನಗಾದವು; ನಾನು ಧನವಂತನಾದೆ.
- Verse 8: ಬೆಳ್ಳಿಬಂಗಾರಗಳನ್ನೂ ಅರಸರ ಹಾಗೂ ಸಾಮಂತರ ಕಪ್ಪಕಾಣಿಕೆಗಳನ್ನೂ ಶೇಖರಿಸಿಕೊಂಡೆ. ಗಾಯಕಗಾಯಕಿಯರೂ ಭೋಗವಿಲಾಸಕ್ಕಾಗಿ ಹಲವಾರು ಉಪಪತ್ನಿಯರೂ ನನಗಿದ್ದರು.
- Verse 9: ಹೀಗೆ ಜೆರುಸಲೇಮಿನಲ್ಲಿ ಹಿಂದೆ ಇದ್ದ ಎಲ್ಲರಿಗಿಂತಲೂ ಅಭಿವೃದ್ಧಿಹೊಂದಿ ಶ್ರೀಮಂತನಾದೆ.
- Verse 10: ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ಒಪ್ಪಿಸಿದೆ. ಹೃದಯ ಕೋರಿದ ಸಂತೋಷವನ್ನು ಅದಕ್ಕೆ ನಿರಾಕರಿಸಲಿಲ್ಲ. ನನ್ನ ಮನ ಎಲ್ಲಾ ಕಾರ್ಯಕಲಾಪಗಳಲ್ಲೂ ಉಲ್ಲಾಸಗೊಳ್ಳುತ್ತಿತ್ತು. ಇವೆಲ್ಲ ನನ್ನ ಪ್ರಯಾಸಕ್ಕೆ ದೊರೆತ ಫಲ.
- Verse 11: ಆಗ ನಾನೇ ಸ್ವತಃ ಮಾಡಿದ ಎಲ್ಲಾ ಕೆಲಸಕಾರ್ಯಗಳನ್ನೂ ಪಟ್ಟ ಎಲ್ಲ ಪ್ರಯಾಸವನ್ನೂ ಗಮನವಿಟ್ಟು ಪರಿಶೀಲಿಸಿದೆ. ಆದರೆ ಇಗೋ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಎಲ್ಲವೂ ವ್ಯರ್ಥ; ಲೋಕದಲ್ಲಿ ಲಾಭಕರವಾದುದು ಏನೂ ಕಾಣಲಿಲ್ಲ.
- Verse 12: ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ. ಜ್ಞಾನವೆಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳ ಬಗ್ಗೆ ಮತ್ತೆ ಚಿಂತಿಸಿದೆ.
- Verse 13: ಆಗ “ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ ಜ್ಞಾನ ಮೂಢತನಕ್ಕಿಂತ ಶ್ರೇಷ್ಠ” ಎಂದು ಗೋಚರವಾಯಿತು.
- Verse 14: “ಜ್ಞಾನಿಗೆ ಹಣೆಯಲ್ಲಿ ಕಣ್ಣು, ಮೂಢನೋ ಕತ್ತಲೆಯಲ್ಲಿ ನಡೆಯುತ್ತಾನೆ". ಆದರೆ ಇವರಿಬ್ಬರ ಗತಿ ಒಂದೇ ಎಂದು ಕಂಡುಬಂದಿತು.
- Verse 15: “ಮೂಢನಿಗೆ ಸಂಭವಿಸುವ ಗತಿ ನನಗೂ ಸಂಭವಿಸುವುದಾದರೆ ನನ್ನ ಹೆಚ್ಚಿನ ಜ್ಞಾನದಿಂದ ಪ್ರಯೋಜನವೇನು? ಇದೂ ವ್ಯರ್ಥವೇ!” ಎಂದುಕೊಂಡೆ.
- Verse 16: ಏಕೆಂದರೆ ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ನಿರಂತರವಾಗಿ ಮರೆತುಹೋಗುವರು. ಮುಂದಿನ ಕಾಲದವರು ಈಗಿನವರನ್ನೆಲ್ಲ ಮರೆತುಬಿಡುವರು ಎಂಬುದು ನಿಶ್ಚಯ. ನಿಸ್ಸಂದೇಹವಾಗಿ ಮೂಢನಂತೆ ಜ್ಞಾನಿಯು ಮೃತನಾಗುವನು.
- Verse 17: ಲೋಕದ ಆಗುಹೋಗುಗಳು ಕೇಡಿಗೆ ಈಡಾಗುವುವೆಂದು ನನಗೆ ಕಂಡುಬಂದಿತು. ಜೀವನವೇ ನೀರಸವೆಂದು ನನಗೆ ತೋಚಿತು; ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಸಮಸ್ತವೂ ವ್ಯರ್ಥವೇ ಸರಿ!
- Verse 18: ನನ್ನ ದುಡಿಮೆಯ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕಲ್ಲಾ ಎಂದು ಲೋಕದಲ್ಲಿ ನಾನು ಪಟ್ಟ ಪ್ರಯಾಸದ ಬಗ್ಗೆ ಬೇಸರಗೊಂಡೆ.
- Verse 19: ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಅವನು ಎಂಥವನಾದರೂ ನಾನು ಲೋಕದಲ್ಲಿ ಬುದ್ಧಿ ಖರ್ಚುಮಾಡಿ ಗಳಿಸಿದ ದುಡಿಮೆಯ ಫಲಕ್ಕೆಲ್ಲ ಅವನು ಒಡೆಯನಾಗುತ್ತಾನೆ. ಇದು ಸಹ ವ್ಯರ್ಥವೇ.
- Verse 20: ಹೀಗಿರಲು, ನಾನು ಲೋಕದಲ್ಲಿ ಕಷ್ಟಪಟ್ಟು ಗಳಿಸಿದ ದುಡಿಮೆಯ ಬಗ್ಗೆ ನಿರಾಶೆಗೊಂಡೆ.
- Verse 21: ಒಬ್ಬನು ಜ್ಞಾನದಿಂದಲೂ ತಿಳುವಳಿಕೆ ಇಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೇ?
- Verse 22: ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು?
- Verse 23: ಅವನ ಮನಸ್ಸಿಗೆ ನೆಮ್ಮದಿ ಇಲ್ಲ, ಇದು ಸಹ ವ್ಯರ್ಥವೇ ಸರಿ.
- Verse 24: ತಿಂದು, ಕುಡಿದು, ತನ್ನ ದುಡಿಮೆಯಲ್ಲೇ ಸುಖವನ್ನು ಅನುಭವಿಸುವುದಕ್ಕಿಂತ ಮೇಲಾದುದು ಮನುಷ್ಯನಿಗೆ ಯಾವುದು ಇಲ್ಲ. ಇದು ದೇವರಿಂದ ಆದುದು ಎಂದು ಮನಗಂಡೆ.
- Verse 25: ದೇವರಿಲ್ಲದೆ ಯಾರಿಗೆ ಊಟ ದೊರಕೀತು? ಅವರಿಲ್ಲದೆ ಸುಖಾನುಭವ ಯಾರಿಗೆ ದೊರಕೀತು?
- Verse 26: ದೇವರು ತಾವು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳುವಳಿಕೆಯನ್ನೂ, ಸುಖಸಂತೋಷವನ್ನೂ ದಯಪಾಲಿಸುತ್ತಾರಲ್ಲವೇ? ಪಾಪಿಗಾದರೋ, ಪ್ರಯೋಜನಕರವಾದುವುಗಳನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ವಿಧಿಸಿದ್ದಾರೆ. ಆದರೆ ಅವು ತಮಗೆ ಮೆಚ್ಚುಗೆಯಾದವರಿಗೆ ಸೇರಬೇಕಾದವು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.