ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ನೆಹೆಮೀಯ
3ನೇ ಅಧ್ಯಾಯ
- Verse 1: ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಬುರುಜಿನವರೆಗೆ ಗೋಡೆಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.
- Verse 2: ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಜೆರಿಕೋವಿನವರು; ಆಚೆಗೆ ಇಮ್ರಿಯ ಮಗನಾದ ಜಕ್ಕೂರನು.
- Verse 3: ಮೀನುಬಾಗಿಲನ್ನು ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದರು.
- Verse 4: ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾನನ ಮಗ ಚಾದೋಕ್; ಮುಂದಕ್ಕೆ ತೆಕೋವದವರು.
- Verse 5: ತೆಕೋವದ ಶ್ರೀಮಂತರಾದರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.
- Verse 6: ಹಳೆಯದು ಎಂಬ ಬಾಗಿಲನ್ನು ದುರಸ್ತಿಮಾಡಿದವರು ಪಾಸೇಹನ ಮಗ ಯೋಯಾದನು ಹಾಗು ಬೆಸೋದ್ಯನ ಮಗ ಮೆಷುಲ್ಲಾಮನು. ಇವರು ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದರು.
- Verse 7: ಅಲ್ಲಿಂದ ನದಿಯಾಚೆಯ ರಾಜ್ಯಪಾಲನ ನ್ಯಾಯಸ್ಥಾನದವರೆಗೆ ಗಿಬ್ಯೋನಿನವನಾದ ಮೆಲೆಟ್ಯ, ಮೇರೋನೋತಿನವನಾದ ಯಾದೋನ್ ಇವರೂ ಗಿಬ್ಯೋನ್ ಮತ್ತು ಮಿಚ್ಚ ಊರುಗಳವರು ದುರಸ್ತಿಮಾಡಿದರು.
- Verse 8: ಇವರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲಗೋಡೆಯೆನಿಸಿಕೊಳ್ಳುವ ಗೋಡೆಯ ಆಚೆಗಿರುವ ಜೆರುಸಲೇಮಿನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ.
- Verse 9: ಇದರ ಆಚೆಗೆ ಜೆರುಸಲೇಮಿನ ಅರೆನಾಡೊಡೆಯನೂ ಹೂರನ ಮಗನೂ ಆದ ರೆಫಾಯ.
- Verse 10: ಇವನ ಮುಂದಕ್ಕೆ ಹರೂಮಫನ ಮಗ ಯೆದಾಯ; ಇವನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ದುರಸ್ತಿಮಾಡಿದನು. ಇವನ ಆಚೆಗೆ ಹಷಬ್ನೇಯನ ಮಗ ಹಟ್ಟೂಷ್,
- Verse 11: ಗೋಡೆಯ ಇನ್ನೊಂದು ಭಾಗವನ್ನೂ ಒಲೆಬುರುಜನ್ನೂ ಸರಿಪಡಿಸಿದವರು ಹಾರೀಮನ ಮಗ ಮಲ್ಕೀಯನು ಹಾಗು ಪಹತ್ ಮೋವಾಬ್ಯನಾದ ಹಷೂಬನು.
- Verse 12: ಇವನ ಸಮೀಪದಲ್ಲಿ ಗೋಡೆಯನ್ನು ದುರಸ್ತುಮಾಡಿದವರು ಜೆರುಸಲೇಮಿನ ಅರೆನಾಡೊಡೆಯನೂ ಹಲ್ಲೊಹೇಷನ ಮಗನೂ ಆದ ಶಲ್ಲೂಮನು ಹಾಗು ಅವನ ಕುಮಾರಿಯರು.
- Verse 13: ಕಣಿವೆಯ ಬಾಗಿಲನ್ನು ಸರಿಪಡಿಸಿದವರು ಹಾನೂನನು ಹಾಗು ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿ ಅಲ್ಲಿಂದ ತಿಪ್ಪೆಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
- Verse 14: ತಿಪ್ಪೆಬಾಗಿಲನ್ನು ಸರಿಪಡಿಸಿದವನು ಬೇತಹಕ್ಕೆರೆಮಿನ ನಾಡೊಡೆಯನೂ ರೇಕಾಬನ ಮಗನೂ ಆದ ಮಲ್ಕೀಯನು; ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿದನು.
- Verse 15: ಬುಗ್ಗೆಬಾಗಿಲನ್ನು ದುರಸ್ತಿಪಡಿಸಿದವನು ಮಿಚ್ಪದ ನಾಡೊಡೆಯನೂ ಕೊಲ್ಹೋಜೆಯ ಮಗನೂ ಆದ ಶಲ್ಲೂನ್; ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ, ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿ ದಾವೀದನಗರದಿಂದಿಳಿದು ಬರುವ ಸೋಪಾನಗಳ ಈಚೆ, ಅರಸನ ತೋಟದ ಬಳಿಯಲ್ಲಿರುವ ಶಿಲೋವ ಕೊಳದ ಗೋಡೆಯನ್ನು ಕಟ್ಟಿದನು.
- Verse 16: ಇವನ ಆಚೆ ಅಂದರೆ, ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ, ಇವುಗಳವರೆಗೂ ದುರಸ್ತುಮಾಡಿದವನು ಬೇತ್ಚೂರಿನ ಅರೆನಾಡೊಡೆಯನೂ ಅಜ್ಬೂಕನ ಮಗನೂ ಆದ ನೆಹೆಮೀಯನು.
- Verse 17: ಇವನ ಆಚೆ ದುರಸ್ತಿಕಾರ್ಯವನ್ನು ಕೈಗೊಂಡವರು ಲೇವಿಯರು. ಅವರಲ್ಲಿ ಮೊದಲು ಬಾನಿಯ ಮಗನಾದ ರೆಹೂಮ್, ಇವನ ಸಮೀಪದಲ್ಲಿ ತನ್ನ ನಾಡಿನವರೊಡನೆ ಕಟ್ಟುತ್ತಿದ್ದ ಕೆಯೀಲದ ಅರೆನಾಡೊಡೆಯನಾದ ಹಷಬ್ಯ ಇವರು.
- Verse 18: ಇವರ ಆಚೆ, ಇವರ ಬಂಧುಗಳಲ್ಲಿ ಕೆಯೀಲದ ಎರಡನೆಯ ಅರೆನಾಡೊಡೆಯನೂ ಹೇನಾದಾದನ ಮಗನೂ ಆದ ಬಲ್ವೈ.
- Verse 19: ಇವನ ಸಮೀಪದಲ್ಲಿ ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಗೋಡೆಯ ಮೂಲೆಯಲ್ಲಿರುವ ಆಯುಧಶಾಲೆಗೆ ಹೋಗುವ ಮೆಟ್ಟಲುಗಳ ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ ಯೇಷೂವನ ಮಗನೂ ಆದ ಏಜೆರನು ಸರಿಪಡಿಸಿದನು.
- Verse 20: ಇವನ ಆಚೆ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ, ಜಕ್ಕೈಯ ಮಗನಾದ ಬಾರೂಕನು ಆಸಕ್ತಿ ಇಂದ ಭದ್ರಪಡಿಸಿದನು.
- Verse 21: ಇವನ ಆಚೆ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ, ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ, ಹಕ್ಕೋಚನ ಮೊಮ್ಮಗನೂ ಊರೀಯನ ಮಗನೂ ಆದ ಮೆರೇಮೋತನು ದುರಸ್ತಿಮಾಡಿಸಿದನು.
- Verse 22: ಮುಂದಿನ ಭಾಗವನ್ನು ಕಟ್ಟಿದವರು ಜೋರ್ಡನ್ ನದಿಯ ಕಣಿವೆಯಲ್ಲಿ ವಾಸಿಸುತ್ತಿದ್ದ ಯಾಜಕರು.
- Verse 23: ಇವರ ಆಚೆ, ಬೆನ್ಯಾಮೀನ್ ಹಷೂಬರು; ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ದುರಸ್ತಿಮಾಡಿಸಿದರು. ಇವರ ಆಚೆ, ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ: ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಸರಿಪಡಿಸಿದನು.
- Verse 24: ಇವನ ಆಚೆ, ಅಜರ್ಯನ ಮನೆಯಿಂದ ಮೂಲೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ದುರಸ್ತಿಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್.
- Verse 25: ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆಬುರುಜಿನ ಎದುರಿನ ಭಾಗವನ್ನು ಊಜೈಯ ಮಗ ಪಾಲಾಲನೂ ಇವನ ಆಚೆಯಲ್ಲಿ ಪರೋಷನ ಮಗ ಪೆದಾಯನೂ ಸರಿಪಡಿಸಿದರು.
- Verse 26: ಆ ಮೂಲೆಬುರುಜಿನ ಮತ್ತು ನೀರುಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಸ್ಥಾನ ಪರಿಚಾರಕರ ನಿವಾಸಸ್ಥಾನ.
- Verse 27: ಆ ದೊಡ್ಡ ಮೂಲೆಬುರುಜಿನ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ದುರಸ್ತಿಮಾಡಿದರು.
- Verse 28: ಯಾಜಕರು ಕುದುರೆಬಾಗಿಲಿನ ಆಚೆ ದಿಣ್ಣೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಸರಿಮಾಡಿದರು.
- Verse 29: ಇವರ ಆಚೆ, ಇಮ್ಮೇರನ ಮಗ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ದುರಸ್ತಿಮಾಡಿದನು. ಇವನ ಆಚೆ, ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು.
- Verse 30: ಇವನ ಆಚೆ ಶೆಲೆಮ್ಯನ ಮಗನಾದ ಹನನ್ಯ; ಗೋಡೆಯ ಇನ್ನೊಂದು ಭಾಗವನ್ನು ಸರಿಮಾಡಿದವನು ಚಾಲಫನ ಆರನೆಯ ಮಗನಾದ ಹಾನೂನ್; ಇವನ ಆಚೆ, ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್.
- Verse 31: ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ; ಇವನು ದಂಡುಕೂಡುವ ಬಾಗಿಲಿನ ಎದುರಿನಲ್ಲಿರುವ ದೇವಸ್ಥಾನ ಪರಿಚಾರಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ದುರಸ್ತಿಮಾಡಿದನು.
- Verse 32: ಈ ಮೂಲೆಯುಪ್ಪರಿಗೆಗೂ ಕುರಿಬಾಗಿಲಿಗೂ ನಡುವೆಯಿದ್ದ ಗೋಡೆಯನ್ನು ಸರಿಮಾಡಿದವರು ಅಕ್ಕಸಾಲಿಗರು ಹಾಗು ವರ್ತಕರು.