పరిశుద్ధ గ్రంథము
ಹಳೆಯ ಒಡಂಬಡಿಕೆ
1 ಸಮುವೇಲನು
19ನೇ ಅಧ್ಯಾಯ
- Verse 1: ದಾವೀದನನ್ನು ಕೊಲ್ಲಬೇಕೆಂದು ಸೌಲನು ತನ್ನ ಮಗ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
- Verse 2: ಆದುದರಿಂದ ಅವನು ದಾವೀದನಿಗೆ, “ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾರೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಿಗ್ಗೆ ಒಂದು ಗುಟ್ಟಾದ ಸ್ಥಳದಲ್ಲಿ ಅಡಗಿಕೊಂಡಿರು.
- Verse 3: ನನ್ನ ತಂದೆಯ ಬಳಿಯಲ್ಲಿದ್ದು ನಿನ್ನ ಬಗ್ಗೆ ಅವರೊಡನೆ ಮಾತಾಡಿ ಗೊತ್ತಾದ ವಿಷಯವನ್ನು ನೀನು ಅವಿತುಕೊಂಡಿರುವ ಸ್ಥಳಕ್ಕೆ ಬಂದು ತಿಳಿಸುವೆನು,” ಎಂದು ಹೇಳಿದನು.
- Verse 4: ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. “ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವು ನಿಮ್ಮ ಹಿತಕ್ಕಾಗಿಯೇ.
- Verse 5: ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯರನ್ನು ಕೊಂದನು; ಸರ್ವೇಶ್ವರ ಇಸ್ರಯೇಲರಿಗೆ ಮಹಾ ಜಯವನ್ನುಂಟುಮಾಡಿದರು. ನೀವೂ ಅದನ್ನು ನೋಡಿ ಸಂತೋಷಪಟ್ಟಿರಿ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿ ಅಪರಾಧಕ್ಕೆ ನೀವೇಕೆ ಗುರಿ ಆಗುತ್ತೀರಿ?” ಎಂದನು.
- Verse 6: ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. “ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ,” ಎಂದು ಪ್ರಮಾಣಮಾಡಿದನು.
- Verse 7: ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರೆದುತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲೇ ಇರುವಂತೆ ಏರ್ಪಾಡಾಯಿತು.
- Verse 8: ಫಿಲಿಷ್ಟಿಯರು ಮತ್ತೆ ಯುದ್ಧಕ್ಕೆ ಬಂದಾಗ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಪೂರ್ತಿಯಾಗಿ ಸೋಲಿಸಿ ಓಡಿಸಿಬಿಟ್ಟನು.
- Verse 9: ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಆಗ ಸರ್ವೇಶ್ವರನಿಂದ ಬಂದ ದುರಾತ್ಮವೊಂದು ಅವನನ್ನು ಆವರಿಸಿತು.
- Verse 10: ಒಡನೆ ಕಿನ್ನರಿಯನ್ನು ಬಾರಿಸುತ್ತಿದ್ದ ದಾವೀದನನ್ನು ಗೋಡೆಗೆ ಕಚ್ಚಿಕೊಳ್ಳುವಂತೆ ತಿವಿಯಬೇಕೆಂದು ಅವನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಫಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
- Verse 11: ಸೌಲನು ಕೂಡಲೆ ದೂತರನ್ನು ಕರೆಯಿಸಿ, “ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕು,” ಎಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ, “ನೀವು ಈ ರಾತ್ರಿಯೇ ತಪ್ಪಿಸಿಕೊಳ್ಳದೆ ಇದ್ದರೆ ನಾಳೆ ಬೆಳಿಗ್ಗೆ ಹತರಾಗುವಿರಿ,” ಎಂದು ಹೇಳಿ
- Verse 12: ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಿದಳು. ಅವನು ಓಡಿಹೋಗಿ ತಪ್ಪಿಸಿಕೊಂಡನು.
- Verse 13: ಅನಂತರ ಆಕೆ ಗೊಂಬೆಯೊಂದನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಮಾಡಿದ ತಲೆದಿಂಬನ್ನು ಇಟ್ಟು ಕಂಬಳಿಯನ್ನು ಹೊದಿಸಿದಳು.
- Verse 14: ಸೌಲನ ದೂತರು ದಾವೀದನನ್ನು ಹಿಡಿಯುವುದಕ್ಕೆ ಬಂದಾಗ ಅವಳು, “ಅವರಿಗೆ ಮೈ ಚೆನ್ನಾಗಿಲ್ಲ,” ಎಂದು ಹೇಳಿ ಕಳುಹಿಸಿದಳು.
- Verse 15: ಸೌಲನು ಪುನಃ ತನ್ನ ಆಳುಗಳಿಗೆ, “ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ನನ್ನ ಬಳಿಗೆ ತೆಗೆದುಕೊಂಡು ಬನ್ನಿ, ಅವನನ್ನು ಕೊಂದುಹಾಕುತ್ತೇನೆ,” ಎಂದು ಆಜ್ಞಾಪಿಸಿದನು.
- Verse 16: ಅವರು ಹೋಗಿ ನೋಡಲು, ಮುಖದ ಕಡೆ ಮೇಕೆಕೂದಲಿನಿಂದ ಮಾಡಿದ ದಿಂಬಾಗಿತ್ತು. ಹಾಸಿಗೆಯ ಮೇಲಿದ್ದುದು ಒಂದು ಗೊಂಬೆಯೆಂದು ತಿಳಿದುಬಂದಿತು.
- Verse 17: ಸೌಲನು ಮೀಕಳಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲವೆ?” ಎನ್ನಲು, ಆಕೆ ಅವನಿಗೆ, “’ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ’ ಎಂದು ಹೇಳಿದ,” ಎಂದಳು.
- Verse 18: ಹೀಗೆ ದಾವೀದನು ತಪ್ಪಿಸಿಕೊಂಡು ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದನು. ಸೌಲನು ತನಗೆ ಮಾಡಿದ್ದೆಲ್ಲವನ್ನೂ ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ಒಂದು ಮಠದಲ್ಲಿ ವಾಸವಾಗಿ ಇದ್ದರು.
- Verse 19: ದಾವೀದನು ರಾಮಾದ ಮಠದಲ್ಲಿ ಇರುವುದು ಸೌಲನಿಗೆ ಗೊತ್ತಾಯಿತು.
- Verse 20: ಕೂಡಲೆ ಅವನನ್ನು ಹಿಡಿದುತರುವುದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿಸಮೂಹವು ಪರವಶವಾಗಿ ಮಾತಾಡುವುದನ್ನೂ ಸಮುವೇಲನು ಅವರ ನಾಯಕನಾಗಿ ನಿಂತಿರುವುದನ್ನೂ ಕಂಡರು. ಆಗ ದೇವರ ಆತ್ಮ ಅವರ ಮೇಲೆಯೂ ಬಂದಿತು; ಅವರೂ ಪರವಶರಾಗಿ ಮಾತಾಡತೊಡಗಿದರು.
- Verse 21: ಸೌಲನಿಗೆ ಈ ವರ್ತಮಾನ ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು. ಇವರೂ ಪರವಶರಾದರು. ಮೂರನೆಯ ಸಾರಿ ಇನ್ನೂ ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಇವರೂ ಪರವಶರಾದರು.
- Verse 22: ಆಗ ಸೌಲನು ತಾನೇ ರಾಮಾಕ್ಕೆ ಹೋಗಬೇಕೆಂದು ಹೊರಟು ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, “ಸಮುವೇಲ ಹಾಗು ದಾವೀದನು ಎಲ್ಲಿರುತ್ತಾರೆ?” ಎಂದು ವಿಚಾರಿಸಿದನು. ಜನರು, “ರಾಮಾದ ಮಠದಲ್ಲಿ ಇದ್ದಾರೆ,” ಎಂದು ಉತ್ತರಕೊಟ್ಟರು.
- Verse 23: ಅವನು ಅಲ್ಲಿಂದ ರಾಮಾದ ಮಠಕ್ಕೆ ಹೋಗುವಾಗ ದೇವರ ಆತ್ಮ ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವವರೆಗೆ ಪರವಶನಾಗಿ ಮಾತಾಡುತ್ತಾ ಹೋದನು.
- Verse 24: ಅಲ್ಲಿಗೆ ಸೇರಿದ ಮೇಲೆ, ಅವನೂ ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪರವಶನಾಗಿ ಮಾತಾಡುತ್ತಾ ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಆದುದರಿಂದ “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೋ?” ಎಂಬ ಗಾದೆಯುಂಟಾಯಿತು.