P. O. C ബൈബിള്
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
15ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ:
- Verse 2: “ನೀನು ಇಸ್ರಯೇಲರಿಗೆ ಹೀಗೆಂದು ಹೇಳು: ‘ನಿಮ್ಮ ನಿವಾಸಕ್ಕಾಗಿ ನಾನು ಕೊಡುವ ನಾಡಿಗೆ ನೀವು ಬಂದು ಸೇರಿದ ನಂತರ
- Verse 3: ಸರ್ವೇಶ್ವರನಾದ ನನಗೆ ಸುವಾಸನೆಯ ಕಾಣಿಕೆಯಾಗಿ ದನಕರುಗಳಿಂದ ಬಲಿಯನ್ನು ಅರ್ಪಿಸುವಾಗ ಅದು ಹರಕೆಯ, ಕೃತಜ್ಞತೆಯ ಹಬ್ಬಾಚರಣೆಯ, ಶಾಂತಿಸಮಾಧಾನದ ಬಲಿಯಾಗಿರಲಿ ಅಥವಾ ದಹನಬಲಿಯಾಗಿರಲಿ.
- Verse 4: ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರೆಸಿದ ಮೂರು ಸೇರು ಗೋದಿಯ ಹಿಟ್ಟನ್ನು ತರಬೇಕು.
- Verse 5: ಮತ್ತು ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ದಹನಬಲಿದಾನವಾಗಿ ಇಲ್ಲವೆ ಸಮಾಧಾನ ಬಲಿಯಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನು ಸಮರ್ಪಿಸಬೇಕು.
- Verse 6: “ಸರ್ವೇಶ್ವರನಾದ ನನಗೆ ಸುವಾಸನೆ ಕಾಣಿಕೆಯಾಗಿ ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರೆಸಿದ ಆರುಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು;
- Verse 7: ಮತ್ತು ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನು ಸಮರ್ಪಿಸಬೇಕು.
- Verse 8: ‘ನೀವು ಅರ್ಪಿಸುವಂಥದ್ದು ಹೋರಿಯಾಗಿದ್ದರೆ, ಅದು ಸರ್ವಾಂಗಹೋಮವೇ ಆಗಿರಲಿ ಅಥವಾ ಹರಕೆಯ ಹಾಗೂ ಬೇರೆ ವಿಧವಾದ ಬಲಿಯೇ ಆಗಿರಲಿ,
- Verse 9: ಆಗ ನೀವು ‘ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರೆಸಿದ ಒಂಬತ್ತು ಸೇರು ಗೋದಿಯ ಹಿಟ್ಟನ್ನು ಅರ್ಪಿಸಬೇಕು.
- Verse 10: ಮತ್ತು ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನು ತಂದು ಸಮರ್ಪಿಸಬೇಕು. ಇದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗುವುದು.
- Verse 11: ‘ಕುರಿ, ಆಡು, ಟಗರು, ಹೋರಿ - ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ನೀವು ಈ ಮೇರೆಗೆ ನೈವೇದ್ಯಮಾಡಬೇಕು.
- Verse 12: ನೀವು ಸಮರ್ಪಿಸುವ ಬಲಿಪ್ರಾಣಿಗಳ ಸಂಖ್ಯಾನುಸಾರ ಒಂದೊಂದು ಪ್ರಾಣಿಯ ಸಮೇತ ಹೀಗೆಯೇ ಮಾಡಬೇಕು.
- Verse 13: ಸ್ವದೇಶದವರೆಲ್ಲರೂ ಸರ್ವೇಶ್ವರನಿಗೆ ಸುಗಂಧಬಲಿಯನ್ನು ಸಮರ್ಪಿಸುವಾಗ ಈ ರೀತಿಯಾಗಿಯೇ ಮಾಡಬೇಕು.
- Verse 14: ನಿಮ್ಮ ಮಧ್ಯೆ, ಇಲ್ಲವೆ ನಿಮ್ಮ ಸಂತತಿಯವರ ಮಧ್ಯೆ ವಾಸಿಸುವ ಅನ್ಯದೇಶೀಯನಾಗಲಿ ಪ್ರವಾಸಿಯಾಗಲಿ ಸುಗಂಧ ದಹನಬಲಿಯನ್ನು ಅರ್ಪಿಸಲಾಶಿಸಿದರೆ ನಿಮ್ಮಂತೆಯೇ ಅವನೂ ಮಾಡಬೇಕು.
- Verse 15: ಸರ್ವರಿಗೂ ಅಂದರೆ ನಿಮಗೂ ನಿಮ್ಮಲ್ಲಿರುವ ಅನ್ಯದೇಶೀಯರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ. ಸರ್ವೇಶ್ವರನ ಸನ್ನಿಧಿಯಲ್ಲಿ ನೀವು ಹೇಗೆ ಇರುವಿರೋ ಹಾಗೆಯೇ ಅನ್ಯದೇಶೀಯನೂ ಇರುವನು.
- Verse 16: ನಿಮಗೂ ನಿಮ್ಮಲ್ಲಿ ವಾಸಿಸುವ ವಿದೇಶೀಯನಿಗೂ ಒಂದೇ ವಿಧಿ, ಒಂದೇ ನಿಯಮ ಇರಬೇಕು,’ ಎಂದರು.
- Verse 17: ಸರ್ವೇಶ್ವರ ಮೋಶೆಗೆ:
- Verse 18: “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು: ‘ನಾನು ನಿಮ್ಮನ್ನು ಕರೆದುಕೊಂಡು ಹೋಗುವ ನಾಡಿಗೆ ನೀವು ಸೇರಿದ ನಂತರ
- Verse 19: ಆ ಭೂಮಿಯ ಬೆಳೆಯನ್ನು ಅನುಭವಿಸುವಾಗ ಅದರಲ್ಲಿ ಸ್ವಲ್ಪವನ್ನು ಸರ್ವೇಶ್ವರನಿಗೆ ಮೀಸಲಾಗಿಡಬೇಕು.
- Verse 20: ನೀವು ಕಣದಲ್ಲಿ ತುಳಿಸಿದ ದವಸದಲ್ಲಿ ಕಿಂಚಿತ್ತನ್ನು ಸರ್ವೇಶ್ವರನಿಗೆಂದು ಮೀಸಲಾಗಿಡುವಂತೆಯೆ ಆ ಕಣಕದಿಂದ ಮಾಡುವ ಮೊದಲ ರೊಟ್ಟಿಯನ್ನು ಮೀಸಲಾಗಿಡಬೇಕು.
- Verse 21: ನೀವು ಹಾಗು ನಿಮ್ಮ ಸಂತತಿಯವರು ಹೀಗೆ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಸರ್ವೇಶ್ವರನಿಗೆ ಮೀಸಲಾಗಿಡಬೇಕು.” ಎಂದರು.
- Verse 22: ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಕೊಟ್ಟ ಈ ಆಜ್ಞೆಗಳಲ್ಲಿ ಒಂದನ್ನು, ಒಬ್ಬನು ತಿಳಿಯದೆ ಮೀರಿ ನಡೆಯಲು ಸಾಧ್ಯ.
- Verse 23: ಅಂತೆಯೇ ಮುಂಬರುವ ಕಾಲದಲ್ಲಿ ಎಂದಾದರೂ ಒಂದು ಸಭೆ ಇವುಗಳಲ್ಲಿ ಒಂದನ್ನು ಮೀರಿ ದೋಷಿಯಾಗಲು ಸಾಧ್ಯ.
- Verse 24: ಆಗ ಅವರೆಲ್ಲರು ಒಟ್ಟಿಗೆ ಸೇರಿ ಸರ್ವೇಶ್ವರನಿಗೆ ಸುಗಂಧ ಕಾಣಿಕೆಯಾಗಿ ಹಾಗೂ ದಹನಬಲಿಯಾಗಿ ಒಂದು ಹೋರಿಯನ್ನು ಅರ್ಪಿಸಬೇಕು; ನೈವೇದ್ಯವಾಗಿ ನಿಯಮಿತ ಧಾನ್ಯದ್ರವ್ಯಗಳನ್ನು ಹಾಗೂ ಪಾನದ್ರವ್ಯಗಳನ್ನೂ ಅರ್ಪಿಸಬೇಕು; ಅಲ್ಲದೆ ದೋಷಪರಿಹಾರಕ ಬಲಿಯಾಗಿ ಒಂದು ಹೋತವನ್ನು ಸಮರ್ಪಿಸಬೇಕು.
- Verse 25: ಹೀಗೆ ಯಾಜಕನು ಇಸ್ರಯೇಲರ ಸರ್ವಸಮೂಹದವರ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಅವರಿಗೆ ಕ್ಷಮಾಪಣೆ ದೊರಕುವುದು. ಅವರು ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ ಮತ್ತು ಅವರು ಅದರ ಪರಿಹಾರಕ್ಕಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿಯನ್ನೂ ದೋಷಪರಿಹಾರಕಬಲಿಯನ್ನೂ ಅರ್ಪಿಸಿದ್ದರಿಂದ ಕ್ಷಮೆ ಲಭಿಸುವುದು.
- Verse 26: ಇಸ್ರಯೇಲರ ಸರ್ವಸಭೆಯವರಿಗೂ ಅವರ ಮಧ್ಯೆ ವಾಸಿಸುವ ವಿದೇಶೀಯರಿಗೂ ಅವರೆಲ್ಲರೂ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಲಭಿಸುವುದು.
- Verse 27: ಯಾವನಾದರೂ ಒಬ್ಬನು ವೈಯಕ್ತಿಕವಾಗಿ ತಿಳಿಯದೆ ತಪ್ಪು ಮಾಡಿದರೆ ಅಂಥವನು ದೋಷಪರಿಹಾರಕ ಬಲಿಗಾಗಿ ಒಂದು ವರ್ಷದ ಆಡನ್ನು ಸಮರ್ಪಿಸಬೇಕು.
- Verse 28: ತಿಳಿಯದೆ ತಪ್ಪುಮಾಡಿದ ಅಂಥವನ ಪರವಾಗಿ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ವಿಧಿಯನ್ನು ನೆರವೇರಿಸಿದರೆ ಅವನಿಗೆ ಕ್ಷಮೆ ದೊರಕುವುದು.
- Verse 29: ಈ ಬಗ್ಗೆ ಇಸ್ರಯೇಲರಲ್ಲಿರುವ ಸ್ವದೇಶೀಯರಿಗೂ ವಿದೇಶೀಯರಿಗೂ ಒಂದೇ ವಿಧಿಯಿರಬೇಕು.
- Verse 30: ಆದರೆ ಒಬ್ಬನು ಸ್ವದೇಶದವನೇ ಆಗಲಿ ವಿದೇಶದವನೇ ಆಗಲಿ ಮನಪೂರ್ವಕವಾಗಿ, ಬೇಕು ಬೇಕೆಂದು ಪಾಪವನ್ನು ಮಾಡಿದರೆ ಅಂಥವನನ್ನು ಕುಲದಿಂದ ತೆಗೆದುಹಾಕಬೇಕು. ಏಕೆಂದರೆ ಅವನು ಸರ್ವೇಶ್ವರನನ್ನು ತೃಣೀಕರಿಸಿದ್ದಾನೆ.
- Verse 31: ಸರ್ವೇಶ್ವರನ ಮಾತನ್ನು ತಾತ್ಸಾರ ಮಾಡಿ, ಅವರ ಆಜ್ಞೆಯನ್ನು ಉಲ್ಲಂಘಿಸಿದ್ದರಿಂದ ಅಂಥವನಿಗೆ ಬಹಿಷ್ಕಾರ ಹಾಕಲೇಬೇಕು. ಅವನು ತನ್ನ ಪಾಪದ ದುಷ್ಪಲವನ್ನು ಅನುಭವಿಸುವಂತಾಗಬೇಕು.
- Verse 32: ಇಸ್ರಯೇಲರು ಮರುಭೂಮಿಯಲ್ಲಿದ್ದಾಗ ಒಬ್ಬನು ‘ಸಬ್ಬತ್’ ದಿನದಂದು ಸೌದೆ ಕೂಡಿಸುವುದನ್ನು ಕಂಡರು.
- Verse 33: ಅವನನ್ನು ಮೋಶೆ, ಆರೋನ್ ಹಾಗೂ ಸರ್ವಸಮುದಾಯದ ಬಳಿಗೆ ಹಿಡಿದುಕೊಂಡು ಬಂದರು.
- Verse 34: ಅಂಥವನಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ಇದುವರೆಗೂ ಯಾವ ನಿಯಮವೂ ಇರಲಿಲ್ಲ. ಆದುದರಿಂದ ಅವನನ್ನು ಕಾವಲಿನಲ್ಲಿಟ್ಟರು.
- Verse 35: ಆಗ ಸರ್ವೇಶ್ವರ ಮೋಶೆಗೆ, “ಆ ಮನುಷ್ಯನಿಗೆ ಮರಣ ಶಿಕ್ಷೆಯಾಗಬೇಕು. ಜನಸಮೂಹದವರೆಲ್ಲ ಅವನನ್ನು ಪಾಳೆಯದ ಹೊರಗೆ ಕಲ್ಲೆಸೆದು ಕೊಲ್ಲಬೇಕು,” ಎಂದು ಆಜ್ಞಾಪಿಸಿದರು.
- Verse 36: ಅಂತೆಯೇ ಜನಸಮೂಹದವರೆಲ್ಲರು ಆ ವ್ಯಕ್ತಿಯನ್ನು ಪಾಳೆಯದ ಹೊರಗೆ ಎಳೆದುಕೊಂಡು ಹೋಗಿ ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಕಲ್ಲೆಸೆದು ಕೊಂದರು.
- Verse 37: ಸರ್ವೇಶ್ವರ ಮೋಶೆಗೆ ಹೀಗೆಂದರು:
- Verse 38: “ಇಸ್ರಯೇಲರು ಮತ್ತು ಅವರ ಸಂತತಿಯವರು ತಮ್ಮ ಬಟ್ಟೆಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕೆಂದು ಆಜ್ಞಾಪಿಸು.
- Verse 39: ಆ ಗೊಂಡೆಗಳ ಪ್ರಯೋಜನವಿದು - ನೀವು ಅವುಗಳನ್ನು ನೋಡುವಾಗ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅವುಗಳನ್ನು ಪಾಲಿಸಬೇಕು. ಹಿಂದೆ ನೀವು ನನಗೆ ದ್ರೋಹಿಗಳಾಗಿ ನಿಮ್ಮ ಮನಸ್ಸಿಗೆ ಬಂದಂತೆ, ಕಣ್ಣಿಗೆ ತೋರಿದಂತೆ ದಾರಿತಪ್ಪಿ ನಡೆದಿರಿ.
- Verse 40: ಈಗ ನನ್ನ ಆಜ್ಞೆಗಳನ್ನೇ ಗಮನದಲ್ಲಿಟ್ಟು ಅವುಗಳನ್ನು ಅನುಸರಿಸಬೇಕು. ಹೀಗೆ ನಿಮ್ಮ ದೇವರಿಗೇ ಪ್ರತಿಷ್ಠಿತರಾಗಿರಬೇಕು.
- Verse 41: ನಿಮ್ಮ ದೇವರಾಗಬೇಕೆಂಬ ಉದ್ದೇಶದಿಂದಲೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ ಸರ್ವೇಶ್ವರನಾದ ದೇವರು ನಾನು. ನಾನೇ ನಿಮ್ಮ ದೇವರಾದ ಸರ್ವೇಶ್ವರ.‘